ನಟ ಮೋಹನ್‌ಲಾಲ್ ಮತ್ತು ಮೀನಾ ನಟಿಸಿದ್ದ ಮಲಯಾಳದ ‘ದೃಶ್ಯಂ’ ಚಿತ್ರ ತೆರೆಕಂಡಿದ್ದು 2013ರಲ್ಲಿ. ಇದು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿತ್ತು. ಜೀತು ಜೋಸೆಫ್ ನಿರ್ದೇಶಿಸಿದ್ದ ಈ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳಿಗೂ ರಿಮೇಕ್ ಆಯಿತು.
ಕಳೆದ ವರ್ಷ ಚೀನಾದಲ್ಲಿ ‘ಶೀಫ್ ವಿಥೌಟ್ ಶೆಫರ್ಡ್’ ಹೆಸರಿನಡಿ ರಿಮೇಕ್ ಆಗಿದ್ದು ಇದರ ಹೆಗ್ಗಳಿಕೆ. ಅಂದಹಾಗೆ ಚೀನಿ ಭಾಷೆಯಲ್ಲಿ ರಿಮೇಕ್ ಆದ ಮೊದಲ ಭಾರತೀಯ ಸಿನಿಮಾವೂ ಹೌದು.
ಕ್ರೈಮ್ ಥ್ರಿಲ್ಲರ್ ಚಿತ್ರ ಇದು. ಇತ್ತೀಚೆಗೆ 60 ವರ್ಷಗಳನ್ನು ಪೂರೈಸಿದ ಮೋಹನ್‌ಲಾಲ್ ‘ದೃಶ್ಯಂ 2’ ಚಿತ್ರವನ್ನು ಘೋಷಿಸಿದ್ದರು. ಟೀಸರ್ ಕೂಡ ಬಿಡುಗಡೆ ಮಾಡಿದ್ದರು. ಈಗ ನಟಿ ಮೀನಾ ಅವರೇ ಸ್ವೀಕೆಲ್‌ನಲ್ಲಿ ಮೋಹನ್‌ಲಾಲ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.
ಅಂದಹಾಗೆ ಇಂದು ಮೀನಾ ಅವರ ಜನ್ಮದಿನ. ಮೋಹನ್‌ಲಾಲ್ ಅವರು ಮೀನಾಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಜೊತೆಗೆ ‘ದೃಶ್ಯ 2’ ಸೆಟ್‌ಗೂ ನಿಮಗೆ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಆ್ಯಂಟನಿ ಪೆರುಂಬವೂರ್ ಬಂಡವಾಳ ಹೂಡಲಿದ್ದಾರೆ.
ಮಧ್ಯಮವರ್ಗದ ಕುಟುಂಬವೊಂದು ಜಡ್ಡುಗಟ್ಟಿದ ವ್ಯವಸ್ಥೆ ವಿರುದ್ಧ ಸೆಣಸಾಟ ನಡೆಸುವ ಥ್ರಿಲ್ಲರ್ ಕಥಾನಕ ಇದು. ‘ದೃಶ್ಯಂ’ನಲ್ಲಿ ಮೋಹನ್‌ಲಾಲ್ ಅವರು ಜಾರ್ಜ್‌ಕುಟ್ಟಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಪೊಲೀಸ್ ಅಧಿಕಾರಿಯ ಪುತ್ರನನ್ನು ಹತ್ಯೆ ಮಾಡಿದ್ದ ತನ್ನ ಪುತ್ರಿಯನ್ನು ರಕ್ಷಿಸುವ ಜವಾಬ್ದಾರಿ ತಂದೆಯ ಪಾತ್ರವದು. ಸ್ವೀಕೆಲ್‌ನಲ್ಲಿ ಜಾರ್ಜ್‌ಕುಟ್ಟಿಯ ಬದುಕಿನ ಸುತ್ತ ಕಥೆ ಹೆಣೆಯಲಾಗಲಿದೆ. ಅಂದಹಾಗೆ ಜೀತು ಜೋಸೆಫ್ ಅವರೇ ಇದನ್ನು ನಿರ್ದೇಶಿಸಲಿದ್ದಾರೆ.
ಕಳೆದ ತಿಂಗಳೇ ಇದರ ಶೂಟಿಂಗ್ ಶುರುವಾಗಬೇಕಿತ್ತು. ಕೋವಿಡ್–19 ಪರಿಣಾಮ ಮುಂದೂಡಿಕೆಯಾಗಿತ್ತು. ಈ ತಿಂಗಳ ಅಂತ್ಯದಲ್ಲಿ ಅಥವಾ ಅಕ್ಟೋಬರ್‌ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಕೊಚ್ಚಿಯಲ್ಲಿಯೇ ಇದರ ಬಹುತೇಕ ಭಾಗದ ಶೂಟಿಂಗ್ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.