ADVERTISEMENT

ಮೂಕಜ್ಜಿಗೆ ಮುಕ್ತಿ! | ನಿರ್ದೇಶಕ ಪಿ.ಶೇಷಾದ್ರಿ ಜತೆಗೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 19:30 IST
Last Updated 14 ನವೆಂಬರ್ 2019, 19:30 IST
ಮೂಕಜ್ಜಿಯ ಕನಸುಗಳು ಸಿನಿಮಾದ ಚಿತ್ರ
ಮೂಕಜ್ಜಿಯ ಕನಸುಗಳು ಸಿನಿಮಾದ ಚಿತ್ರ   

ಮೂಕಜ್ಜಿ ಚಿತ್ರ ದಡ ಸೇರಿಸಲು ಹೊರಟಿದ್ದೇವೆ. ಮೂಕಜ್ಜಿಯ ಅಭಿಮಾನಿಗಳು, ಕಾರಂತರ ಅಭಿಮಾನಿಗಳು ಸಾಕಷ್ಟು ಇದ್ದಾರೆ. ಅವರೆಲ್ಲರೂ ಈ ಚಿತ್ರ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ. ಕಲಾತ್ಮಕ ಚಿತ್ರವನ್ನು ಜನರು ನೋಡುವುದೇ ದೊಡ್ಡ ಪ್ರಶಸ್ತಿ ಎನ್ನುತ್ತಾರೆ ಪಿ.ಶೇಷಾದ್ರಿ.

ಡಾ. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಸಿನಿಮಾ ಆಗಿದೆ. ಈ ಚಿತ್ರವನ್ನು ಹತ್ತು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡದ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶಿಸಿದ್ದಾರೆ. ಈ ಚಿತ್ರವು ಈಗಾಗಲೇನ್ಯಾಷನಲ್‌ ಆರ್ಕೈವ್‌ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯ ಗರಿ ಮೂಡಿಸಿಕೊಂಡಿದೆ. ಅಲ್ಲದೇ ಕೆನಡಾದ ಟೊರೆಂಟೊ ಫಿಲ್ಮ್‌ಫೆಸ್ಟಿವಲ್‌, ಕೋಲ್ಕತ್ತಾ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡು, ಚಿತ್ರರಂಗದ ಪ್ರಾಜ್ಞರ ಮೆಚ್ಚುಗೆ ಗಿಟ್ಟಿಸಿದೆ. ಈ ಕಲಾತ್ಮಕ ಚಿತ್ರವು ಇದೇ 29ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಕುರಿತು ಶೇಷಾದ್ರಿ ಅವರು ಹಲವು ಮಾಹಿತಿಗಳನ್ನು ‘ಸಿನಿಮಾ ಪುರವಣಿ’ಯ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

‘ಮೂಕಜ್ಜಿಯ ಕನಸುಗಳು’ ಕಥೆ ನಿಗೂಢವಾದ ಲೈಂಗಿಕ ಸಮಸ್ಯೆಗೆ ಸಂಬಂಧಿಸಿದ್ದು. ಲೈಂಗಿಕ ಪ್ರಶ್ನೆಯನ್ನು, ಮೂರು ಸಾವಿರ ವರ್ಷಗಳ ಕಾಲದ ಭಾರತೀಯ ಪರಂಪರೆಯ ದೃಷ್ಟಿಯನ್ನು ಪ್ರಾಗೈತಿಹಾಸಿಕ ದಾಖಲೆಗಳೊಡನೆ ಕೆದಕಿ ತೋರಿಸಲು ಕೇವಲ 70-80 ವರ್ಷಗಳ ಕಾಲ ಬಾಳ್ವೆ ಮಾಡಿದ ಒಬ್ಬ ಮುದುಕಿಯನ್ನು ಬಳಸಿದೆ. ಸಾಂಪ್ರದಾಯಿಕ ಜೀವನದ ಜತೆಗೆ, ನಿಡುಗಾಲದ ಐತಿಹಾಸಿಕ ಜ್ಞಾನವನ್ನೂ ಅವಳಿಗೆ ಒದಗಿಸುವ ಸಲುವಾಗಿ ‘ಅತೀಂದ್ರಿಯ’ ದೃಷ್ಟಿ ಕೊಟ್ಟೆ. ಅದಕ್ಕೆ ಮುಖ್ಯ ಕಾರಣವೆಂದರೆ ‘ಗಂಡು-ಹೆಣ್ಣು’ ಅನಾದಿ ಕಾಲದಿಂದಲೂ ಹರಿದು ಬಂದ ಒಂದು ಸೃಷ್ಟಿ. ಮಾನವ ಕುಲ ಆ ಹಂತದ ಕೊನೆಯ ಸೋಪಾನ. ಅದನ್ನು ಕುರಿತ ವಿವಿಧ ಧರ್ಮ ದೃಷ್ಟಿಗಳನ್ನು ತಿಳಿಸುವ ಸಲುವಾಗಿ, ಮೂಕಜ್ಜಿಗೆ ನಾನು ‘ಕನಸುಗಾರಿಕೆ’ಯ ಶಕ್ತಿಯನ್ನೂ ಕೊಡಬೇಕಾಯಿತು ಎಂಬ ಕಾರಂತರ ಪೀಠಿಕೆಯೊಂದಿಗೆ ಶೇಷಾದ್ರಿ ಮಾತಿಗಿಳಿದರು.

ADVERTISEMENT

‘ಮೂಕಜ್ಜಿಯ ಕನಸುಗಳು’ ಸಿನಿಮಾ ಮಾಡುವ ಆಲೋಚನೆ ಬಂದಿದ್ದು ಹೇಗೆ?

ಈ ಸಿನಿಮಾ ಮಾಡುವ ಆಲೋಚನೆ ನನಗೆ ಗೊತ್ತಿದ್ದಂತೆ ಬಂದಿದ್ದು ನಾಲ್ಕೈದು ವರ್ಷಗಳ ಹಿಂದೆ. ಗೊತ್ತಿಲ್ಲದೇ ಬಂದದ್ದು ಎಂದರೆ ಸುಮಾರು 40 ವರ್ಷಗಳ ಹಿಂದೆ. ಏಕೆಂದರೆ, ನಾನು ಹೈಸ್ಕೂಲ್‌ನಲ್ಲಿ ಓದುತ್ತಿರುವಾಗ ‘ಮೂಕಜ್ಜಿಯ ಕನಸುಗಳು’ ಪುಸ್ತಕ ಓದಿದ್ದೆ. ಸ್ವಲ್ಪಮಟ್ಟಿಗೆ ಪುಸ್ತಕ ಅರ್ಥವಾಗಿತ್ತು. ಕೆಲವು ಭಾಗಗಳು ಅರ್ಥವಾಗಿರಲಿಲ್ಲ. ಮೂಕಜ್ಜಿ ಅನಂತರಾಯನನ್ನು ಏಕೆ ಛೇಡಿಸಿದ್ದು, ಅನಂತರಾಯನ ಮುಖವೇಕೆ ಕಪ್ಪಿಟ್ಟಿತು ಎಂದು ಪ್ರಶ್ನಿಸಿ‌ ಕಾರಂತರಿಗೆ ಪತ್ರ ಬರೆದಿದ್ದೆ. ಆಶ್ಚರ್ಯವೆನ್ನುವಂತೆ ಹತ್ತು ದಿನಗಳಲ್ಲಿ ಕಾರಂತರಿಂದ ನನಗೆ ಉತ್ತರ ಬಂದಿತ್ತು. ಅದರಲ್ಲಿ ಅವರು ‘ಅನಂತರಾಯನಿಗೆ ಇಟ್ಟುಕೊಂಡಿದ್ದು ಲೈಂಗಿಕ ಸಂಬಂಧ. ಅದು ಸೃಷ್ಟಿ ಕ್ರಿಯೆಗೆ ವಿರುದ್ಧವಾದ ಲೈಂಗಿಕ ಸಂಬಂಧ’ ಎಂದು ಬರೆದಿದ್ದರು. ಆ ಪತ್ರವನ್ನು ನಮ್ಮ ಶಿಕ್ಷಕರಿಗೆ ತೋರಿಸಿದಾಗ ನನ್ನನ್ನು ಹೊಗಳಿದ್ದರು. ನನಗೆ ಗೊತ್ತಿಲ್ಲದಂತೆಯೇ ಮೂಕಜ್ಜಿ ಆಗಿನಿಂದಲೇ ನನ್ನನ್ನು ಆವರಿಸಿದ್ದಳು ಎನಿಸುತ್ತದೆ. 2010ರಲ್ಲಿ ‘ಬೆಟ್ಟದ ಜೀವ’ ಚಿತ್ರ ಮಾಡಿದಾಗ, ನಾನು ನಿರೀಕ್ಷಿಸಿದ್ದಕ್ಕಿಂತಲೂ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ಆಗ ‘ಮೂಕಜ್ಜಿಯ ಕನಸುಗಳು’ ‌ಚಿತ್ರದ ಕನಸು ಮೊದಲಿಗೆ ಚಿಗುರಿತು. ಇದನ್ನು 2013–14ರ ವೇಳೆ ಒಮ್ಮೆ ಮಂಗಳೂರಿನಲ್ಲಿ ಸಾರ್ವಜನಿಕವಾಗಿಯೂ ಹೇಳಿದ್ದೆ. ಈ ಕಾದಂಬರಿಗೆ 2018ಕ್ಕೆ 50 ವರ್ಷ ತುಂಬಲಿದೆಎನ್ನುವ ಸಂಗತಿ ಗೊತ್ತಾದ ಮೇಲೆ ಚಿತ್ರ ಮಾಡುವ ನನ್ನ ಕನಸು ಕೈಗೂಡಿತು.

ಈ ಸಿನಿಮಾ ಮಾಡುವಾಗ ಎದುರಾದ ಸವಾಲುಗಳೇನು ?

ನಾನು ಈವರೆಗೆ 12 ಸಿನಿಮಾಗಳನ್ನು ಮಾಡಿದ್ದೇನೆ. ಅವೆಲ್ಲವುಗಳಿಗಿಂತಲೂ ಈ ಚಿತ್ರ ‌ಮಾಡುವಾಗ ನನ್ನ ಮುಂದೆ ದೊಡ್ಡ ಸವಾಲುಗಳು ಇದ್ದವು.ಮೂಕಜ್ಜಿಯ ಕನಸುಗಳನ್ನು ಹೇಗೆ ತೋರಿಸುವುದು? ಬರವಣಿಗೆ ಸುಲಭ. ಆದರೆ, ಅದನ್ನು ದೃಶ್ಯ ರೂಪದಲ್ಲಿ ಹಿಡಿಯುವುದು ಹೇಗೆ? 1968ರಲ್ಲಿ ಕಾರಂತರು ಸಲಿಂಗಕಾಮವನ್ನು ವಿರೋಧಿಸಿದ್ದಾರೆ. ಈಗ ಅದನ್ನು ಸುಪ್ರೀಂಕೋರ್ಟ್‌ ಸಕ್ರಮ ಮಾಡಿದೆ. ಈ ಅಂಶವನ್ನು ಇಲ್ಲಿ ಹೇಗೆ ತೋರಿಸುವುದು? ಇನ್ನು ನಾಗಿಯ ಕಥೆ, ಸೀನಪ್ಪನ ಕಥೆ ಬರುತ್ತವೆ. ಇವೆಲ್ಲವೂ ಒಂದೇ ಕಥೆಯಲ್ಲ, ಬೇರೆ ಬೇರೆ ಕಥೆಗಳು. ಇವೆಲ್ಲಕ್ಕೂ ಒಂದು ಬಂಧಕೊಡುವುದು ಹೇಗೆ?ಮೂಕಜ್ಜಿ ಶಿಲಾಯುಗ,ಮಧ್ಯಯುಗ, ಪುರಾಣ, ದೇವರ ಸೃಷ್ಟಿ... ಹೀಗೆ ಎಲ್ಲದರ ಬಗ್ಗೆಯೂ ಮಾತನಾಡುತ್ತಾಳೆ. ಇದೆಲ್ಲವನ್ನೂ ಎರಡು ಗಂಟೆಯ ದೃಶ್ಯದಲ್ಲಿ ಕಟ್ಟಿಕೊಡುವುದು ದೊಡ್ಡ ಸವಾಲಾಗಿತ್ತು. ಈ ಸವಾಲನ್ನು ನಾನು ದಾಟಿರುವುದು ಚಿತ್ರ ನೋಡಿದವರಿಗೆ ಗೊತ್ತಾಗುತ್ತದೆ.

ಈ ಸಿನಿಮಾಕ್ಕಾಗಿ ಸಿದ್ಧತೆ ಹೇಗಿತ್ತು?

1968ರ ಅವಧಿಯ ಕಾದಂಬರಿಗೆ ಬೇಕಾದ ಪರಿಕರ ಕಟ್ಟಲು ಸಾಕಷ್ಟು ಸಿದ್ಧತೆ ನಡೆಸಬೇಕಾಯಿತು. ಅದರಲ್ಲಿ ಕಲಾವಿದರನ್ನು ಹುಡುಕುವುದಷ್ಟೇ ಅಲ್ಲ, ಚಿತ್ರೀಕರಣಕ್ಕೆ ಬೇಕಾದ ಜಾಗಗಳನ್ನು ಹುಡುಕುವುದು ಕೂಡ ಕಠಿಣ ಸವಾಲಾಗಿತ್ತು. ಅಶ್ವತ್ಥಕಟ್ಟೆ, ಕಥೆ ಹೇಳುವ ಅಜ್ಜಿ, ಪುರಾತನ ಮನೆ, ಗುಹೆ, ನಾಗನಕಾಲು ಬರೆ ಜಾಗಕ್ಕೆ ಸಾಕಷ್ಟು ಹುಡುಕಾಡಿದೆವು. ಅಶ್ವತ್ಥ ಕಟ್ಟೆಗೆ ನೂರಾರು ಅರಳಿಮರಗಳನ್ನುನೋಡಿದೆವು. ಕೊನೆಗೂ ನಮ್ಮ ಕಲ್ಪನೆಯ ಅರಳಿಮರ ಸಿಗಲೇ ಇಲ್ಲ.

ಕಾದಂಬರಿ ವಸ್ತು– ಪಾತ್ರಗಳಿಗೆ ನ್ಯಾಯ ದಕ್ಕಿಸಿದ ತೃಪ್ತಿ ಸಿಕ್ಕಿದೆಯಾ?

ಖಂಡಿತಾ ನ್ಯಾಯ ದಕ್ಕಿಸಿಕೊಟ್ಟಿದ್ದೇನೆ. ಕಾದಂಬರಿ ಓದುವಾಗ ಇನ್ಯಾವುದೋ ಅಜ್ಜಿಯ ಚಿತ್ರಣ ಬರಬಹುದು. ಸಾಹಿತ್ಯ ಮಾಧ್ಯಮವು ದೃಶ್ಯ ಮಾಧ್ಯಮಕ್ಕೆ ಬಂದಾಗ ಅದು ಜೆರಾಕ್ಸ್‌ ಕಾಪಿಯಾಗಬಾರದು. ಸಾಹಿತ್ಯದ ಭಾಷೆಯೇ ಬೇರೆ, ಸಿನಿಮಾ ಭಾಷೆಯೇ ಬೇರೆ. ಸಾಹಿತ್ಯವನ್ನು ದೃಶ್ಯ ಮಾಧ್ಯಮಕ್ಕೆ ತರುವಾಗ ಅದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದೇನೆ.

ಕಾರಂತರ ಮೂಕಜ್ಜಿ, ತಲೆ ಬೋಳಿಸಿದ, ಕೆಂಪು ಸೀರೆ ಧರಿಸಿದ ಅಜ್ಜಿಯಾಗಿರಬಹುದು. ಆದರೆ, ನಾನು ಉದ್ದೇಶ ಪೂರ್ವಕ ಆ ರೀತಿ ಮಾಡಲಿಲ್ಲ. ಮೂಕಜ್ಜಿಗೆ ತಲೆಗೂದಲು ಉಳಿಸಿದ್ದೇನೆ. ಇದಕ್ಕೆ ಕಾದಂಬರಿಯಲ್ಲೇ ಉತ್ತರ ಸಿಗುತ್ತದೆ. ಮೂಕಜ್ಜಿ ಎಲ್ಲದರ ಬಗ್ಗೆಯೂ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತಾಳೆ. ಹಾಗಾಗಿ ನನ್ನ ಮೂಕಜ್ಜಿ ನಿಜವಾದ ಬಂಡಾಯದ ಮೂಕಜ್ಜಿ.

ಪಾತ್ರಗಳಿಗೆ ಕಲಾವಿದರ ಆಯ್ಕೆ ಹೇಗಿತ್ತು...

ಒಂದು ಪಾತ್ರಕ್ಕೆ ನೂರಕ್ಕೆ ನೂರರಷ್ಟು ಹೊಂದಿಕೆಯಾಗುವವರು ಸಿಗುವುದಿಲ್ಲ. ಮೂಕಜ್ಜಿ ಪಾತ್ರಕ್ಕೆ ಅಜ್ಜಿ ಹುಡುಕಲೂ ತುಂಬಾ ಶ್ರಮಪಟ್ಟೆವು. ಈ ಚಿತ್ರಕ್ಕೆ ಸತ್ಯಜಿತ್‌ ರೇ ಅವರ ‘ಪತೇರ್‌ ಪಾಂಚಾಲಿ’ ಸಿನಿಮಾದಲ್ಲಿರುವಂತಹ ಅಜ್ಜಿಯಂತವರು ಬೇಕಾಗಿತ್ತು. ಮೂಕಜ್ಜಿಗೆ ಹೊಂದಿಕೆಯಾಗುವಂತೆ ಜಯಶ್ರೀ ಸಿಕ್ಕಿದರು. ಅವರು ತುಂಬಾ ಒಳ್ಳೆಯ ಕಲಾವಿದೆ. ಇನ್ನು ನಾಗಿ, ಸೀನಪ್ಪ, ರಾಮಣ್ಣ, ಮಗು ಚಂದ್ರಾಪಾತ್ರಗಳ ಚಿತ್ರಣ ನಮ್ಮ ಕಣ್ಮುಂದೆ ಬಂದಿರುವುದಿಲ್ಲ. ಉಡುಪಿ, ಕುಂದಾಪುರದಲ್ಲಿ ಸಾಕಷ್ಟು ಆಡಿಷನ್‌ ನಡೆಸಿ ಈ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡಲಾಯಿತು.

ಪ್ರಶಸ್ತಿ ಮತ್ತು ಫಿಲ್ಮ್‌ ಫೆಸ್ಟಿವಲ್‌ಗೆ ಚಿತ್ರವು ಆಯ್ಕೆಯಾದ ಬಗ್ಗೆ ಹೇಳಿ...

ಕೆಲವು ವಿಚಾರಗಳ ಬಗ್ಗೆ ಮಾತನಾಡಲು ತುಂಬಾ ಬೇಸರವಾಗುತ್ತದೆ. ಒಂದು ಚಿತ್ರಕ್ಕೆ ಪ್ರಶಸ್ತಿ ಬಂದಿದೆ ಎಂದರೆ ಅದುಗೌರವದ ಸಂಕೇತವಾಗಿ ಉಳಿದಿಲ್ಲ, ಅನುಮಾನದಿಂದ ನೋಡುವ ಪರಿಸ್ಥಿತಿ ಇದೆ.ಪ್ರಶಸ್ತಿ ವಿಜೇತ ಮತ್ತು ಕಲಾತ್ಮಕ ಸಿನಿಮಾಗಳು ನೋಡಲು ಯೋಗ್ಯವಲ್ಲ ಎನ್ನುವ ಮಾತು ಜನಸಾಮಾನ್ಯರಲ್ಲೂ ನಿಂತುಬಿಟ್ಟಿದೆ. ಪ್ರಶಸ್ತಿ ಎನ್ನುವುದು ಸಿನಿಮಾಗಳಿಗೆ ಪ್ಲಸ್‌ ಪಾಯಿಂಟ್‌ಗಿಂತ ಮೈನಸ್ ಪಾಯಿಂಟ್‌ ಆಗುತ್ತಿದೆ.70ರ ದಶಕದಲ್ಲಿ ಕಲಾತ್ಮಕ ಚಿತ್ರಗಳನ್ನು ನೋಡುವ ಒಂದು ದೊಡ್ಡ ವರ್ಗವೇ ಇತ್ತು.ಕಲಾತ್ಮಕ ಚಿತ್ರಗಳಲ್ಲಿ ಒಳ್ಳೆಯ ಅಭಿರುಚಿ ಇದೆಎನ್ನುವುದನ್ನು ಈಗ ನಾವು ಮತ್ತೆ ಸಾಧಿಸಿ ತೋರಿಸಬೇಕಾಗಿದೆ.

ಮುಖ್ಯ ಚಿತ್ರಮಂದಿರಗಳಲ್ಲಿ ಕಲಾತ್ಮಕ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಹೇಳಿ?

ಕಲಾತ್ಮಕ ಚಿತ್ರಗಳ ನಿರ್ಮಾಣ, ಬಿಡುಗಡೆ ಇಂದು ದೊಡ್ಡ ಸವಾಲಾಗಿದೆ. ಸರ್ಕಾರ, ಸಂಘಸಂಸ್ಥೆಗಳು ಬೆನ್ನಿಗೆ ನಿಂತರಷ್ಟೇ ಈ ಕೆಲಸ ಸುಲಭ ಅಷ್ಟೇ. ನಾವು ಒಳ್ಳೆಯ ಅಡುಗೆ ಮಾಡಿಟ್ಟಾಗ ಅದನ್ನು ಯಾರಾದರೂ ಸವಿಯಬೇಕಲ್ಲವೇ? ಹಾಗೆಯೇ ಒಳ್ಳೆಯ ಚಿತ್ರ ಮಾಡಿದಾಗ ಅದು ಹೆಚ್ಚು ಜನರಿಗೆ ತಲುಪಬೇಕು. ಪ್ರತಿ ವಾರ ಎಂಟೊಂಬತ್ತು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇವುಗಳ ಮಧ್ಯೆ ಮೂಕಜ್ಜಿ ಕಳೆದುಹೋಗಬಾರದು. ಕಲಾತ್ಮಕ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆ ಇರಬಹುದು. ಆದರೆ, ಖಂಡತುಂಡವಾಗಿ ನೋಡುವವರೇ ಇಲ್ಲ ಎನ್ನುವಂತಿಲ್ಲ. ಕಲಾತ್ಮಕ ಚಿತ್ರವನ್ನು ನೋಡುವಂತಹ ಒಂದು ವರ್ಗ ಇದ್ದೇ ಇದೆ. ಚಿತ್ರಮಂದಿರವನ್ನು ಕಲಾತ್ಮಕ ಚಿತ್ರಗಳಿಗೆ ಒದಗಿಸಿಕೊಳ್ಳುವುದು ಒಂದು ಸವಾಲದರೆ ಇನ್ನು ಪ್ರಚಾರ ಕೂಡ ಅಷ್ಟೇ ದೊಡ್ಡ ಸವಾಲಿನದಾಗಿದೆ. ಕೆಜಿಎಫ್‌ನಂತಹ ದೊಡ್ಡ ಚಿತ್ರಗಳ ಜತೆಗೆ ನಾವು ಪೈಪೋಟಿ ನಡೆಸಿ ಪ್ರಚಾರ ಮಾಡಲು, ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ. ನಾವು ಮಾಧ್ಯಮಗಳು, ಜನಸಮೂಹದ ಬಾಯಿಮಾತಿನ ಪ್ರಚಾರವನ್ನು ಅವಲಂಬಿಸಿಕೊಳ್ಳಬೇಕಾಗಿದೆ. ಸಾಹಿತ್ಯಾಸಕ್ತರನ್ನು ತಲುಪಲು ನಾವು ಪ್ರಯತ್ನಿಸುತ್ತಿದ್ದು, ಎಲ್ಲರ ಸಹಕಾರದಿಂದ ‘ಮೂಕಜ್ಜಿಯ ಕನಸುಗಳು’ ಚಿತ್ರವನ್ನು ಒಂದು ದಡ ಮುಟ್ಟಿಸಲು ಪ್ರಯತ್ನಿಸುತ್ತಿದ್ದೇವೆ.

ಮುಂದಿನ ಯೋಜನೆ ಬಗ್ಗೆ ಹೇಳಿ...

ಜರ್ಮನಿಯಿಂದ ಕರ್ನಾಟಕಕ್ಕೆಬಂದ ಪಾದ್ರಿ ಫರ್ಡಿನೆಂಡ್‌ ಕಿಟೆಲ್‌ ಕನ್ನಡ ಕಲಿತು, ಕನ್ನಡದ ವ್ಯಾಕರಣ ನಿಘಂಟು ಬರೆದ ಯಶೋಗಾಥೆಕುರಿತು ಚಿತ್ರ ಮಾಡುವ ಕನಸು ಇದೆ. ಕಿಟೆಲ್‌ ನನ್ನನ್ನು ನಿದ್ದೆಯಲ್ಲೂ ಕಾಡುತ್ತಿದ್ದಾರೆ. ಒಳ್ಳೆಯ ಕನಸುಗಳಿಗೆ, ಒಳ್ಳೆಯ ಪ್ರಯತ್ನಗಳಿಗೆ ಪ್ರಪಂಚದ ಎಲ್ಲ ಶಕ್ತಿಗಳು ಕೈಜೋಡಿಸುತ್ತವೆ ಎನ್ನುವ ಮಾತಿದೆ. ನಾನು ಆಶಾವಾದಿ. ಈ ಕನಸು ಕೈಗೂಡುವ ನಿರೀಕ್ಷೆಯಲ್ಲಿದ್ದೇನೆ. ಹಾಗೆಯೇ ಮಿರ್ಜಿ ಅಣ್ಣಾ ರಾಯರ ಅವರ ‘ನಿಸರ್ಗ’ ಕಾದಂಬರಿ ಮತ್ತು ರಾವ್‌ ಬಹದ್ದೂರ್‌ ‘ಗ್ರಾಮಾಯಣ’ವನ್ನೂತೆರೆಗೆ ತರುವ ಯೋಜನೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.