ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಸಮೀಪ ನಡೆದ ಗುಂಡಿನ ದಾಳಿ ಕೃತ್ಯಕ್ಕೆ ಬಳಸಿದ್ದು ಎನ್ನಲಾದ ಬೈಕ್ನ ಮಾಲೀಕನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ದಾಳಿಕೋರರು ಬಳಸಿದ್ದ ಬೈಕ್, ನಟನ ಮನೆಗೆ ಕೆಲವೇ ಕಿ.ಮೀ ದೂರದ ಮೌಂಟ್ ಮೇರಿ ಚರ್ಚ್ ಬಳಿ ಪತ್ತೆ ಆಗಿತ್ತು. ಬೈಕ್ ಮುಂಬೈನ ಪನ್ವೆಲ್ ವಲಯದ ನಿವಾಸಿಯೊಬ್ಬರ ಹೆಸರಲ್ಲಿ ನೋಂದಣಿಯಾಗಿದೆ.
ಆದರೆ, ‘ಬೈಕ್ ಅನ್ನು ಈಚೆಗೆ ಅನ್ಯರಿಗೆ ಮಾರಾಟ ಮಾಡಿದ್ದೆ ಎಂದು ಮಾಲೀಕ ತಿಳಿಸಿದ್ದಾನೆ’ ಎನ್ನಲಾಗಿದೆ.
ಭಾನುವಾರ ಬೆಳಗಿನ ಜಾವ ಬೈಕ್ನಲ್ಲಿ ಬಂದಿದ್ದ ಇಬ್ಬರು ಬಾಂದ್ರಾದಲ್ಲಿ ನಟನ ಮನೆಯಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಸಮೀಪ ನಾಲ್ಕು ಸುತ್ತು ಗುಂಡು ಹಾರಿಸಿ, ಪರಾರಿಯಾಗಿದ್ದರು.
ಈ ಸಂಬಂಧ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಬೈಕ್, ಪನ್ವೆಲ್ ಪ್ರದೇಶದ ನಿವಾಸಿಯೊಬ್ಬರ ಹೆಸರಿನಲ್ಲಿ ನೋಂದಣಿ ಆಗಿರುವುದು ತಿಳಿದುಬಂತು. ಮಾಲೀಕನ ನೆಲೆ ಪತ್ತೆಹಚ್ಚಿದ ಅಪರಾಧ ನಿಗ್ರಹ ದಳದ ತಂಡ ವಿಚಾರಣೆಗೆ ಒಳಪಡಿಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದುಷ್ಕರ್ಮಿಗಳು ಚರ್ಚ್ ಬಳಿ ಬೈಕ್ ಬಿಟ್ಟು ಸ್ವಲ್ಪ ದೂರ ನಡೆದುಕೊಂಡು ಹೋಗಿದ್ದಾರೆ. ಬಳಿಕ ಆಟೊ ಮೂಲಕ ಬಾಂದ್ರಾ ರೈಲ್ವೆ ನಿಲ್ದಾಣ ತಲುಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅಲ್ಲಿಂದ ರೈಲು ಹತ್ತಿರುವ ದುಷ್ಕರ್ಮಿಗಳು ನಂತರ ಸಾಂತಾಕ್ರೂಜ್ ನಿಲ್ದಾಣದಲ್ಲಿ ಇಳಿದಿದ್ದಾರೆ. ಅಲ್ಲಿಂದ ನಡೆದುಕೊಂಡು ಹೋಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ವಲಯದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಗುಂಡಿನ ದಾಳಿ ಕೃತ್ಯಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ನಡೆಸಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಅಪರಿಚಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅನ್ವಯ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.