ADVERTISEMENT

90ರ ಹರೆಯಕ್ಕೆ ಕಾಲಿಟ್ಟ ಸಿನಿಮಾ ನಿರ್ದೇಶಕ ಎಂ.ಎಸ್‌. ಸತ್ಯು

ಕೆ.ಎಂ.ಸಂತೋಷ್‌ ಕುಮಾರ್‌
Published 6 ಜುಲೈ 2020, 19:30 IST
Last Updated 6 ಜುಲೈ 2020, 19:30 IST
ಎಂ.ಎಸ್. ಸತ್ಯು
ಎಂ.ಎಸ್. ಸತ್ಯು   

ಹಿರಿಯ ರಂಗಕರ್ಮಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಹಾಗೂ ಕಲಾ ನಿರ್ದೇಶಕ ಎಂ.ಎಸ್‌. ಸತ್ಯು ಅವರು ಈಗ 90ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಸೋಮವಾರ(ಜುಲೈ 6) ಅವರಿಗೆ 90ನೇ ಜನ್ಮದಿನದ ಸಂಭ್ರಮ ಮತ್ತು ಅವರ ಅಭಿಮಾನಿಗಳ ಪಾಲಿಗೂ ಖುಷಿಯ ಸಂಗತಿ. ಮೈಸೂರಿನವರಾದ ಈ ಹಿರಿಯ ಜೀವ ಭಾರತೀಯ ಸಿನಿಮಾ ರಂಗಕ್ಕೆ ಮತ್ತು ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ. ಕಿರುತೆರೆ, ಕಿರುಚಿತ್ರ ನಿರ್ಮಾಣದಲ್ಲೂ ಕೈಆಡಿಸಿದ ಖ್ಯಾತಿಯೂ ಅವರದು. ಈಗಲೂ ಅವರಿಗೆಸಿನಿಮಾ ನಿರ್ದೇಶನ ಮಾಡುವ ಆಸಕ್ತಿ, ಹಂಬಲ ಒಂದಿನಿತೂ ಕುಂದಿಲ್ಲ. ಆದರೆ, ತಮ್ಮ ಅಭಿರುಚಿ, ಆಸಕ್ತಿ ಹಾಗೂ ಆದ್ಯತೆಯ ಹೊಸ ಅಲೆಯ ಚಿತ್ರಗಳ ನಿರ್ಮಾಣಕ್ಕೆ ನಿರ್ಮಾಪಕರು ಅಷ್ಟಾಗಿ ಮುಂದೆ ಬರುತ್ತಿಲ್ಲ ಎನ್ನುವ ಕೊರಗು ಅವರನ್ನು ಸಣ್ಣಗೆ ಕಾಡುತ್ತಿದೆ.

ರಿಲಯನ್ಸ್ ಬಿಗ್‌ ಪಿಕ್ಚರ್ಸ್‌ ನಿರ್ಮಾಣದಲ್ಲಿ ಮೂಡಿಬಂದ ‘ಇಜ್ಜೋಡು’ ಚಿತ್ರ ಸತ್ಯು ಅವರು ನಿರ್ದೇಶಿಸಿದ ಕೊನೆಯ ಚಿತ್ರ. ಇಂತಹ ಸಹಭಾಗಿತ್ವ ಮತ್ತು ನೆರವು ಮತ್ತೆ ಯಾವುದೇ ಕಾರ್ಪೋರೇಟ್‌ ಕಂಪನಿಗಳಿಂದ, ನಿರ್ಮಾಪಕರಿಂದಲೂ ಸಿಗಲಿಲ್ಲ. ಸದ್ಯ ಸಿನಿಮಾ ಮಾಡಲು ಪರಿಸ್ಥಿತಿ ಪೂರಕವಾಗಿಲ್ಲ. ಯಾತಕ್ಕಾಗಿ ಸಿನಿಮಾ ಮಾಡಬೇಕು ಎನಿಸಿದೆ ಎಂದು ಅವರು‘ಪ್ರಜಾಪ್ಲಸ್‌’ ಜತೆಗೆ ಮಾತಿಗಾರಂಭಿಸಿದರು.

ಸಿನಿಮಾ ಸ್ಕ್ರಿಪ್ಟ್‌ ಬಗ್ಗೆ ಮಾತು ಹೊರಳಿದಾಗ, ‘ಸ್ಕ್ರಿಪ್ಟ್‌ ಮಾಡಿ ಏನು ಪ್ರಯೋಜನ(ನಗು)? ಸಿನಿಮಾ ಮಾಡುವ ಆಸೆ ಇದೆ. ಆದರೆ, ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ‌ ಪರಿಸ್ಥಿತಿಯೂ ಪೂರಕವಾಗಿಲ್ಲ’ ಎಂದು ನೇರವಾಗಿ ಹೇಳಿದರು.

ADVERTISEMENT

ಹಾಗಾದರೆ ಸತ್ಯು ಅವರು ಸಿನಿಮಾರಂಗದಿಂದ ನಿವೃತ್ತಿ ಪಡೆದರಾ? ಎಂಬ ಪ್ರಶ್ನೆ ಮುಂದಿಟ್ಟಾಗ, ‘ನಿರ್ಮಾಪಕರು ಈಗಲೂ ಬರುತ್ತಾರೆ. ಆದರೆ, ಬಂದವರೆಲ್ಲ ಮಾತಿಗೆ ಸೀಮಿತವಾಗುತ್ತಿದ್ದಾರೆ. ನಾವು ಮಾಡುವಂತಹ ಸಿನಿಮಾ ಬೆಂಬಲಿಸುವವರು ಬಹಳ ಕಡಿಮೆ ಜನ ಇದ್ದಾರೆ. ಹಳೇ ಕಥೆ, ಹಳೇ ಸನ್ನಿವೇಶ, ಹಳೆಯ ಆಟಿಟ್ಯೂಡ್‌, ಕಮರ್ಷಿಯಲ್‌ ಅಂಶ ಇಷ್ಟೇ ಅವರ ಆಲೋಚನೆಗಳು. ಅಂತಹ ಸಿನಿಮಾಗಳನ್ನು ಮಾಡಿ ಏನು ಪ್ರಯೋಜನ? ಬೇಕಾದಷ್ಟು ಮಂದಿ ಅಂತಹ ಸಿನಿಮಾ ಮಾಡುತ್ತಲೇ ಇದ್ದಾರೆ. ಬಹಳಷ್ಟು ಜನರು ದುಡ್ಡು ಕಳೆದುಕೊಳ್ಳುತ್ತಲೇ ಇದ್ದಾರೆ. ಕೆಲವರು ದುಡ್ಡು ಮಾಡಿಕೊಳ್ಳುತ್ತಲೂ ಇದ್ದಾರೆ. ಸದ್ಯದ ಸನ್ನಿವೇಶ ಬಹಳ ಕೆಟ್ಟದಾಗಿರುವುದರಿಂದ ಸಿನಿಮಾ ಮಾಡುವುದು ಬಹಳ ಕಷ್ಟದ ಕೆಲಸ. ಈಗ ಉದ್ಭವಿಸಿರುವ ಬಿಕ್ಕಟ್ಟು ನಿವಾರಣೆಯಾದ ನಂತರ ಏನಾದರೂ ಮಾಡಲು ಸಾಧ್ಯ ಎನ್ನುವಂತಾಗಿದೆ’ ಎನ್ನುವ ಅವರು, ತಾವಿನ್ನೂ ಚಿತ್ರರಂಗದಿಂದ ನಿವೃತ್ತಿ ಪಡೆದಿಲ್ಲವೆಂದು ಸೂಚ್ಯವಾಗಿ ಹೇಳಿದರು.

ಚಿತ್ರೋದ್ಯಮ ಚೇತರಿಸಿಕೊಳ್ಳುವ ಆಶಾಭಾವನೆ ಇದೆಯೇ ಎನ್ನುವ ಪ್ರಶ್ನೆ ಎದುರಾದಾಗ, ‘ಒಂದಲ್ಲ ಒಂದು ಸನ್ನಿವೇಶಗಳು, ಇಂತಹ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಇದಕ್ಕಿಂತಲೂ ‘ಈಗ ಆಷಾಢದ ಸಮಯ. ಆಷಾಢ ಮುಗಿಯಲಿ’ ಎನ್ನುವ ಮಾತು ಹೇಳುತ್ತಾರಲ್ಲ, ಅದರ ಬಗ್ಗೆ ನನಗೆ ಬೇಸರವಿದೆ. ಇದೆಂಥ ಮೂಢನಂಬಿಕೆ? ಒಳ್ಳೆಯ ಕೆಲಸ ಮಾಡಲು ಯಾವ ಸಮಯವಾದರೇನು, ಅದಕ್ಕೆ ಸಮಯ ಕಾಯುತ್ತಾ ಕೂರಬೇಕೇ? ಒಳ್ಳೆಯ ಕೆಲಸ ಆರಂಭಿಸಲು ಸಮಯ ಕಾಯುತ್ತಾ ಕೂರಬಾರದು, ತಕ್ಷಣ ಕಾರ್ಯಪ್ರವೃತ್ತರಾಗಬೇಕು’ ಎನ್ನುವ ಮಾತು ಸೇರಿಸಿದರು.

‘ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ಕಳೆಯುತ್ತಿದ್ದೇನೆ. ಈಗ ವೆಬ್‌ ಸರಣಿಯ ಕಾಲ ಶುರುವಾಗಿದೆ. ನನ್ನ ಬಳಿಯೂ ವೆಬ್‌ ಸರಣಿಗೆ ಬೇಕಾದಷ್ಟು ಕಂಟೆಂಟ್‌ ಇದೆ. ಆಸಕ್ತ ನಿರ್ಮಾಪಕರು ಮುಂದೆ ಬಂದರೆ ನಾನು ವೆಬ್‌ ಸರಣಿ ನಿರ್ದೇಶಿಸಲು ಸಿದ್ಧ’ ಎನ್ನಲು ಅವರು ಮರೆಯಲಿಲ್ಲ.

‘ಗರ೦ ಹವಾ’ ಎಂದರೆ ಸತ್ಯು!

‘ಏಕ್ ಥಾ ಚೋಟು ಏಕ್ ಥಾ ಮೋಟು’, ‘ಗರ೦ ಹವಾ’, ‘ಚಿತೆಗೂ ಚಿಂತೆ’, ‘ಕನ್ನೇಶ್ವರರಾಮ’, ‘ಬರ’, ‘ಸೂಖಾ’, ‘ಘಳಿಗೆ’, ‘ಕೊಟ್ಟ’ ಹಾಗೂ ‘ಇಜ್ಜೋಡು’ ಸತ್ಯು ಅವರು ನಿರ್ದೇಶಿಸಿದ ಪ್ರಮುಖ ಚಿತ್ರಗಳು.‘ಗರ೦ ಹವಾ’ ಎಂದರೆ ಸತ್ಯು, ಸತ್ಯು ಎಂದರೆ ‘ಗರಂ ಹವಾ’ ಎನ್ನುವಷ್ಟರ ಮಟ್ಟಿಗೆ ಈ ಹೊಸ ಅಲೆಯ ಚಿತ್ರ ಅವರಿಗೆ ಹೆಸರು ತಂದಿತು. ಭಾರತೀಯ ಚಿತ್ರರಂಗಕ್ಕೂ ಸತ್ಯು ಅವರ ಪ್ರತಿಭೆಯನ್ನು ದರ್ಶನ ಮಾಡಿಸಿತೆಂದರೂ ಅತಿಶಯವಲ್ಲ. ಕಾನ್‌ ಚಿತ್ರೋತ್ಸವದ ಮುಖ್ಯ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು, ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಖ್ಯಾತಿಯೂ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.