ADVERTISEMENT

ನಟ ದರ್ಶನ್‌ ಅಭಿನಯದ 'ಕುರುಕ್ಷೇತ್ರ' ಆ.9ರಂದು ಕನ್ನಡ, ತೆಲುಗಿನಲ್ಲಿ ತೆರೆಗೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 15:47 IST
Last Updated 3 ಆಗಸ್ಟ್ 2019, 15:47 IST
   

ಬೆಂಗಳೂರು:ನಟ ದರ್ಶನ್ ಅಭಿನಯದ 50ನೇ ಸಿನಿಮಾ 'ಮುನಿರತ್ನ ಕುರುಕ್ಷೇತ್ರ' ಆಗಸ್ಟ್ 9ರಂದು ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ.

ಆಗಸ್ಟ್ 15ರಂದು ತಮಿಳು ಮತ್ತು ಮಲಯಾಳಂದ ಅವತರಣಿಕೆ ತೆರೆ ಕಾಣಲಿದೆ. ಪ್ರಸ್ತುತ ಮುಂಬೈನಲ್ಲಿ ಮಳೆ ಆರ್ಭಟಿಸುತ್ತಿದೆ. ಹಾಗಾಗಿ, ಮೂರು ವಾರಗಳ ಬಳಿಕ ಹಿಂದಿ ಅವತರಣಿಕೆಯ ಬಿಡುಗಡೆಗೆ ನಿರ್ಧರಿಸಲಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಯ ಒಟ್ಟು 3 ಸಾವಿರ ಚಿತ್ರಮಂದಿರದಲ್ಲಿ ಈ ಚಿತ್ರ ತೆರೆ ಕಾಣಲಿದೆ.

ಶನಿವಾರದ ರಾತ್ರಿಯಿಂದಲೇ ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ಆರಂಭವಾಗಲಿದೆ‌.‌ 'ಎರಡು ವರ್ಷದ ಶ್ರಮ ತೆರೆಯ ಮೇಲೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ‌. ಚಿತ್ರ ಬಿಡುಗಡೆ ಸಂಬಂಧ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆಗೆ ವಿತರಕರಿಂದ ಸಾಕಷ್ಟು ಬೇಡಿಕೆ ಬಂದಿದೆ' ಎಂದು ಚಿತ್ರದ ವಿತರಕ ರಾಕ್ ಲೈನ್ ವೆಂಕಟೇಶ್ ತಿಳಿಸಿದರು.

ADVERTISEMENT

ನಟ ದರ್ಶನ್ ಮಾತನಾಡಿ, 2D ಮತ್ತು 3D ರೂಪದಲ್ಲಿ ಸಿನಿಮಾ ಬರುತ್ತಿದೆ. ಎಪ್ಪತ್ತರ ದಶಕದಿಂದ ಇಲ್ಲಿಯವರೆಗೆ ಚಿತ್ರರಂಗದಲ್ಲಿ ಇರುವ ಎಲ್ಲಾ ಕಲಾವಿದರು ಕುರುಕ್ಷೇತ್ರ ಸಿನಿಮಾದಲ್ಲಿದ್ದಾರೆ. ಎಲ್ಲರ ಅಭಿನಯವೂ ಮನೋಜ್ಞವಾಗಿದೆ ಎಂದರು.

ಪೌರಾಣಿಕ ಸಿನಿಮಾಗಳನ್ನು ಮಾಡಲು ನಿರ್ಮಾಪಕರಿಗೆ ಎದೆಗಾರಿಕೆ ಬೇಕು. ಚಿತ್ರದ ನಿರ್ಮಾಪಕ ಮುನಿರತ್ನ ಅವರೇ ಈ ಚಿತ್ರದ ನಿಜವಾದ ಹೀರೊ. ನಿರ್ದೇಶಕ ನಾಗಣ್ಣ ಅವರ ಪರಿಶ್ರಮವೂ ದೊಡ್ಡದು ಎಂದು ಹೊಗಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.