ADVERTISEMENT

ಬೆದರಿಕೆ: ರಕ್ಷಣೆ ಕೊಡಿ ಎಂದು ಆಂಧ್ರ ಗೃಹ ಸಚಿವೆ ಭೇಟಿಯಾದ ನಟಿ

ಸಜ್ಜನ್ ಜಿಂದಾಲ್ ಅವರು ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ನೋಡಿದ್ದರು ಎಂದು 2022 ರಲ್ಲಿ ಕಾದಂಬರಿ ಜೆಟ್ವಾನಿ ದೂರು ನೀಡಿದ್ದರು.

ಪಿಟಿಐ
Published 20 ಸೆಪ್ಟೆಂಬರ್ 2024, 6:38 IST
Last Updated 20 ಸೆಪ್ಟೆಂಬರ್ 2024, 6:38 IST
<div class="paragraphs"><p>ಕಾದಂಬರಿ ಜೆಟ್ವಾನಿ</p></div>

ಕಾದಂಬರಿ ಜೆಟ್ವಾನಿ

   

ಅಮರಾವತಿ: ಅಕ್ರಮವಾಗಿ ಬಂಧಿಸಿ ಕಿರುಕುಳ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ನಟಿ ಹಾಗೂ ಮಾಡೆಲ್ ಕಾದಂಬರಿ ಜೆಟ್ವಾನಿ ಅವರು ಆಂಧ್ರ ಪ್ರದೇಶದ ಗೃಹ ಸಚಿವೆ ಅನಿತಾ ವೆಂಗಾಲಪುಡಿ ಅವರನ್ನು ಭೇಟಿಯಾಗಿದ್ದಾರೆ.

ಶುಕ್ರವಾರ ಅಮರಾವತಿಯಲ್ಲಿ ಗೃಹ ಸಚಿವರನ್ನು ಭೇಟಿಯಾದ ಕಾದಂಬರಿ, ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದಿಂದ ನನಗೆ ಬೆದರಿಕೆ ಇತ್ತು. ಹಾಗಾಗಿ ನನಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ADVERTISEMENT

ಗೃಹ ಸಚಿವೆ ಅನಿತಾ ವೆಂಗಾಲಪುಡಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ರಕ್ಷಣೆ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಕಾದಂಬರಿ ಅವರು ಪಿಟಿಐಗೆ ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಇತ್ತೀಚೆಗೆ ಅಮಾನತು ಮಾಡಿದೆ.

ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿ. ಸೀತಾರಾಮ ಆಂಜನೆಯಲು, ಕ್ರಾಂತಿ ರಾಣಾ ಟಾಟಾ ಹಾಗೂ ಐಪಿಎಸ್ ಅಧಿಕಾರಿ, ವಿಜಯವಾಡದ ಮಾಜಿ ಡಿಸಿಪಿ ವಿಶಾಲ್ ಗುನ್ನಿ ಅಮಾನತುಗೊಂಡ ಅಧಿಕಾರಿಗಳು.

ಕಾದಂಬರಿ ಜೆಟ್ವಾನಿ ತಮಗೆ ವಂಚಿಸಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಫೆಬ್ರುವರಿ 2 ರಂದು ಆಂಧ್ರ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಭಾಗವಾಗಿ ಪಿ. ಸೀತಾರಾಮ ಆಂಜನೆಯಲು ಅವರು ಕಾದಂಬರಿ ಅವರನ್ನು ಬಂಧಿಸಲು ತಮ್ಮ ಅಧೀನದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಆದರೆ, ಕಾದಂಬರಿ ತಮ್ಮ ಬಂಧನ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಕುರಿತು ಇಲಾಖಾ ತನಿಖೆ ನಡೆಸಿದಾಗ ಸೀತಾರಾಮ ಆಂಜನೆಯಲು, ಕ್ರಾಂತಿ ರಾಣಾ ಟಾಟಾ ಹಾಗೂವಿಶಾಲ್ ಗುನ್ನಿ ತಪ್ಪಿತಸ್ಥರೆಂದು ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾನು ಮುಂಬೈನಲ್ಲಿ ಉದ್ಯಮಿಯೊಬ್ಬರ (ಜೆಎಸ್‌ಡಬ್ಲೂ ಎಂಡಿ ಸಜ್ಜನ್ ಜಿಂದಾಲ್) ವಿರುದ್ಧ ನೀಡಿರುವ ದೂರಿನ ವಿಚಾರವಾಗಿ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹಾಗೂ ನನ್ನನ್ನು ತೊಂದರೆಯಲ್ಲಿ ಸಿಲುಕಿಸಲು ಆಂಧ್ರದಲ್ಲಿ ಪ್ರತಿಯಾಗಿ ದೂರು ದಾಖಲಿಸಲಾಗಿತ್ತು. ದೂರು ಹಿಂಪಡೆಯಲು ಆಂಧ್ರ ಪೊಲೀಸ್ ಅಧಿಕಾರಿಗಳು ನನಗೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದರು. ಅಲ್ಲದೇ ನನ್ನ ಬಂಧನವೂ ದುರುದ್ದೇಶಪೂರಿತವಾಗಿತ್ತು ಎಂದು ಕಾದಂಬರಿ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಈ ಮೊದಲು ಮೂವರು ಪೊಲೀಸರನ್ನೂ ಅಮಾನತು ಮಾಡಲಾಗಿತ್ತು. ಪಿ. ಸೀತಾರಾಮ ಆಂಜನೆಯಲು ಅವರ ಮೇಲೆ ಜಗನ್ ಸರ್ಕಾರದಲ್ಲಿ ಟಿಡಿಪಿ ನಾಯಕರ ಫೋನ್ ಟ್ಯಾಪಿಂಗ್ ಆರೋಪ ಕೇಳಿ ಬಂದಿತ್ತು.

ಸಜ್ಜನ್ ಜಿಂದಾಲ್ ವಿರುದ್ಧ ಕಾದಂಬರಿ ನೀಡಿರುವ ದೂರು ಸುಳ್ಳು ಎಂದು ಮುಂಬೈ ಪೊಲೀಸರು ಮಾರ್ಚ್‌ನಲ್ಲಿ ಕೋರ್ಟ್‌ಗೆ ಮಾಹಿತಿ ನೀಡಿದ್ದಾಗಿ ವರದಿಯಾಗಿದ್ದವು. ಸಜ್ಜನ್ ಜಿಂದಾಲ್ ಅವರು ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ನೋಡಿದ್ದರು ಎಂದು 2022 ರಲ್ಲಿ ಮಾಡೆಲ್ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.