ಸಂಕಷ್ಟದಲ್ಲಿದ್ದವರನ್ನು ರಕ್ಷಿಸಲು ಹೋಗಿ ಪ್ರಾಣತೆತ್ತ ಕೇರಳದ ಲೀನು ಎಂಬ ವ್ಯಕ್ತಿಯ ತಾಯಿಗೆ ಮಾಲಿವುಡ್‌ನ ಖ್ಯಾತ ನಟಮೋಹನ್‌ಲಾಲ್ ಅವರು ‘ನಿಮ್ಮ ಮಗ ನಮ್ಮ ಮನದಲ್ಲಿದ್ದಾನೆ’ ಎಂದು ಉಲ್ಲೇಖಿಸಿ ಭಾವನಾತ್ಮಕ ಪತ್ರ ಬರೆದು ಸಾಂತ್ವನ ಹೇಳಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈಚೆಗೆ ಕೇರಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಲೀನು ಮುಂದಾಗಿದ್ದರು. ಆಗ ಪ್ರವಾಹದ ರಭಸಕ್ಕೆ ಸಿಲುಕಿ ಅವರು ಪ್ರಾಣ ಕಳೆದುಕೊಂಡಿದ್ದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಲೀನು ಕುಟುಂಬವು ದಿಕ್ಕು ತೋಚದೆ ಆತಂಕದಲ್ಲಿದೆ. ಈ ಬಗ್ಗೆ ಅರಿತ ಮೋಹನ್‌ಲಾಲ್ ಆ ಕುಟುಂಬಕ್ಕೆ ನೆರವಾಗುವ ಭರವಸೆ ನೀಡಿ ಅವರ ತಾಯಿಗೆ ಪತ್ರ ಬರೆದು ಮಾನವೀಯತೆ ಮೆರೆದಿದ್ದಾರೆ.
ಮೋಹನ್‌ಲಾಲ್ ಅವರೇ ಮುನ್ನಡೆಸುತ್ತಿರುವ ವಿಶ್ವಶಾಂತಿ ಫೌಂಡೇಷನ್ ಎಂಬ ಎನ್‌ಜಿಒ (ಸರ್ಕಾರೇತರ ಸಂಸ್ಥೆ) ವತಿಯಿಂದ ನೊಂದ ಆ ಕುಟುಂಬದ ನೆರವಿಗೆ ನಿಂತಿದ್ದಾರೆ. ಮೂಲಗಳ ಹೇಳುವ ಪ್ರಕಾರ, ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವ ಲೀನು ಕುಟುಂಬಕ್ಕೆ ಎನ್‌ಜಿಒ ವತಿಯಿಂದಲೇ ಹೊಸದಾಗಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಅಲ್ಲದೇ ಸಾಲದ ಸುಳಿಗೇನಾದರೂ ಆ ಕುಟುಂಬ ಸಿಲುಕಿದ್ದರೆ ಆ ಸಾಲವನ್ನು ತಾವೇ ಪಾವತಿಸುವುದಾಗಿಯೂ ಹೇಳಿದ್ದಾರೆ.
ಆ ತಾಯಿಗೆ ಮೋಹನ್ ಲಾಲ್ ಬರೆದಿರುವ ಪತ್ರದಲ್ಲಿ, ‘ಕೇರಳದ ಮೂರುವರೆ ಕೋಟಿ ಜನರ ಮನದಲ್ಲಿ ಲೀನು ಇನ್ನೂ ಜೀವಂತವಾಗಿ ನೆಲೆಸಿದ್ದಾರೆ’ ಎಂದು ಮೋಹನ್‌ಲಾಲ್ ಭಾವನಾತ್ಮಕವಾಗಿ ಬರೆದಿದ್ದಾರೆ.
‘ಯಾವ ಪದಗಳಿಂದಲೂ ದುಃಖದಲ್ಲಿರುವ ನಿಮ್ಮನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ ಎಂಬುದು ನನಗೆ ಅರಿವಿದೆ.ಯಾವುದೇ ಪದಗಳು ನಿಮ್ಮನ್ನು ದುಃಖದಿಂದ ಸಮಾಧಾನಪಡಿಸುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ, ಲೀನು ಅವರಂತಹ ಧೈರ್ಯಶಾಲಿ ಮಗನನ್ನು ಈ ಸಮಾಜಕ್ಕೆ ಕೊಟ್ಟಿದ್ದಾಗಿ ನನ್ನ ಸಹಾಯವನ್ನು ಇನ್ನೊಬ್ಬ ಮಗನ ವಾತ್ಸಲ್ಯವೆಂದು ಭಾವಿಸಿ’ ಎಂದು ಬರೆದಿದ್ದಾರೆ.
ಲೀನು ಕೇರಳದ ಬೀಪೂರ್‌ನವರು. ಮಳೆಯ ಭೀಕರತೆಗೆ ಸಿಲುಕಿದ್ದ ಲೀನು ಕುಟುಂಬವು ಬೀಪೂರ್‌ನ ಶಾಲೆಯೊಂದರ ಪಕ್ಕದಲ್ಲಿ ಗುಡಿಸಲು ಹಾಕಿಕೊಂಡು ವಾಸವಿತ್ತು. ಪ್ರವಾಹದ ವೇಳೆ ಚಾಲಿಯಾರ್ ನದಿ ಬಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಪ್ರವಾಹದ ಹೊಡೆತಕ್ಕೆ ಸಿಲುಕಿ ಅವರು ಪ್ರಾಣ ಕಳೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.