ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೀವ ಬೆದರಿಕೆ ಸಂದೇಶವನ್ನು ಕಳುಹಿಸಿದೆ. ಬೆದರಿಕೆ ಒಡ್ಡಿರುವ ದುಷ್ಕರ್ಮಿಗಳು ₹5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
‘ನಗರ ಸಂಚಾರ ನಿಯಂತ್ರಣ ಕೊಠಡಿಯ ವ್ಯಾಟ್ಸಾಪ್ ಸಹಾಯವಾಣಿಗೆ ಗುರುವಾರ ಮಧ್ಯಾಹ್ನ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ವರ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
‘ಸಲ್ಮಾನ್ ಖಾನ್ ಜೀವಂತವಾಗಿ ಇರಬೇಕಾದರೆ ಮತ್ತು ಲಾರೆನ್ಸ್ ಬಿಷ್ಣೋಯಿ ಜೊತೆಗಿನ ವೈರತ್ವವನ್ನು ಕೆಳದುಕೊಳ್ಳಬೇಕಾದರೆ ₹5 ಕೋಟಿ ನೀಡಬೇಕು. ಈ ಸಂದೇಶವನ್ನು ಲಘುವಾಗಿ ಪರಿಗಣಿಸಬೇಡಿ. ಬಾಬಾ ಸಿದ್ದೀಕಿಗಿಂತಲೂ ಕೆಟ್ಟ ಪರಿಸ್ಥಿತಿ ಸಲ್ಮಾನ್ ಖಾನ್‌ಗೆ ಎದುರಾಗಲಿದೆ’ ಎಂದು ಬೆದರಿಕೆ ಸಂದೇಶದಲ್ಲಿ ತಿಳಿಸಲಾಗಿದೆ.
‘ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸಲ್ಮಾನ್ ಖಾನ್‌ಗೆ ಈ ಹಿಂದೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಬೆದರಿಕೆ ಸಂದೇಶಗಳು ಬಂದಿದ್ದವು. ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಮ್ ಖಾನ್ ಮೇಲೆ ಬಿಷ್ಣೋಯಿ ಗ್ಯಾಂಗ್ ಕಣ್ಣಿಟ್ಟಿರುವ ಸಾಧ್ಯತೆಗಳು ಹೆಚ್ಚಿವೆ.
ಪಾಕಿಸ್ತಾನದಿಂದ ಎಕೆ 47, ಎಕೆ 92 ಮತ್ತು ಎಂ 92 ಬಂದೂಕುಗಳನ್ನು ಮತ್ತು ಟರ್ಕಿ ನಿರ್ಮಿತ ಝಿಗಾನ ಪಿಸ್ತೂಲನ್ನು ಖರೀದಿಸಲು ಬಿಷ್ಣೋಯಿ ಗ್ಯಾಂಗ್ ಸಿದ್ಧತೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ.
ಸಲ್ಮಾನ್ ಖಾನ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದ ತಂಡದ ಶಾರ್ಪ್ ಶೂಟರ್‌ವೊಬ್ಬನನ್ನು ನವ ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಹರಿಯಾಣ ಮೂಲದ ಸುಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಬೆಳವಣಿಗೆಗಳಿಗೆ ಸಂಬಂಧಿಸಿ, ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫಾನ್ಸಲ್ಕರ್ ಅವರು ಉಪಮುಖ್ಯಮಂತ್ರಿ ದೇವೆಂದ್ರ ಫಡಣವೀಸ್ ಅವರನ್ನು ಭೇಟಿ ಮಾಡಿದ್ದಾರೆ. ಬಿಷ್ಣೋಯಿ ಗ್ಯಾಂಗ್‌ನಿಂದ ಹತ್ಯೆಯಾದ ಎನ್‌ಸಿಪಿ ನಾಯಕ ಸಿದ್ದೀಕಿ ಅವರ ಪುತ್ರ ಮತ್ತು ವಾಂಡ್ರೆ ಪೂರ್ವದ ಶಾಸಕ ಝೀಶಾನ್ ಸಿದ್ದೀಕ್ ಅವರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.