ಹೊಸ ತಲೆಮಾರಿನವರ ಬದುಕಿನ ಚಿತ್ರಣವೇ ‘ಮುಂದಿನ ನಿಲ್ದಾಣ’ದ ಕಥಾವಸ್ತು. ಬದುಕಿನಲ್ಲಿ ಪ್ರೀತಿ, ಪ್ರೇಮದ ನಡುವೆ ಮನಸ್ತಾಪ ಸುಳಿದಾಗ ಆಗುವ ವ್ಯಥೆಯೇ ಇದರ ಹೂರಣ. ನವೆಂಬರ್ 29ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದೊಟ್ಟಿಗೆ ಒಂದು ವರ್ಷದ ಪ್ರಯಾಣ ಪೂರ್ಣಗೊಳಿಸಿರುವ ಚಿತ್ರತಂಡ ಪತ್ರಕರ್ತರ ಮುಂದೆ ಹಾಜರಾಗಿತ್ತು.
ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ವಿನಯ್ ಭಾರದ್ವಾಜ್. ‘ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಚಿತ್ರ ಇದು. ಸಿನಿಮಾ ಜನರ ಮನಸ್ಸು ಗೆಲ್ಲಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಹಿರಿಯ ನಟ ದತ್ತಣ್ಣ ಅವರು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರವನ್ನು ನೋಡಿದ ಅವರು ಹಳೆಯ ದಿನಗಳಿಗೆ ಜಾರಿದರಂತೆ. ‘ಚಿತ್ರ ನನ್ನನ್ನು ಭಾವುಕ ಜಗತ್ತಿಗೆ ಕರೆದೊಯ್ದಿತು. ಕೆಲವು ಸಿನಿಮಾಗಳು ಮನಸ್ಸಿಗೆ ಗಾಢವಾಗಿ ತಟ್ಟುತ್ತವೆ. ಅಂತಹ ಸಿನಿಮಾ ಇದಾಗಿದೆ’ ಎಂದು ವಿವರಿಸಿದರು.
‘ರಂಗಿತರಂಗ’ ಖ್ಯಾತಿಯ ರಾಧಿಕಾ ಚೇತನ್ ಈ ಚಿತ್ರದ ಮೂಲಕ ರಾಧಿಕಾ ನಾರಾಯಣ್ ಆಗಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ‘ಈ ಚಿತ್ರ ನನ್ನ ವೃತ್ತಿ ಬದುಕಿನ ನಿಲ್ದಾಣ. ಶೂಟಿಂಗ್ ವೇಳೆ ಸಾಕಷ್ಟು ಕಲಿತುಕೊಂಡೆ’ ಎಂದರು.ಪ್ರವೀಣ್ ತೇಜ್ ಇದರ ನಾಯಕ. ಈ ಸಿನಿಮಾದ ಪಾತ್ರಕ್ಕಾಗಿ ಅವರು ದೇಹವನ್ನು ಹುರಿಗೊಳಿಸಿದ್ದಾರಂತೆ. ‘ಸಿನಿಮಾದ ಕಥಾವಸ್ತು ಚೆನ್ನಾಗಿದೆ’ ಎಂದು ಹೇಳಿದರು.
ಸಕಲೇಶಪುರ, ಬೆಂಗಳೂರು, ಕೋಲಾರ, ಹಿಮಾಚಲಪ್ರದೇಶದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಏಳು ಹಾಡುಗಳನ್ನು ಏಳು ಮಂದಿ ಸಂಗೀತ ನಿರ್ದೇಶಕರು ಸಂಯೋಜಿಸಿರುವುದು ವಿಶೇಷ. ಪುನೀತ್ ರಾಜ್‌ಕುಮಾರ್ ಒಡೆತನದ ಪಿ.ಆರ್.ಕೆ ಪ್ರೊಡಕ್ಷನ್ ಹಾಡುಗಳನ್ನು ಹೊರತಂದಿದೆ. ಈ ಚಿತ್ರದ ಬಣ್ಣವಿನ್ಯಾಸ ಮಾಡಿರುವುದು ಬಾಲಿವುಡ್ ನಟ ಶಾರುಖ್‌ಖಾನ್ ಒಡೆತನದ ರೆಡ್ ಚಿಲ್ಲೀಸ್.
ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣವಿದೆ. ಅನನ್ಯಾ ಕಶ್ಯಪ್, ಅಜಯ್ ರಾವ್ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.