ADVERTISEMENT

'ಮುನಿರತ್ನ ಕುರುಕ್ಷೇತ್ರ'ದ ಆಡಿಯೊ ಬಿಡುಗಡೆ

ಆಗಸ್ಟ್ 2ರಂದು ಏಕಕಾಲಕ್ಕೆ ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ತೆರೆಗೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 16:04 IST
Last Updated 7 ಜುಲೈ 2019, 16:04 IST
   

ಬೆಂಗಳೂರು:ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ 'ಮುನಿರತ್ನ ಕುರುಕ್ಷೇತ್ರ' ಚಿತ್ರದ ಆಡಿಯೊ ಅದ್ದೂರಿಯಾಗಿ ಬಿಡುಗಡೆಯಾಯಿತು.

ನಾಗಣ್ಣ ನಿರ್ದೇಶನದ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ನಟನೆಯ 50ನೇ ಚಿತ್ರ ಇದು. ಆಗಸ್ಟ್ 2ರಂದು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ 2D ಮತ್ತು 3D ರೂಪದಲ್ಲಿ ತೆರೆಕಾಣಲಿದೆ.

ನಿರ್ಮಾಪಕ ಮುನಿರತ್ನ ಮಾತನಾಡಿ, 'ಕನ್ನಡದ ಎಲ್ಲ ಕಲಾವಿದರನ್ನು ಒಂದೇ ತೆರೆಯ ಮೇಲೆ ನೋಡುವ ಅವಕಾಶ ಸಿಗುವುದೇ ಈ ಚಿತ್ರದ ಹಿರಿಮೆ. ಅಂಬರೀಷ್ ಭೀಷ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಈಗ ನಮ್ಮೊಂದಿಗಿಲ್ಲ ಎನ್ನುವುದು‌ ನೋವಿನ ಸಂಗತಿ' ಎಂದರು.

ADVERTISEMENT

ನಿರ್ದೇಶಕ ನಾಗಣ್ಣ ಮಾತನಾಡಿ, 'ಇಂತಹ ಸಿನಿಮಾ ಮಾಡಲು ನಿರ್ಮಾಪಕರಿಗೆ ಎದೆಗಾರಿಕೆ ಬೇಕು. ಮಹಾಭಾರತದ ಕಥೆ 3D ರೂಪದಲ್ಲಿ‌ ಬರುತ್ತಿರುವುದು ಭಾರತೀಯ ಚಿತ್ರರಂಗದಲ್ಲಿ‌ ಇದೇ ಮೊದಲು. ಇದು ಕನ್ನಡಿಗರು ಹೆಮ್ಮೆ ಪಡುವ ಸಂಗತಿ' ಎಂದು ಹೇಳಿದರು.
ಪೋಷಕ ನಟ ಶ್ರೀನಿವಾಸಮೂರ್ತಿ ಮಾತನಾಡಿ, 'ಮಹಾಭಾರತದ ಕೃಷ್ಣ, ದುರ್ಯೋಧನ, ಅರ್ಜುನನ ಪಾತ್ರ ಎಂದಾಕ್ಷಣ ಇಂದಿಗೂ ತೆಲುಗಿನ ನಟ ಎನ್ಟಿಆರ್ ಅವರ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ದರ್ಶನ್ ಅವರು ಎನ್ಟಿಆರ್ ಅವರ ಪಾತ್ರವನ್ನು ಮೀರಿಸುವಂತೆ ದುರ್ಯೋಧನನ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ನಟ ಶ್ರೀನಾಥ್ ಮಾತನಾಡಿ, ಹಳೆಯ ಕಾಲದ ಪೌರಾಣಿಕ ಚಿತ್ರಗಳಿಗೂ ಮತ್ತು ಈಗಿನ ಚಿತ್ರಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಈಗಿನ ಸಿನಿಮಾಗಳು ತಾಂತ್ರಿಕವಾಗಿ ಸಮೃದ್ಧವಾಗಿವೆ ಎಂದು ಹೇಳಿದರು.

ನಟರಾದ ರಮೇಶ್ ಭಟ್, ವಿ. ನಾಗೇಂದ್ರ ಪ್ರಸಾದ್ ಅನುಭವ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.