ADVERTISEMENT

ಇದು ದರ್ಶನ್‌ ಕುರುಕ್ಷೇತ್ರ!

ಕೆ.ಎಚ್.ಓಬಳೇಶ್
Published 9 ಆಗಸ್ಟ್ 2019, 10:48 IST
Last Updated 9 ಆಗಸ್ಟ್ 2019, 10:48 IST
‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌ ಮತ್ತು ಮೇಘನಾ ರಾಜ್
‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌ ಮತ್ತು ಮೇಘನಾ ರಾಜ್   

ಚಿತ್ರ: ಮುನಿರತ್ನ ಕುರುಕ್ಷೇತ್ರ

ನಿರ್ಮಾಪಕ: ಮುನಿರತ್ನ

ನಿರ್ದೇಶನ: ನಾಗಣ್ಣ

ADVERTISEMENT

ತಾರಾಗಣ: ದರ್ಶನ್‌, ಅಂಬರೀಷ್‌, ರವಿಶಂಕರ್, ಅರ್ಜುನ್‌ ಸರ್ಜಾ, ರವಿಚಂದ್ರನ್, ಶ್ರೀನಿವಾಸಮೂರ್ತಿ, ಶಶಿಕುಮಾರ್, ಸೋನು ಸೂದ್‌, ಡ್ಯಾನಿಶ್‌ ಅಖ್ತರ್, ನಿಖಿಲ್‌ ಕುಮಾರ್, ಮೇಘನಾ ರಾಜ್‌

---

ವರನಟ ರಾಜಕುಮಾರ್‌ ಅವರ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳೇ ನಮಗೆ ಇಂದಿಗೂ ಮಾದರಿ. ಅವರ ನಟನೆಯ ಪ್ರಭಾವದಿಂದಲೇ ರಂಗದ ಮೇಲೆ ಪೌರಾಣಿಕ ನಾಟಕವನ್ನು ಕುಶಲವಾಗಿ ಕಟ್ಟಿ ವೃತ್ತಿಪರತೆ ಮೆರೆಯುವ ಕಲಾವಿದರು ಗ್ರಾಮೀಣ ಜಗತ್ತಿನಲ್ಲಿ ಸಾಕಷ್ಟಿದ್ದಾರೆ. ಆದರೆ, ಕನ್ನಡದ ಹೊಸ ತಲೆಮಾರಿನ ನಟರು ಪ್ರಯೋಗಗಳಿಗೆ ಒಗ್ಗಿಕೊಳ್ಳದೆ ಹಿಂದಡಿ ಇಡುವುದೇ ಹೆಚ್ಚು. ಅಣ್ಣಾವ್ರ ಚಿತ್ರಗಳೊಂದಿಗೆ ಅವರ ಸಿನಿಮಾವನ್ನು ಹೋಲಿಕೆ ಮಾಡುವುದೇ ಇದಕ್ಕೆ ಕಾರಣ ಎಂದು ಬಿಡಿಸಿಹೇಳಬೇಕಿಲ್ಲ.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಕನ್ನಡದ ಹಳೆಯ ಪೌರಾಣಿಕ ಸಿನಿಮಾಗಳ ಮಟ್ಟಕ್ಕೆ ತಲುಪದಿದ್ದರೂ ನೋಡುಗರಿಗೆ ನಿರಾಶೆ ಮೂಡಿಸುವುದಿಲ್ಲ. ಮೂರು ಗಂಟೆಗಳ ಸುದೀರ್ಘ ಕಥನವನ್ನು ಪರದೆ ಮೇಲೆ ನಿರೂಪಿಸುವಲ್ಲಿ ನಿರ್ದೇಶಕ ನಾಗಣ್ಣ ಅವರ ಶ್ರಮ ಎದ್ದುಕಾಣುತ್ತದೆ. ಅದಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಮತ್ತು ಜಯನೆನ್ ವಿನ್ಸೆಂಟ್‌ ಅವರ ಛಾಯಾಗ್ರಹಣದ ಕೊಡುಗೆಯೂ ದೊಡ್ಡದಿದೆ.

ಇದು ದರ್ಶನ್ ಅವರ 50ನೇ ಸಿನಿಮಾ. ಇದರಿಂದ ಚಿತ್ರದ ಮೇಲೆ ನಿರೀಕ್ಷೆಯ ಭಾರ ಹೆಚ್ಚಿತ್ತು. ದುರ್ಯೋಧನನ ಪಾತ್ರದಲ್ಲಿ ಅವರು ತಮ್ಮ ನಿಲುವು, ಕಣ್ಣೋಟ, ಗತ್ತಿನಿಂದ ಮನ ಸೆಳೆಯುತ್ತಾರೆ. ಅವರ ಪ್ರಭಾವಳಿ ಮತ್ತು ವ್ಯಾಪಾರಿ ಸೂತ್ರದ ಚೌಕಟ್ಟಿನಲ್ಲಿಯೇ ರೂಪುಗೊಂಡಿರುವ ಸಿನಿಮಾ ಇದು. ಹಾಗಾಗಿ, ಪಾತ್ರದೊಳಗೆ ಅವರೆಷ್ಟು ಪರಕಾಯ ಪ್ರವೇಶ ಮಾಡಿದ್ದಾರೆಂಬ ಲೆಕ್ಕಾಚಾರ ಬದಿಗಿಟ್ಟು ಸಿನಿಮಾ ನೋಡುವುದು ಅನಿವಾರ್ಯ.

ದರ್ಶನ್‌ ಡೈಲಾಗ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಆದರೆ, ಅವರ ಕಣ್ಣಲ್ಲಿ ಕಣ್ಣಿಟ್ಟು ಕೌರವರ ನಾಶಕ್ಕೆ ಪಣತೊಡುವ ಶಕುನಿ ಪಾತ್ರಧಾರಿಯಾಗಿ ರವಿಶಂಕರ್‌ ಅವರು ಕ್ರೌರ್ಯವನ್ನೇ ಮೆತ್ತಿಕೊಂಡಂತೆ ಅಭಿನಯಿಸಿದ್ದಾರೆ. ಪಗಡೆಯಾಟದ ದೃಶ್ಯಗಳಲ್ಲಿ ಅವರ ನಟನೆಗೆ ಪ್ರೇಕ್ಷಕರು ಮನಸೋಲದೆ ಇರಲಾರರು.

ಕನ್ನಡದ ಹಳೆಯ ಪೌರಾಣಿಕ ಮತ್ತು ಚಾರಿತ್ರಿಕ ಸಿನಿಮಾಗಳಲ್ಲಿನ ಸಂಭಾಷಣೆ ಜನರಿಗೆ ಬಹುಬೇಗ ಅರ್ಥವಾಗುತ್ತದೆ. ಇದೇ ಆ ಸಿನಿಮಾಗಳ ಶಕ್ತಿ. ಅಂತಹ ಶಕ್ತಿಯು ಕುರುಕ್ಷೇತ್ರಕ್ಕೆ ದಕ್ಕಿಲ್ಲ. ಹಲವು ಸನ್ನಿವೇಶಗಳಲ್ಲಿನ ಸಂಭಾಷಣೆ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಹಾಗಾಗಿಯೇ, ಅನುಭವಿ ನಟರ ದೊಡ್ಡ ದಂಡೇ ಇದ್ದರೂ ಅವರ ಸಂಭಾಷಣೆ ಗಿಳಿಪಾಠ ಒಪ್ಪಿಸಿದಂತೆ ಕೇಳಿಸುತ್ತದೆ. ದರ್ಶನ್‌ ಜೊತೆಗಿನ ಹರಿಪ್ರಿಯಾ ನೃತ್ಯ ಕ್ಯಾಬರೆ ಡಾನ್ಸ್ ಅನ್ನು ನೆನಪಿಸುತ್ತದೆ.

ದೃಶ್ಯ ಶ್ರೀಮಂತಿಕೆ ಹಾಗೂ ರಂಜನೆಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಸೊಗಸಾಗಿ ಕಥೆ ಹೇಳುವ ನಿರ್ದೇಶಕರ ಉಮೇದು ಹಿನ್ನೆಲೆಗೆ ಸರಿದಿದೆ. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ನಿರ್ದೇಶಕ ನಾಗಣ್ಣ ರಣರಂಗದಲ್ಲಿನ ಯುದ್ಧೋನ್ಮಾದವನ್ನು ಭೀಭತ್ಸ ಸನ್ನಿವೇಶಗಳ ಮೂಲಕ ಚಿತ್ರಿಸಿದ್ದರು. ಅವರ ಆ ದಾಟಿ ಇಲ್ಲಿ ತುಸು ಬದಲಾಗಿದೆ. ಆದರೆ, ದ್ವಾಪರಯುಗದ ಸುದೀರ್ಘ ಕಥನವನ್ನು ಕೆಲವೆಡೆ ಜನರಿಗೆ ಅರ್ಥವಾಗದ ಸಂಭಾಷಣೆ ಮೂಲಕ ಹೇಳುವ ಅನಿವಾರ್ಯತೆ ಅವರಿಗೆ ಎದುರಾಗಿರುವುದು ವಿಪರ್ಯಾಸ.

ಪ್ರಸ್ತುತ ಕನ್ನಡದಲ್ಲಿ ಪೌರಾಣಿಕ ಸಿನಿಮಾಗಳ ಪರಂಪರೆಯೇ ಕ್ಷೀಣಿಸುತ್ತಿದೆ. ಹಲವು ಕೊರತೆಗಳ ನಡುವೆಯೂ 3ಡಿ ಪೋಷಾಕು ಧರಿಸಿರುವ ‘ಮುನಿರತ್ನ ಕುರುಕ್ಷೇತ್ರ’ಮೆಚ್ಚುಗೆಗೆ ಅರ್ಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.