ದೊಡ್ಡ ಬಜೆಟ್‌ನ ಅದರಲ್ಲೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ನಾಯಕ ನಟನಾಗಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಖುಷಿ ನಿರ್ದೇಶಕ ಭರತ್ ಎಸ್.ನಾವುಂದ ಅವರ ಮೊಗದಲ್ಲಿ ಎದ್ದುಕಾಣುತ್ತಿತ್ತು. ಅವರ ಮೊದಲ ಚಿತ್ರ'ಅಡಚಣೆಗಾಗಿ ಕ್ಷಮಿಸಿ' ಹ್ಯಾಂಗ್ ಓವರ್‌ನಿಂದ ಹೊರಬಂದು ‘ಮುಗಿಲ್‌ಪೇಟೆ’ಯತ್ತ ಮುಖಮಾಡಿ ನಿಂತಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಚಿತ್ರೀಕರಣಕ್ಕಾಗಿ ಸಕಲೇಶಪುರದಲ್ಲಿ ಚಿತ್ರತಂಡದೊಂದಿಗೆ ಬೀಡು ಬಿಟ್ಟಿರುವ ಅವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸಕಲೇಶಪುರದ ದುರ್ಗಾ ಇಂಟರ್‌ನ್ಯಾಷನಲ್ ಹೋಟೇಲಿನಲ್ಲಿ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.
‘ಸಕಲೇಶಪುರದ ನಿಸರ್ಗ ತಾಣಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಹತ್ತು ದಿನಗಳ ಶೂಟಿಂಗ್ ನಡೆದಿದೆ. ಒಂದೇ ಒಂದು ಸಣ್ಣ ತೊಂದರೆಯೂ ಇಲ್ಲದಂತೆ ಚಿತ್ರೀಕರಣ ನಡೆದಿದೆ. ಸಕಲೇಶಪುರದ ಜನತೆ ಮತ್ತು ಪೊಲೀಸ್ ಇಲಾಖೆ ಚಿತ್ರೀಕರಣಕ್ಕೆ ನೀಡಿದ ಸಹಕಾರವನ್ನು ಮರೆಯಲಾಗದು. ಇನ್ನೂ ಇಪ್ಪತ್ತು ದಿನಗಳ ಶೂಟಿಂಗ್ ಈ ಭಾಗದಲ್ಲಿ ನಡೆಸುವ ಯೋಜನೆ ಇದೆ. ಮುಂದಿನ ಹಂತದ ಶೂಟಿಂಗ್ ಕುಂದಾಪುರ, ಆಗುಂಬೆಯಲ್ಲಿ ನಡೆಸಲು ಉದ್ದೇಶಿಸಿದ್ದೇವೆ’ ಎಂದು ಮಾತು ವಿಸ್ತರಿಸಿದರು ನಾವುಂದ.
‘ಇದುರೀಮೇಕ್ ಚಿತ್ರ ಅಲ್ಲ. ಚಿತ್ರದ ಕಥೆಯನ್ನು ಒಂದು ಎಳೆಯಲ್ಲಿ ಹೇಳುವುದಾದರೆ ನಾಯಕ– ನಾಯಕಿ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಲೇ ಅವರ ಅರಿವಿಗೆ ಬಾರದಂತೆ ಪ್ರೀತಿ ಮುರಿದು ಬೀಳುತ್ತದೆ. ಇದು ಎಲ್ಲರ ಬದುಕಿನಲ್ಲೂ ನಡೆಯುವಂಥದ್ದೆ.ಇದರಲ್ಲಿರುವುದು ಬರೀ ಪ್ರೇಮ ಕಥೆ, ಭಗ್ನಪ್ರೇಮದ ಕಥೆಯಲ್ಲ. ಕಾಮಿಡಿ, ತಂದೆ–ತಾಯಿಯ ಸೆಂಟಿಮೆಂಟು ಇರಲಿದೆ. ಜತೆಗೆ ಸಸ್ಪೆನ್ಸ್, ಫೈಟ್ಸ್ ಇದೆ. ಹೊಸ ಗೆಟಪ್‌ನಲ್ಲಿ ಮನೋರಂಜನ್ ಅವರನ್ನು ಮೂರು ಶೇಡ್‌ಗಳಲ್ಲಿ ತೋರಿಸಲಿದ್ದೇವೆ. ಒಂದು ರೀತಿಯಲ್ಲಿ ಹೊಸರೂಪದ ಮನೋರಂಜನ್ ತೆರೆಮೇಲೆ ಕಾಣಿಸಲಿದ್ದಾರೆ.ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ’ ಎಂದರು.
‘ಮುಗಿಲ್‌ಪೇಟೆ’ ಎಂದರೆ ಚಿತ್ರದ ನಾಯಕಿ ವಾಸವಿರುವ ಒಂದು ಸ್ಥಳ.ಚಿತ್ರದ ನಾಯಕಿಯ ಪಾತ್ರದ ವಾಸ ಸ್ಥಳಕ್ಕೆ ಸಕಲೇಶಪುರ ಪೇಟೆ ತುಂಬಾ ಹೊಂದಿಕೆಯಾಗುವುದರಿಂದ ಈ ಸ್ಥಳವನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿದ್ದೆವು. ಪೇಟೆಯಲ್ಲಿ ನಾಯಕಿ ಮತ್ತು ಆಕೆಯ ತಂಗಿ ಹಾಗೂ ನಾಯಕನ ಟಾಕಿ ಭಾಗವನ್ನು ಚಿತ್ರೀಕರಿಸಿದ್ದೇವೆ.ಹಾಸ್ಯ ಕಲಾವಿದರಾದಪ್ರಶಾಂತ್ ಸಿದ್ದಿ, ಅಪ್ಪಣ್ಣ ಅವರ ಪಾತ್ರಗಳ ಭಾಗವನ್ನು ಚಿತ್ರೀಕರಿಸಲಾಗಿದೆ. ಅವಿನಾಶ್ ಮತ್ತು ತಾರಾ, ಸಾಧು ಕೋಕಿಲ, ರಂಗಾಯಣ ರಘು ಅವರ ಪಾತ್ರಗಳ ಭಾಗವನ್ನು ಇಲ್ಲೇ ಚಿತ್ರೀಕರಿಸಲಾಗುತ್ತದೆ.ವಿಲನ್‌ಗಳಲ್ಲಿ ಒಂದು ಪಾತ್ರಕ್ಕೆ ಶೋಭರಾಜ್ ಎಂದುಕೊಂಡಿದ್ದು, ಮತ್ತೊಂದು ಪಾತ್ರಕ್ಕೆ ಹೊರಗಿನಿಂದ ಕಲಾವಿದರೊಬ್ಬರನ್ನು ಕರೆಸುವ ಯೋಚನೆಯೂ ಇದೆ’ ಎಂದರು.
ನಾಯಕ ನಟ ಮನೋರಂಜನ್ ‘ಮೊದಲ ಬಾರಿಗೆ ಕಾಮಿಡಿಯೂ ಇರುವ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ದೇಹ ಭಾಷೆ, ಮೈಕಟ್ಟು ಬದಲಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಸುಮಾರು 80 ದೃಶ್ಯಗಳಿರಲಿದ್ದು, ಚಿತ್ರದ ನಾಯಕಿಯ ಪಾತ್ರ ಸುಮ್ಮನೆ ಮುಖ ತೋರಿಸಿ ಡುಯೆಟ್ ಹಾಡಿಕೊಂಡುಹೋಗುವಂಥದಲ್ಲ. ಇಡೀ ಚಿತ್ರದಲ್ಲಿ ನಾಯಕಿಯ ಪಾತ್ರವೂ ತುಂಬಿಕೊಂಡಿರುತ್ತದೆ. ಹೀಗಾಗಿನಾಯಕಿಯಾಗಿ ನಟಿಸುತ್ತಿರುವ ಕಯಾದು ಲೋಹರ್ ಒಂದು ತಿಂಗಳ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದ್ದಾರೆ. ನಾಯಕಿಯಿಂದ ಒಂದು ದಿನವೂ ಚಿತ್ರೀಕರಣಕ್ಕೆ ತೊಂದರೆಯಾಗಿಲ್ಲ. ಅವರು ಕನ್ನಡ ಕೂಡ ಕಲಿಯುತ್ತಿದ್ದಾರೆ. ಚಿತ್ರದಲ್ಲಿ ತುಂಬಾ ಇನ್ವಾಲ್‌ಮೆಂಟ್ ಇಟ್ಟುಕೊಂಡು ನಟಿಸುತ್ತಿದ್ದಾರೆ. ಇದರಲ್ಲಿ ನಾಯಕ–ನಾಯಕಿ ತುಟಿಗೆ ತುಟಿ ಹಚ್ಚುವ ಕಿಸ್ ದೃಶ್ಯಗಳಿರುವುದಿಲ್ಲ. ಆದರೆ, ಒಂದು ಮುದ್ದಾದ ರೊಮ್ಯಾನ್ಸ್ ಇರಲಿದೆ. ಈ ಚಿತ್ರವನ್ನು ಒಂದು ತಂಡವಾಗಿ, ಒಂದು ಕುಟುಂಬದ ಸದಸ್ಯರಂತೆ ಮಾಡುತ್ತಿದ್ದೇವೆ’ ಎಂದರು.
ನಾಯಕಿ ಕಯಾದು ಲೋಹರ್‌ಗೆ ಇದು ಕನ್ನಡದಲ್ಲಿ ಮೊದಲ ಸಿನಿಮಾ. ಮಾಡೆಲಿಂಗ್ ಕ್ಷೇತ್ರದ ಹಿನ್ನೆಲೆಯಿಂದ ಬಂದಿರುವ ಕಯಾದು ಮರಾಠಿ ಸಿನಿಮಾದಲ್ಲಿ ನಟಿಸಿದ್ದಾರೆ.ಆ ಸಿನಿಮಾ ಇನ್ನಷ್ಟೇ ತೆರೆ ಕಾಣಬೇಕಿದೆ. ‘ನನಗೆ ಇಲ್ಲಿ ಮನೆಯಲ್ಲೇ ಇರುವಂಥ ಭಾವನೆ ಇದೆ. ಮೊದಲು ಕನ್ನಡ ಭಾಷೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಭಾಷೆ ಅರ್ಥ ಆದರೆ, ಭಾಷೆ ಮಾತನಾಡಲು ಕಲಿತರೆ ಮಾತ್ರ ಜನರಿಗೆ ಹತ್ತಿರವಾಗಬಹುದು. ಹಾಗಾಗಿ ನಿತ್ಯವೂ ಚಿತ್ರೀಕರಣದ ಸೆಟ್‌ನಲ್ಲೂ ಕನ್ನಡ ಕಲಿಯುತ್ತಿದ್ದೇನೆ’ ಎಂದು ಚುಟುಕಾಗಿ ಮಾತನಾಡಿದರು.
ಕಾರ್ಯಕಾರಿ ನಿರ್ಮಾಪಕ ಶಿಲ್ಜು ಕಣ್ಣನ್ ‘ಚಿತ್ರದ ಬಜೆಟ್ ನಿರೀಕ್ಷೆಗಿಂತ ಹೆಚ್ಚಾಗುತ್ತಿದೆ. ಆದರೂ ಚಿತ್ರವನ್ನು ಅತ್ಯಂತ ಗುಣಮಟ್ಟದಿಂದ ನೀಡುವ ವಿಶ್ವಾಸವಿದೆ’ ಎಂದರು.
ಈ ಚಿತ್ರಕ್ಕೆ ಛಾಯಾಗ್ರಹಣ ರವಿವರ್ಮ (ಗಂಗು), ಸಂಗೀತ ಶ್ರೀಧರ್ ಸಂಭ್ರಮ್, ಸಂಕಲನ ಅರ್ಜುನ್ ಕಿಟ್ಟುಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.