ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಹಾಗೂ ಕನಸಿನ ಚಿತ್ರ ‘ಗಂಧದ ಗುಡಿ’ ಅ.28ಕ್ಕೆ ತೆರೆಗೆ ಬರಲಿದೆ. ಇಂದು ಈ ಸಾಕ್ಷ್ಯಚಿತ್ರದ ಟ್ರೇಲರ್ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಚ್ಚರಿ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ರೇಲರ್‌ನ ಲಿಂಕ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಪುನೀತ್ ಅವರನ್ನು ಸ್ಮರಿಸಿದ್ದಾರೆ. ‘ಅಪ್ಪು ವಿಶ್ವದ ಲಕ್ಷಾಂತರ ಜನರ ಹೃದಯದಲ್ಲಿದ್ದಾರೆ. ಅವರು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು, ಉತ್ಸಾಹಿಯಾಗಿದ್ದರು ಮತ್ತು ಅಪ್ರತಿಮ ಪ್ರತಿಭಾವಂತ. ಗಂಧದಗುಡಿ ಪ್ರಕೃತಿಗೆ, ಕರ್ನಾಟಕದ ಪ್ರಾಕೃತಿಕ ಸೌಂದರ್ಯಕ್ಕೆ, ಪರಿಸರ ಸಂರಕ್ಷಣೆಗೊಂದು ಕೊಡುಗೆ. ಅವರ ಈ ಸಾಹಸಕ್ಕೆ ಶುಭ ಹಾರೈಕೆಗಳು ’ ಎಂದು ಮೋದಿ ಬರೆದುಕೊಂಡಿದ್ದಾರೆ.
‘ಕರ್ನಾಟಕದ ಕಾಡು ಉಳಿಸಿ’ ಎಂಬುದನ್ನು ಚಿತ್ರದ ಟ್ರೇಲರ್ ಹೇಳುತ್ತಿದೆ. ಚಿತ್ರದ ನಿರ್ದೇಶಕ ಅಮೋಘವರ್ಷ ಅವರೊಂದಿಗೆ ಕಾಡಿನಲ್ಲಿ ಸಂಚರಿಸುವ ಪುನೀತ್, ಕಾಡಿನ ಸೊಬಗನ್ನು ನೋಡಿ ಅಚ್ಚರಿಗೊಳ್ಳುತ್ತ ಹೋಗುತ್ತಾರೆ. ನಮ್ಮ ಹತ್ತಿರದಲ್ಲಿಯೇ ಎಷ್ಟು ಅದ್ಬುತವಾದ ಪ್ರಾಕೃತಿಕ ಸಂಪತ್ತಿದೆ ಎಂಬುದನ್ನು ಹೇಳುತ್ತಾರೆ.
ಡಾ.ರಾಜ್‌ಕುಮಾರ್ ನಟಿಸಿದ್ದ ಸೂಪರ್ ಹಿಟ್ ಚಿತ್ರ ‘ಗಂಧದ ಗುಡಿ’ಯ ಹೆಸರನ್ನೇ ಈ ಚಿತ್ರಕ್ಕೂ ಇಡಲಾಗಿದೆ. ಆದರೆ ಇದೊಂದು ಸಾಕ್ಷ್ಯಚಿತ್ರವಾಗಿರುವುದರಿಂದ ಸಿನಿಮಾದ ಅನುಭವ ನೀಡುವುದಿಲ್ಲ. ಬದಲಿಗೆ ಕಾಡಿನಲ್ಲಿ ಒಂದು ತಣ್ಣನೆಯ ಪಯಣ. 'ನಿನಗೆ ಕೈಮುಗಿದು ಕೇಳ್ಕೊತ್ತೀನಿ, ಕಾಲಿಗೆ ಬಿದ್ದು ಕೇಳ್ಕೊತ್ತೀನಿ..ಅಭಯಾರಣ್ಯ ಉಳಿಸು, ಪ್ರಾಣಿಗಳನ್ನು ಉಳಿಸು..ಈ ಗಂಧದಗುಡಿಯನ್ನು ಉಳಿಸು...’ಇದು ‘ಗಂಧದಗುಡಿ’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ಡೈಲಾಗ್. ಇದೇ ಕನ್ನಡಿಗರ ನೆಚ್ಚಿನ ನಟ ‘ಅಪ್ಪು’ವಿನ ಮನವಿಯೂ, ಕನಸೂ. ಅಮ್ಮ, ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದಂದೇ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಕನಸು ತೆರೆಯ ಮೇಲೆ ಜನ್ಮತಳೆದಿತ್ತು. ಕರ್ನಾಟಕದ ಅದ್ಭುತ ತಾಣಗಳನ್ನು, ವನ್ಯಲೋಕವನ್ನು ಪರಿಚಯಿಸುವ ಹಾಗೂ ಅವುಗಳನ್ನು ಕಾಪಾಡುವ ಸಂದೇಶ ನೀಡುವ ನಿಟ್ಟಿನಲ್ಲಿ ಅಪ್ಪುವಿನ ಪಯಣ ಹೊಸ ‘ಗಂಧದಗುಡಿ’.
ಈ ಸಾಕ್ಷ್ಯ ಚಿತ್ರವನ್ನು ವೈಲ್ಡ್ ಕರ್ನಾಟಕ ಖ್ಯಾತಿಯ ನಿರ್ದೇಶಕ ಅಮೋಘವರ್ಷ ನಿರ್ದೇಶಿಸಿದ್ದಾರೆ. ಪುನಿತ್ ರಾಜ್‌ಕುಮಾರ್ ಕನಸಿನ ‘ಪಿಆರ್‌ಕೆ’ ನಿರ್ಮಾಣ ಸಂಸ್ಥೆಯೇ ಚಿತ್ರವನ್ನು ನಿರ್ಮಿಸಿದೆ.
2021ರ ಅಕ್ಟೋಬರ್ 29ರಂದು ಅಪ್ಪು ನಿಧನ ಹೊಂದಿದ್ದರು. ಹೀಗಾಗಿ ಈ ವರ್ಷ ಅಕ್ಟೋಬರ್ 28ರಂದು ‘ಗಂಧದ ಗುಡಿ’ಯನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.