ವ್ಯವಸ್ಥೆಯೊಂದಿಗಿನ ಸಂಘರ್ಷಕ್ಕೆ ತುತ್ತಾದ ಹುಡುಗನ ಹೋರಾಟದ ಕಥೆ ‘19.20.21’. ಈ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಮಂಸೋರೆ ಅವರ ಬಹು ನಿರೀಕ್ಷಿತ ಚಿತ್ರವಿದು. ಟ್ರೈಲರ್ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ಏನಿದು ಕಥೆ?
‘ಕರಾವಳಿಯಲ್ಲಿ ಎರಡು ದಶಕಗಳ ಕಾಲ ಒಂದು ಸಮುದಾಯ ಅನುಭವಿಸಿದ ನೋವು, ಆ ನೋವಿನ ವಿರುದ್ಧ ನಡೆಸಿದ ಹೋರಾಟ ಈ ಸಿನಿಮಾಕ್ಕೆ ಸ್ಫೂರ್ತಿ. ಈ ಘಟನೆಗೆ ಸಂಬಂಧಿಸಿದಂತೆ 9 ವರ್ಷಗಳಿಂದ ಅಧ್ಯಯನ ಮಾಡಿದ್ದೇನೆ. 2021ರಲ್ಲಿ ಘಟನೆಗೆ ಸಂಬಂಧಿಸಿದ ತೀರ್ಪು ಬಂದ ಮೇಲೆ ಸಿನಿಮಾ ಮಾಡಲು ನಿರ್ಧರಿಸಿದೆವು. ನಾನು, ವೀರೇಂದ್ರ ಮಲ್ಲಣ್ಣ ಮತ್ತು ಸಂತೋಷ್ ಮೂರು ಜನ ಈ ಘಟನೆಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿ ಸ್ಕ್ರಿಪ್ಟ್ ಮಾಡಿದ್ದೇವೆ’ ಎಂದರು ಮಂಸೋರೆ. ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹಾಗೂ ನಾದಬ್ರಹ್ಮ ಹಂಸಲೇಖ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
‘ಸಂವಿಧಾನದ ಹಿನ್ನೆಲೆ ಇಟ್ಟುಕೊಂಡು ಶೀರ್ಷಿಕೆ ಇಟ್ಟಿರುವುದು ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು. ಇದೇ ಸಂದರ್ಭದಲ್ಲಿ ಸಿನಿಮಾ ಎಂಬ ಪ್ರಚಂಡ ಮಾಧ್ಯಮದ ಮೂಲಕ ಮಂಸೋರೆ ‘19.20.21’ ಚಿತ್ರದ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತಿದ್ದಾರೆ’ ಎಂದರು ಹಂಸಲೇಖ.
‘ಚಿತ್ರದ ಮೂಲಕ ಸಮಾಜ, ಸರ್ಕಾರ, ವ್ಯವಸ್ಥೆಗೆ ಬೇಕಾಗಿರುವ ಸಿನಿಮಾವನ್ನು ಮಂಸೋರೆ ಹಾಗೂ ಅವರ ತಂಡ ನೀಡಿದೆ ಎನ್ನಿಸುತ್ತದೆ. ಮಂಸೋರೆ ಅವರ ಬರವಣಿಗೆ, ಮಾಡುವ ಸಿನಿಮಾಗಳು ಸಮಾಜದಲ್ಲಿ ಬದಲಾವಣೆಗೆ ಸಾಕ್ಷಿಯಾಗಿವೆ. ಸಮಾಜದಲ್ಲಿ ಘಾತುಕ ಶಕ್ತಿಗಳಾಗಿ ಕೆಲಸ ಮಾಡಲು ಹೊರಟವರು ಈ ಸಿನಿಮಾ ನೋಡಿದ ಮೇಲೆ ವಾಪಾಸ್ ಸಾಮಾಜಿಕ ನ್ಯಾಯದ ಪರವಾಗಿ ಬರುದ ಸಾಧ್ಯತೆ ತುಂಬಾ ಇದೆ’ ಎಂದರು ಅಕ್ಕೈ.
ದೇವರಾಜ್ ಈ ಚಿತ್ರದ ನಿರ್ಮಾಪಕರು. ಸತ್ಯ ಹೆಗಡೆ ಸಹ ನಿರ್ಮಾಪಕರು. ಚಿತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ. ಮುಖ್ಯ ಭೂಮಿಕೆಯಲ್ಲಿದ್ದಾರೆ. ಬಾಲಾಜಿ ಮನೋಹರ್, ಸಂಪತ್, ಎಂ.ಡಿ.ಪಲ್ಲವಿ, ವಿಶ್ವಕರ್ಣ, ಮಹದೇವ್ ಹಡಪದ್, ಉಗ್ರಂ ಸಂದೀಪ್ ತಾರಾಗಣದಲ್ಲಿದ್ದಾರೆ. ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ. ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.