ADVERTISEMENT

ಭಾರತದ ಬಹು ನಿರೀಕ್ಷಿತ ಚಿತ್ರ: 1ನೇ ಸ್ಥಾನಕ್ಕೇರಿದ 'ಪುಷ್ಪ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜೂನ್ 2021, 6:27 IST
Last Updated 29 ಜೂನ್ 2021, 6:27 IST
ಪುಷ್ಪ ಚಿತ್ರದ ಪೋಸ್ಟರ್‌
ಪುಷ್ಪ ಚಿತ್ರದ ಪೋಸ್ಟರ್‌   

ಬೆಂಗಳೂರು: ರಕ್ತಚಂದನ ಚೋರರ ಕಥೆಯುಳ್ಳ ತೆಲುಗು ಸಿನಿಮಾ 'ಪುಷ್ಪ' ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ 1ನೇ ಸ್ಥಾನವನ್ನು ಅಲಂಕರಿಸಿದೆ. ಐಎಂಡಿಬಿಯ ಪರಿಷ್ಕೃತ ಪಟ್ಟಿಯಲ್ಲಿ ಪ್ರಭಾಸ್‌ ನಟನೆಯ ರಾಧೆ ಶ್ಯಾಮ್‌ ಚಿತ್ರವು ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಪೃಥ್ವಿರಾಜ್‌ ಸುಕುಮಾರನ್‌ ಅಭಿನಯದ ಕೋಲ್ಡ್‌ ಕೇಸ್‌ ಟಾಪ್‌ 10ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ರಾಕಿಂಗ್‌ ಸ್ಟಾರ್‌ ಯಶ್‌ ಅವರ ಕೆಜಿಎಫ್‌ 2 ಕೆಲವು ದಿನಗಳ ಹಿಂದೆ ಐಎಂಡಿಬಿಯ ಬಹು ನಿರೀಕ್ಷಿತ ಸಿನಿಮಾ ಪಟ್ಟಿಯಲ್ಲಿ ಟಾಪ್‌ ಸ್ಥಾನ ಕಾಯ್ದುಕೊಂಡಿತ್ತಾದರೂ, ಪ್ರಸ್ತುತ ಟಾಪ್‌-10 ಪಟ್ಟಿಯಿಂದ ಹೊರಬಿದ್ದಿದೆ.

ತೆಲುಗಿನ ಡಾನ್ಸಿಂಗ್‌ಸ್ಟಾರ್‌ ನಟ ಅಲ್ಲು ಅರ್ಜುನ್‌ ಮತ್ತು ಸಹಜ ಅಭಿನಯದಿಂದ ಮನೆಮಾತಾಗಿರುವ ಮಲಯಾಳಂನ ಫಹದ್‌ ಫಾಜಿಲ್‌ ನಟಿಸಿರುವ ಪುಷ್ಪ ಚಿತ್ರವನ್ನು ದಕ್ಷಿಣ ಭಾರತವಷ್ಟೇ ಅಲ್ಲ ಇಡೀ ರಾಷ್ಟ್ರದ ಚಿತ್ರಾಭಿಮಾನಿಗಳು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಕೊಡಗಿನ ಬೆಡಗಿ ರಷ್ಮಿಕಾ ಮಂದಣ್ಣ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ಮತ್ತಷ್ಟು ನಿರೀಕ್ಷೆಗೆ ಕಾರಣವಾಗಿದೆ.

ADVERTISEMENT

ಸುಕುಮಾರ್‌ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ 'ಪುಷ್ಪ' ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಸೂಪರ್‌ ಹಿಟ್‌ ಚಿತ್ರಗಳಾದ ರಂಗಸ್ಥಳಂ 1985, ಆರ್ಯಾ, ನಾನಕು ಪ್ರೇಮತೊ ನಿರ್ದೇಶಿಸಿರುವ ಸುಕುಮಾರ್‌ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ. ಚಿತ್ರದಲ್ಲಿ ಪ್ರಕಾಶ್‌ ರಾಜ್‌, ಜಗಪತಿ ಬಾಬು, ವೆನ್ನೆಲಾ ಕಿಶೋರ್‌ ಮುಂತಾದವರು ಪಾತ್ರ ನಿರ್ವಹಿಸಿದ್ದಾರೆ.

ಟಾಪ್‌ 2ನೇ ಸ್ಥಾನದಲ್ಲಿರುವ ರಾಧೆ ಶ್ಯಾಮ ಚಿತ್ರಕ್ಕೆ ಕೆಕೆ ರಾಧಾಕೃಷ್ಣ ಕುಮಾರ್‌ ನಿರ್ದೇಶನವಿದೆ. ಪೂಜಾ ಹೆಗ್ಡೆ ಮತ್ತು ಭಾಗ್ಯಶ್ರೀ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಜಗಪತಿ ಬಾಬು, ಮುರುಳಿ ಶರ್ಮಾ, ಜಯರಾಂ ಮುಂತಾದವರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.