‘ಮೂಕಜ್ಜಿಯ ಕನಸುಗಳು’ ಚಿತ್ರ ಎರಡು ಕೇಂದ್ರಗಳಲ್ಲಿ 50 ದಿನ ಪೂರೈಸಿರುವುದೇ ಅಲ್ಲದೆ ಅದನ್ನು ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ನೋಡಿರುವುದರಿಂದ ನಿರ್ದೇಶಕ, ನಿರ್ಮಾಪಕ ಪಿ.ಶೇಷಾದ್ರಿ ಫುಲ್‌ಖುಷ್ ಆಗಿದ್ದಾರೆ. ‘12 ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. 2 ಕೇಂದ್ರಗಳಲ್ಲಿ 50 ದಿನ ಪೂರೈಸಿದೆ. ಸಾಹಿತ್ಯ ಕೃತಿಗಳನ್ನು ಆಧರಿಸಿದ ಸದಭಿರುಚಿಯ ಸಿನಿಮಾಗಳನ್ನು ಜನ ನೋಡುವುದಿಲ್ಲ ಎನ್ನುವುದು ಸುಳ್ಳು’ ಎಂದಿದ್ದಾರೆ ಶೇಷಾದ್ರಿ.
ಈಗಗಾಂಧೀಜಿಯವರ ಬಾಲ್ಯದ ಕುರಿತ, ಅವರ ಹೊಸ ಚಿತ್ರ ‘ಮೋಹನದಾಸ’ ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡ, ಹಿಂದಿ, ಇಂಗ್ಲಿಷ್– ಹೀಗೆ ಮೂರು ಭಾಷೆಗಳಲ್ಲಿ ಚಿತ್ರೀಕರಿಸಿರುವ ‘ಮೋಹನದಾಸ’ ಬಹುತೇಕ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ.
‘ಮೂಕಜ್ಜಿ..’ ಗೆಲ್ಲುವುದಕ್ಕೆ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ‘ಶಿವರಾಮ ಕಾರಂತರ ಹೆಸರು, ಈ ಕಾದಂಬರಿಯನ್ನು ಬಹುತೇಕ ಅಧ್ಯಾಪಕರು, ವಿದ್ಯಾರ್ಥಿಗಳು ಮೊದಲೇ ಓದಿರುವುದು ಮತ್ತು ನನ್ನ ಪ್ರಯತ್ನ ಎಲ್ಲವೂ ಸೇರಿ ಈ ಯಶಸ್ಸು ಬಂದಿದೆ. ಆದರೆ ಕಾರಂತರ ಕುಂದಾಪುರದಲ್ಲಿ ಚಿತ್ರ ಅಷ್ಟಾಗಿ ಓಡಲಿಲ್ಲ ಎನ್ನುವುದು ಬೇಸರ ತಂದಿದೆ’ ಎನ್ನುವುದು ಶೇಷಾದ್ರಿ ಮಾತು.
‘ಮೂಕಜ್ಜಿ ಪ್ರಚಾರದ ಸಲುವಾಗಿ 10 ಸಾವಿರಕ್ಕಿಂತ ಹೆಚ್ಚು ಜನರನ್ನು ಭೇಟಿಯಾಗಿದ್ದೇನೆ. ಹಲವಾರು ಥಿಯೇಟರ್‌ಗಳಿಗೆ ಹೋಗಿ ಪ್ರೇಕ್ಷಕರ ಜೊತೆ ಮಾತನಾಡಿದ್ದೇನೆ. ಒಟ್ಟು 30 ಸಾವಿರಕ್ಕಿಂತ ಹೆಚ್ಚು ಜನರು ಸಿನಿಮಾ ನೋಡಿದ್ದಾರೆ. ಬುಕ್‌ಮೈ ಷೋನಲ್ಲಿ ಶೇ 97ರಷ್ಟು ರೇಟಿಂಗ್ ಬಂದಿರೋದು ನಮ್ಮ ಸಿನಿಮಾದ ಹೆಮ್ಮೆ. ಫೇಸ್‌ಬುಕ್, ವಾಟ್ಸಪ್ ಪ್ರಚಾರ ಸಾಕಷ್ಟು ನೆರವಾಗಿದೆ. ಪ್ರಚಾರವೂ ಸೇರಿ ಒಟ್ಟು ರೂ 70 ಲಕ್ಷ ಖರ್ಚಾಗಿದೆ. ಥಿಯೇಟರ್‌ಗಳಲ್ಲಿ ರೂ 40 ಲಕ್ಷ ಬಂದಿದೆ. ಸಬ್ಸಿಡಿ, ಪ್ರಶಸ್ತಿ, ಓಟಿಪಿ ಪ್ಲಾಟ್‌ಫಾರಂ ಮುಂತಾದ ಕಡೆಗಳಿಂದ ಆದಾಯದ ನಿರೀಕ್ಷೆ ಇದೆ. ನವ್ಯ ಚಿತ್ರ ಬ್ಯಾನರ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ಮಾಡೋದಕ್ಕೆ ಉತ್ಸಾಹ ಬಂದಿದೆ’ ಎನ್ನುತ್ತಾರೆ ಶೇಷಾದ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.