ADVERTISEMENT

2024ರ ಬಹುನಿರೀಕ್ಷಿತ ಸಿನಿಮಾಗಳು | ‘ಕಲ್ಕಿ’ಯಿಂದ ‘ಪುಷ್ಪ’ನ ರೂಲ್‌ ತನಕ...

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 0:54 IST
Last Updated 1 ಜನವರಿ 2024, 0:54 IST
‘ಫೈಟರ್’ ಚಿತ್ರದಲ್ಲಿ ಹೃತಿಕ್ ರೋಶನ್, ದೀಪಿಕಾ ಪಡುಕೋಣೆ
‘ಫೈಟರ್’ ಚಿತ್ರದಲ್ಲಿ ಹೃತಿಕ್ ರೋಶನ್, ದೀಪಿಕಾ ಪಡುಕೋಣೆ   

2023ರ ಅಂತ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ 220ಕ್ಕೂ ಹೆಚ್ಚು ಸಿನಿಮಾಗಳು ತೆರೆ ಕಂಡರೂ ಗೆಲುವು ಕಂಡಿದ್ದು ಬೆರಳೆಣಿಕೆಯಷ್ಟು ಮಾತ್ರ. ಬಾಲಿವುಡ್‌, ಟಾಲಿವುಡ್‌, ಮಾಲಿವುಡ್‌ಗೂ ಈ ವರ್ಷ ಅಷ್ಟೆನೂ ಸಿಹಿಯಾಗಿರಲಿಲ್ಲ. ಆದಾಗ್ಯೂ 2024ರಲ್ಲಿ ಸೂಪರ್‌ಸ್ಟಾರ್‌ಗಳ ಸಾಲು,ಸಾಲು ಸಿನಿಮಾಗಳಿರುವುದು ಒಂದು ರೀತಿ ಆಶಾದಾಯಕವಾಗಿದೆ.

ಸತೀಶ್‌ ನೀನಾಸಂ ನಟನೆಯ ‘ಮ್ಯಾಟ್ನಿ’ 2023ರ ಡಿಸೆಂಬರ್‌ಗೆ ತೆರೆ ಕಾಣಬೇಕಿತ್ತು. ಕಾರಣಾಂತರಗಳಿಂದ 2024ರಲ್ಲಿ ಚಿತ್ರ ತೆರೆಗೆ ಬರಲಿದೆ. ‘ದುನಿಯಾ’ ವಿಜಯ್‌ ನಿರ್ದೇಶಿಸಿ, ನಟಿಸಿರುವ ‘ಭೀಮ’ ಸಿನಿಮಾ ಕೂಡ ತೆರೆಗೆ ಬರಲು ಸಿದ್ಧವಿದೆ. ಸುದೀಪ್‌ ಅಭಿನಯದ ‘ಮ್ಯಾಕ್ಸ್‌’ ಚಿತ್ರೀಕರಣ ಕೂಡ ಭರದಿಂದ ಸಾಗಿದ್ದು ಈ ವರ್ಷ ತೆರೆಗೆ ಬರುವುದು ಖಚಿತ. ‘ಘೋಸ್ಟ್‌’, ‘ಜೈಲರ್‌’ ಗೆಲುವಿನ ಬಳಿಕ ಶಿವರಾಜ್‌ಕುಮಾರ್‌ ನಟನೆಯ ಸಿನಿಮಾಗಳತ್ತ ನಿರೀಕ್ಷೆ ಹೆಚ್ಚಾಗಿದೆ. ಅವರ ‘ಕರಟಕ ದಮನಕ’, ‘45’, ‘ಭೈರತಿ ರಣಗಲ್‌’ ಚಿತ್ರಗಳು 2024ರಲ್ಲಿ ತೆರೆ ಕಾಣುವ ಸಾಧ್ಯತೆಯಿದೆ. ಉಪೇಂದ್ರ ನಟಸಿ, ನಿರ್ದೇಶಿಸಿರುವ ‘ಯುಐ’ ಹಾಗೂ ನಟನೆಯ ‘ಬುದ್ಧಿವಂತ-2’ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳು. ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’, ‘ಕೆಡಿ’ ಸಿನಿಮಾಗಳ ಕುರಿತು ನಿರೀಕ್ಷೆ ಹೆಚ್ಚಿದೆ. ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’ ಕೂಡ ತೆರೆ ಕಾಣಲು ಸಿದ್ಧವಿದೆ. ಯಶ್‌ ‘ಟಾಕ್ಸಿಕ್‌’ ಹಾಗೂ ರಿಷಬ್‌ ಶೆಟ್ಟಿ ಅವರ ‘ಕಾಂತಾರ–2’ ಸಿನಿಮಾಗಳ ಕೆಲಸ ಪ್ರಾರಂಭವಾಗಲಿವೆ. ‘ಸಪ್ತ ಸಾಗರದ’ ಬಳಿಕ ರಕ್ಷಿತ್‌ ಶೆಟ್ಟಿ ‘ರಿಚರ್ಡ್‌ ಆ್ಯಂಟನಿ’ಯಲ್ಲಿ ಮಗ್ನರಾಗಲಿದ್ದಾರೆ. 

ದಕ್ಷಿಣ ಭಾರತೀಯ ಸಿನಿಮಾಗಳೇ ಅಬ್ಬರಿಸುತ್ತಿರುವ ಹೊತ್ತಿನಲ್ಲಿ ಹೃತಿಕ್ ರೋಷನ್‌, ಕತ್ರಿನಾ ಕೈಫ್‌ ಅವರ ‘ವಾರ್– 2’ ಬಾಲಿವುಡ್‌ನಲ್ಲಿ ನಿರೀಕ್ಷೆ ಮೂಡಿಸಿರುವ ಚಿತ್ರ. ಹೃತಿಕ್‌ ರೋಷನ್‌, ದೀಪಿಕಾ ಪಡುಕೋಣೆ ಅಭಿನಯದ ‘ಫೈಟರ್‌’ ಜ.25ರಂದು ತೆರೆಗೆ ಬರುತ್ತಿದೆ. ಅಜಯ್ ದೇವಗನ್ ಅವರ ‘ಸಿಂಗಂ ಅಗೇನ್’, ಕತ್ರಿನಾ ಕೈಫ್‌, ವಿಜಯ್‌ ಸೇತುಪತಿ ಜೋಡಿಯ ‘ಮೆರ್ರಿ ಕ್ರಿಸ್‌ಮಸ್‌’, ಪಂಕಜ್‌ ತ್ರಿಪಾಠಿ ಅಭಿನಯದ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಗಾಥೆ ‘ಮೇ ಅಟಲ್‌ ಹೂಂ’ ಚಿತ್ರಗಳು ಈ ವರ್ಷ ತೆರೆಗೆ ಬರಲಿರುವ ಪ್ರಮುಖ ಸಿನಿಮಾಗಳು. 

ADVERTISEMENT

ತೆಲುಗು ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ 2: ದಿ ರೂಲ್’ ಈ ವರ್ಷ ಟಾಲಿವುಡ್‌ನಲ್ಲಿ ಬಹುನಿರೀಕ್ಷಿತ ಚಿತ್ರ. ಮಹೇಶ್‌ ಬಾಬು ಅಭಿನಯದ ‘ಗುಂಟೂರು ಕಾರಂ’ ಚಿತ್ರದ ಘಾಟು ಜೋರಾಗಿದೆ. ಪ್ರಶಾಂತ್‌ ವರ್ಮಾ ನಿರ್ದೇಶನದ ‘ಹನುಮಾನ್‌’ ಚಿತ್ರ ಜ.12ಕ್ಕೆ ತೆರೆ ಕಾಣುತ್ತಿದ್ದು, ಸಖತ್‌ ಸುದ್ದಿಯಲ್ಲಿದೆ. ಜೂನಿಯರ್‌ ಎನ್‌ಟಿಆರ್‌ ನಟಿಸಿರುವ ‘ದೇವರ–ಭಾಗ 1’ ಕುರಿತು ನಿರೀಕ್ಷೆ ಹೆಚ್ಚಿದೆ. ಪ್ರಭಾಸ್‌–ದೀಪಿಕಾ ಪಡುಕೋಣೆ ಜೋಡಿಯ ‘ಕಲ್ಕಿ 2898 ಎಡಿ’ ಈ ವರ್ಷದ ಬಿಗ್‌ಬಜೆಟ್‌ನ ತೆಲುಗು ಸಿನಿಮಾ. ಕಮಲ್‌ ಹಾಸನ್‌, ದುಲ್ಕರ್‌ ಸಲ್ಮಾನ್‌, ಅಮಿತಾಭ್‌ ಬಚ್ಚನ್‌ ಕೂಡ ಈ ಚಿತ್ರದಲ್ಲಿರುವುದು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ತಮಿಳಿನಲ್ಲಿ ಧನುಷ್‌ ಅಭಿನಯದ ‘ಕ್ಯಾಪ್ಟನ್‌ ಮಿಲ್ಲರ್‌’ ಈ ವರ್ಷ ಮೊದಲು ತೆರೆಗೆ ಬರಲಿರುವ ನಿರೀಕ್ಷಿತ ಸಿನಿಮಾ. ಶಿವರಾಜ್‌ ಕುಮಾರ್‌ ಕೂಡ ಈ ಚಿತ್ರದಲ್ಲಿದ್ದಾರೆ. ಪ.ರಂಜಿತ್‌ ನಿರ್ದೇಶಿಸಿ ವಿಕ್ರಂ, ಮಾಳವಿಕಾ ಮೋಹನ್‌ ಜೊತೆಯಾಗಿರುವ ‘ತಂಗಾಲನ್‌’ ಕೂಡ ಜನ ಕಾತುರತೆಯಿಂದ ಕಾಯುತ್ತಿರುವ ಚಿತ್ರ. ಕಮಲ್‌ ಹಾಸನ್‌, ಎಸ್‌.ಶಂಕರ್‌ ಜೋಡಿಯ ‘ಇಂಡಿಯನ್‌–2’, ರಜನಿಕಾಂತ್‌ ಅವರ ‘ವೆಟ್ಟೈಯನ್‌’ ಕೂಡ ಈ ವರ್ಷದ ಮಾಸ್‌ ಎಂಟರ್‌ಟೈನರ್‌ ಸಿನಿಮಾಗಳು. ವಿಜಯ್‌ ಸೇತುಪತಿ ಅವರ ‘ವಿಡುದೆಲೈ–2’ ಕೂಡ ತೆರೆಗೆ ಬರಲಿದೆ.

ಮೋಹನ್‌ ಲಾಲ್‌ ಅವರ ‘ಮಲೈಕೋಟನ್‌ ವಾಲಿಬನ್‌’, ‘ಬರೋಜ್‌’, ಪೃಥ್ವಿರಾಜ್‌ ಅವರ ‘ಆಡುಜೀವಿತಂ’ ಮೊದಲಾದವು ಮಲಯಾಳದಲ್ಲಿ ನಿರೀಕ್ಷೆ ಇರುವ ಚಿತ್ರಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.