ADVERTISEMENT

26/11 ಮುಂಬೈ ದಾಳಿಗೆ 13 ವರ್ಷ: ಹುತಾತ್ಮರಿಗೆ ಬಾಲಿವುಡ್ ತಾರೆಯರ ಶ್ರದ್ಧಾಂಜಲಿ

ಪಿಟಿಐ
Published 26 ನವೆಂಬರ್ 2021, 12:57 IST
Last Updated 26 ನವೆಂಬರ್ 2021, 12:57 IST
   

ಮುಂಬೈ: ಮುಂಬೈನಲ್ಲಿ ಉಗ್ರರ ದಾಳಿ ನಡೆದು 13 ವರ್ಷ ಕಳೆದಿದೆ. ದಾಳಿಯಲ್ಲಿ ಹುತಾತ್ಮರಾದವರಿಗೆ ಅಕ್ಷಯ್ ಕುಮಾರ್, ರೋಹಿತ್ ಶೆಟ್ಟಿ, ಶಿಲ್ಪಾಶೆಟ್ಟಿ, ಸಾರಾ ಅಲಿ ಖಾನ್ ಸೇರಿದಂತೆ ಬಾಲಿವುಡ್‌ನ ಹಲವು ತಾರೆಯರು ಗೌರವ ನಮನ ಸಲ್ಲಿಸಿದ್ದಾರೆ.

ಮುಂಬೈ ದಾಳಿಯನ್ನು ಅತ್ಯಂತ ಭೀಕರ ದಾಳಿ ಎಂದು ಹೇಳಿರುವ ಅಕ್ಷಯ್ ಕುಮಾರ್, ದೇಶ ಮತ್ತು ಜನರನ್ನು ಸುರಕ್ಷಿತವಾಗಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅವರು ಗೌರವ ಸೂಚಿಸಿದ್ದಾರೆ.

‘ಮುಂಬೈನಲ್ಲಿ ಭೀಕರ ದಾಳಿ ನಡೆದು 13 ವರ್ಷ ಕಳೆದಿದೆ. ದಾಳಿಯಲ್ಲಿ ಜೀವ ಕಳೆದುಕೊಂಡವರನ್ನು ಸ್ಮರಿಸುವ ಸಮಯವಿದು. ನಮ್ಮ ನಗರವನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಎಲ್ಲ ಧೀರರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ’ಎಂದು ಬರೆದಿದ್ದಾರೆ.

ADVERTISEMENT

‘ಅವರು ಮರೆಯಲಾಗದ ಚೈತನ್ಯವಾಗಿ ನಮ್ಮ ಹೃದಯದಲ್ಲಿ ಉಳಿಯಲಿದ್ದಾರೆ. ಅವರ ತ್ಯಾಗವು ಶಾಶ್ವತವಾಗಿ ಸ್ಮರಣೆಯಲ್ಲಿ ಇರಲಿದೆ’ಎಂದು ರೋಹಿತ್ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿದ್ದಾರೆ.

ಮುಂಬೈನಲ್ಲಿ ಉಗ್ರರ ದಾಳಿ ವೇಳೆ ದಾಳಿಗೊಳಗಾದ ತಾಜ್ ಮಹಲ್ ಹೋಟೆಲ್ ಚಿತ್ರವನ್ನು ಪೋಸ್ಟ್ ಮಾಡಿರುವ ಸಾರಾ ಅಲಿ ಖಾನ್, ಹುತಾತ್ಮರು ಸದಾ ನಮ್ಮ ಸ್ಮರಣೆಯಲ್ಲಿ ಉಳಿಯಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

‘26/11: ಕೈ ಮುಗಿದು ನಮ್ಮ ಹೀರೋಗಳನ್ನು ಸ್ಮರಿಸುವುದನ್ನು ಮರೆಯದಿರಿ. ಜೈಹಿಂದ್’ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

ದಾಳಿಯಲ್ಲಿ ಹುತಾತ್ಮರಾದವರು ಮತ್ತು ಅದರಿಂದ ಜೀವನ ಬದಲಾದವರು, ಪರಿಣಾಮ ಅನುಭವಿಸುತ್ತಿರುವವರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ನಟಿ ಶಿಲ್ಪಾ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ನವೆಂಬರ್ 26, 2008ರಂದು ಪಾಕಿಸ್ತಾನದ 10 ಮಂದಿ ಲಷ್ಕರ್‌–ಎ–ತೈಯಬಾ ಭಯೋತ್ಪಾದಕರು ಸಮುದ್ರ ಮಾರ್ಗದ ಮೂಲದ ಮುಂಬೈಗೆ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಸೇರಿ 166 ಮಂದಿ ಸಾವಿಗೀಡಾಗಿದ್ದರು. ಹಲವರು ಗಾಯಗೊಂಡಿದ್ದರು.

ಮುಂಬೈನ ಛತ್ರಪತಿ ಶಿವಾಜಿ ಮಹರಾಜ್ ರೈಲು ನಿಲ್ದಾಣ, ಒಬೆರಾಯ್ ಟ್ರಿಡೆಂಟ್, ತಾಜ್ ಮಹಲ್ ಹೋಟೆಲ್, ಲಿಯೊಪೊಲ್ಡ್ ಕೆಫೆ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ಮೇಲೆ ದಾಳಿ ನಡೆಸಿದ್ದರು.

ನಾಗರಿಕರ ಜೊತೆಗೆ ಅಂದಿನ ಭಯೋತ್ಪಾದನೆ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನೆಯ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈನ ಹೆಚ್ಚುವರಿ ಪೊಲೀಸ್ ಕಮೀಷನರ್ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಸಲಾಸ್ಕರ್, ಎಎಸ್ಐ ತುಕಾರಾಮ್ ಸೇರಿದಂತೆ ಹಲವರು ಮೃತಪಟ್ಟಿದ್ದರು.

ನಟ ರಣವೀರ್ ಶೋರೆ ಮತ್ತು ರಿಚಾ ಚಡ್ಡಾ ಸಹ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ಮುಂಬೈ ಭಯೋತ್ಪಾದಕ ದಾಳಿಗೆ ಕ್ಷಮೆ ಇಲ್ಲ, ಮರೆಯಲೂ ಸಾಧ್ಯವಿಲ್ಲ’ಎಂದು ಶೋರೆ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.