ADVERTISEMENT

‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಕಿರುಚಿತ್ರಕ್ಕೆ Cannes ಪ್ರಶಸ್ತಿ

ಕನ್ನಡಕ್ಕೆ ಮೊದಲ ಕಾನ್ ಪ್ರಶಸ್ತಿ ತಂದುಕೊಟ್ಟ ಚಿದಾನಂದ ನಾಯಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮೇ 2024, 5:29 IST
Last Updated 24 ಮೇ 2024, 5:29 IST
   

ಬೆಂಗಳೂರು: ಮೈಸೂರಿನ ಡಾ.ಚಿದಾನಂದ ಎಸ್‌ ನಾಯ್ಕ್‌ ನಿರ್ದೇಶಿಸಿರುವ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಎಂಬ ಕನ್ನಡ ಕಿರುಚಿತ್ರ ಪ್ರತಿಷ್ಠಿತ ಕಾನ್‌ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ ( ಲಾ ಸಿನೆಫ್} ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಇದು ಭಾರತಕ್ಕೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ ಎಂದು ವರದಿ ತಿಳಿಸಿದೆ.

ಈ ಮೂಲಕ ಚಿತ್ರಕ್ಕೆ 15000 ಯೂರೊ(₹13.5 ಲಕ್ಷ) ಬಹುಮಾನ ಸಿಗಲಿದೆ.

ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದೊಂದಿಗೆ ಅಜ್ಜಿ ಓಡಿಹೋಗುವ ಜನಪದ ಕಥಾವಸ್ತುವನ್ನು ಈ ಕಿರುಚಿತ್ರ ಹೊಂದಿದೆ.

ADVERTISEMENT

ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ (ಎಫ್‌ಟಿಐಐ) ಸಂಸ್ಥೆ ನಿರ್ಮಿಸಿರುವ ಈ ಕಿರುಚಿತ್ರದ ರಚನೆ ಹಾಗೂ ನಿರ್ದೇಶನ ಚಿದಾನಂದ ಅವರದ್ದು. ವಿ.ಮನೋಜ್‌– ಸಂಕಲನ, ಸೂರಜ್‌ ಠಾಕೂರ್‌– ಛಾಯಾಗ್ರಹಣ, ಅಭಿಷೇಕ್‌ ಕದಂ ಅವರ ಶಬ್ದವಿನ್ಯಾಸ ಚಿತ್ರಕ್ಕಿದೆ.

ಈ ವಿಭಾಗದಲ್ಲಿ ಭಾಗವಹಿಸಿದ್ದ 2,263 ಕಿರುಚಿತ್ರಗಳಲ್ಲಿ 18 ಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು, ಅವುಗಳಲ್ಲಿ ಇದ್ದ ಏಕೈಕ ಭಾರತೀಯ ಸಿನಿಮಾ ಇದಾಗಿತ್ತು.

ಲಾ ಸಿನೆಫ್ ಬಹುಮಾನ ಗೆದ್ದ ಭಾರತದ ಎರಡನೇ ಕಿರುಚಿತ್ರ ಇದಾಗಿದ್ದು, 2020ರಲ್ಲಿ ಅಶ್ಮಿತಾ ಗುಹಾ ನಿಯೋಗಿ ನಿರ್ದೇಶನದ ‘ಕ್ಯಾಟ್‌ಡಾಗ್’ ಬಹುಮಾನ ಗೆದ್ದಿತ್ತು.

ಇದೊಂದು ಕರ್ನಾಟಕದ ಜಾನಪದಕ್ಕೆ ಸಂಬಂಧಿಸಿದ ಕಥಾಹಂದರ ಹೊಂದಿರುವ ಕಿರುಚಿತ್ರವಾಗಿದ್ದು, ನನ್ನ ಬಾಲ್ಯದಿಂದಲೂ ಇಂಥದೊಂದು ಕಥೆ ಮನಸಿನಲ್ಲಿಟ್ಟುಕೊಂಡಿದ್ದೆ ಎಂದು ಚಿದಾನಂದ ಅವರು ತಿಳಿಸಿರುವುದಾಗಿ ಸುದ್ಧಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಅಜ್ಜನಾಗಿ ನಟಿಸಿದ್ದಾರೆ.

ಎರಡನೇ ಬಹುಮಾನವನ್ನು ಕೊಲಂಬಿಯಾ ವಿಶ್ವವಿದ್ಯಾಲಯದ ಅಸ್ಯ ಸೆಗಲೊವಿಚ್ ನಿರ್ದೆಶನದ ‘ಔಟ್ ಆಫ್ ದ ವಿಡೊ ಥ್ರೂ ದ ವಾಲ್’ ಮತ್ತು ಗ್ರೀಸ್‌ನ ಥೆಸಲೋನಿಕಿಯ ಅರಿಸ್ಟಾಟಲ್ ವಿಶ್ವವಿದ್ಯಾನಿಲಯದ ನಿಕೋಸ್ ಕೊಲಿಯೋಕೋಸ್ ಅವರು ನಿರ್ದೇಶಿಸಿರುವ ಚೋಸ್ ಶೀ ಲೆಫ್ಟ್ ಬಿಹೈಂಡ್ ಚಿತ್ರಗಳು ಹಂಚಿಕೊಂಡಿವೆ.

ಲಾ ಸಿನೆಫ್ ವಿಭಾಗದ ಮೂರನೇ ಬಹುಮಾನವನ್ನು ಮಾನಸಿ ಮಹೇಶ್ವರಿ ಅವರ ಆ್ಯನಿಮೇಶನ್ ಚಿತ್ರ ‘ಬನ್ನಿ ಹುಡ್’ ಗೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.