ಮೈಸೂರಿನ ಡಾ.ಚಿದಾನಂದ ಎಸ್ ನಾಯ್ಕ್ ನಿರ್ದೇಶಿಸಿರುವ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಕನ್ನಡ ಕಿರುಚಿತ್ರ ಕಾನ್ಸ್ ಚಿತ್ರೋತ್ಸವಕ್ಕೆ ಆಯ್ಕೆಗೊಂಡಿದೆ. ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದೊಂದಿಗೆ ಅಜ್ಜಿ ಓಡಿಹೋಗುವ ಜನಪದ ಕಥಾವಸ್ತುವನ್ನು ಈ ಕಿರುಚಿತ್ರ ಹೊಂದಿದೆ.
‘ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ(ಎಫ್‌ಟಿಐಐ) ಹಳೆಯ ವಿದ್ಯಾರ್ಥಿಯ ಚಿತ್ರವಾದ ‘Sunflowers were the first ones to know’ ಕಿರುಚಿತ್ರವು 77ನೇ ಕಾನ್ಸ್ ಚಿತ್ರೋತ್ಸವಕ್ಕೆ ‘ಲಾ ಸಿನೆಫ್’ ವಿಭಾಗದಲ್ಲಿ ಆಯ್ಕೆಗೊಂಡಿದೆ. ಭಾಗವಹಿಸಿದ್ದ 2,263 ಕಿರುಚಿತ್ರಗಳಲ್ಲಿ 18 ಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಅವುಗಳಲ್ಲಿ ಏಕೈಕ ಭಾರತೀಯ ಸಿನಿಮಾ ಇದಾಗಿದೆ. ಈ ಕಿರುಚಿತ್ರ ನಿರ್ಮಾಣದಲ್ಲಿ ಭಾಗಿಯಾದ ಸಂಸ್ಥೆಯ ನಾಲ್ವರು ಹಳೆ ವಿದ್ಯಾರ್ಥಿಗಳಿಗೂ ಅಭಿನಂದನೆಗಳು’ ಎಂದು ಎಫ್‌ಟಿಐಐ ಟ್ವೀಟ್ ಮಾಡಿದೆ.
ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಅಜ್ಜನಾಗಿ ನಟಿಸಿದ್ದಾರೆ. ‘ನಾನು ಕರ್ನಾಟಕದ ಬಂಜಾರ ಸಮುದಾಯಕ್ಕೆ ಸೇರಿದವನು. ವೃತ್ತಿಯಿಂದ ವೈದ್ಯ. ಆಸಕ್ತಿಯಿಂದಾಗಿ ಸಿನಿಮಾ ನಿರ್ದೇಶನ ಕೋರ್ಸ್‌ಗೆ ಸೇರಿಕೊಂಡೆ. ನಮ್ಮಲ್ಲಿ ಈ ರೀತಿ ಜನಪದ ಕಥೆ ಹೇಳುವ ತಲೆಮಾರು ಮರೆಯಾಗುತ್ತಿದೆ. ಅಲ್ಲದೆ ಈ ಕಥೆ ಕರ್ನಾಟಕದಿಂದ ಆಚೆಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ಈ ವಿಷಯ ಆಯ್ದುಕೊಂಡೆ. ಇಲ್ಲಿ ಆಯ್ಕೆಯಾಗುವವರೆಗೂ ಚಿತ್ರವನ್ನು ಕಾನ್ಸ್‌ಗೆ ಸಲ್ಲಿಸಿದ್ದು ನನಗೆ ತಿಳಿದಿರಲಿಲ್ಲ. ನಮ್ಮ ನಾಡಿನ ಕಥೆಯ ಚಿತ್ರ ವಿಶ್ವಮಟ್ಟದಲ್ಲಿ ವೇದಿಕೆ ಪಡೆದುಕೊಂಡಿರುವುದು ಸಂತಸ ಮೂಡಿಸಿದೆ. ಚಿತ್ರದ ಸಂಕಲನಕಾರ ಮನೋಜ್ ಕೂಡ ಕನ್ನಡದವರು. ಉಳಿದಿಬ್ಬರು ಮಹಾರಾಷ್ಟ್ರದವರು’ ಎನ್ನುತ್ತಾರೆ ಚಿದಾನಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.