‘ಸಿನಿಮಾ ನಿರ್ದೇಶನಕ್ಕಿಂತ ಪ್ರಚಾರದಲ್ಲಿಯೇ ಆಸಕ್ತಿ ಜಾಸ್ತಿ’ – ನಿರ್ದೇಶಕ ಪವನ್ ಕುಮಾರ್ ಅವರ ಕುರಿತು ಇಂಥದ್ದೊಂದು ಕುಹಕದ ಮಾತು ಚಾಲ್ತಿಯಲ್ಲಿತ್ತು. ಇದನ್ನು ಕೇಳಿದ ಪವನ್‌ಗೆ ತಮ್ಮ ಬಗ್ಗೆ ಬೇರೆಯವರು ಹೀಗೆ ಮಾತಾಡಿಕೊಳ್ಳುವ ಬದಲು ತಾನೇ ತಮಾಷೆ ಮಾಡಿಕೊಂಡರೆ ಹೇಗಿರುತ್ತದೆ ಎನಿಸಿತು. ಆಗ ತಕ್ಷಣಕ್ಕೆ ಅವರ ನೆನಪಿಗೆ ಬಂದಿದ್ದು ಕನ್ನಡದಲ್ಲಿ ತುಂಬ ಸೃಜನಶೀಲವಾಗಿ ವೆಬ್ ಎಪಿಸೋಡ್‌ಗಳನ್ನು ಮಾಡುತ್ತಿದ್ದ ’ಕೆಇಬಿ’ ಎಂಬ ತರುಣರ ತಂಡ. ಆ ತಂಡ ರೂಪಿಸಿದ ‘ವೀಕೆಂಡ್ ವಿತ್ ಸುರೇಶ್’ ಮತ್ತು ‘ಎಫೆಕ್ಟ್ ಆಫ್ ಸೋಷಿಯಲ್ ಮೀಡಿಯಾ’ ಎಂಬ ವೆಬಿಸೋಡ್‌ಗಳು ಸಾಕಷ್ಟು ವೈರಲ್‌ಗಳಾಗಿದ್ದವು. ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮವನ್ನು ಅಣುಕು ಮಾಡುವ ವೆಬಿಸೋಡ್ ಅನ್ನು ಸ್ವತಃ ನಟ ರಮೇಶ್ ಅವರೇ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದರು. ಈ ಹುಡುಗರ ಜತೆ ಸೇರಿಕೊಂಡು ಏನಾದರೂ ಮಾಡಬೇಕು ಎಂಬ ಉಮೇದಿ ಪವನ್‌ಗೆ ಬಂತು.
‘ಹೈಫರ್ ಫಿಲಂ ಪ್ರಮೋಷನ್ ಸಿಂಡ್ರೋಮ್’ ಇಂಥದ್ದೊಂದು ವಿಚಿತ್ರ ಕಾಯಿಲೆಯನ್ನು ಸೃಷ್ಟಿಸಿಕೊಂಡು, ಆ ರೋಗಕ್ಕೆ ಬಲಿಯಾದ ನಿರ್ದೇಶಕನಾಗಿ ಪವನ್ ಅವರನ್ನು ತೋರಿಸಿದ ಆ ವೆಬಿಸೋಡ್ ಬಹಳ ಜನಪ್ರಿಯವಾಯಿತು. ಆ ವೆಬಿಸೋಡ್‌ನಲ್ಲಿ ಪವನ್ ಅವರ ಕಾಯಿಲೆ ವಾಸಿ ಮಾಡುವ ವೈದ್ಯ ‘ಡಾ. ಕಾಮೇಶ್’ ಪಾತ್ರವೂ ಸಾಮಾಜಿಕ ಮಾಧ್ಯಮಗಳಲ್ಲಿ ಹಿಟ್ ಆಯಿತು. ಪವನ್ ಪ್ರಚಾರದ ಹುಚ್ಚು ಬಿಡಿಸುವ ವೈದ್ಯನಾಗಿ ಕಾಣಿಸಿಕೊಂಡಿದ್ದು ನಾಗಭೂಷಣ್ ಎನ್.ಎಸ್. ಇದೀಗ ಅವರು ಕನ್ನಡ ಚಿತ್ರರಂಗದಲ್ಲಿಯೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತ ಗಟ್ಟಿ ಹೆಜ್ಜೆ ಊರುತ್ತಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ‘ಸಂಕಷ್ಟಕರ ಗಣಪತಿ’ ಚಿತ್ರವನ್ನು ನೋಡಿದವರಿಗೆ ನಾಗಭೂಷಣ್ ನಟನೆ ನಗೆಗುಳಿಗೆಯಂತೆ ಭಾಸವಾದರೆ ಆಶ್ಚರ್ಯವಿಲ್ಲ.
ಚಿತ್ರರಂಗಕ್ಕೆ ನಾಗಭೂಷಣ್ ತೀರಾ ಹೊಸಬರೇನೂ ಅಲ್ಲ. ಒಮ್ಮಿಂದೊಮ್ಮೆಲೇ ಉದ್ಭವಿಸಿದ ಪ್ರತಿಭೆಯೂ ಅಲ್ಲ. ಅವರು ಇಂದು ಗಿಟ್ಟಿಸಿಕೊಳ್ಳುತ್ತಿರುವ ಅವಕಾಶಗಳ ಹಿಂದೆ ಎಂಟು ವರ್ಷಗಳ ಅನುಭವ ಮತ್ತು ಶ್ರಮ ಎರಡೂ ಇದೆ. ಅದರ ಜತೆಗೆ ರಂಗಭೂಮಿಯ ಬೇರೂ ಇದೆ.
ಕೊಳ್ಳೆಗಾಲ ಸಮೀಪದ ಹಳ್ಳಿಯೊಂದರಲ್ಲಿ ಬೆಳೆದು, ನವೋದಯ ಶಾಲೆಯಲ್ಲಿ ಓದಿ, ಎಂಜಿನಿಯರಿಂಗ್‌ಗಾಗಿ ಮೈಸೂರು ಸೇರಿಕೊಂಡವರು ನಾಗಭೂಷಣ್. ಕಾಲೇಜು ದಿನಗಳಲ್ಲಿಯೇ ರಂಗಭೂಮಿಯ ಗೀಳೂ ಹತ್ತಿಕೊಂಡಿದ್ದು. ಮೈಮ್ ರಮೇಶ್ ಅವರ ಜತೆ ಕೆಲಸ ಮಾಡಿದ ಅವರು, ಹಗಲಲ್ಲಿ ಕಾಲೇಜು, ರಾತ್ರಿ ನಾಟಕಗಳ ತಾಲೀಮು ಮಾಡಿಕೊಂಡು ತಮ್ಮ ನಟನಾಪ್ರತಿಭೆಗೆ ಸಾಣೆ ಹಿಡಿದವರು. ಆಗ ಅವರ ಜತೆ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದವರಲ್ಲಿ ನಟ ಧನಂಜಯ್ ಕೂಡ ಒಬ್ಬರು.
ಕಾಲೇಜು ಮುಗಿಸಿದ ಮೇಲೆ ಪಬ್ಲಿಕ್ ಡೆವಲೆಪ್‌ಮೆಂಟ್ ಆಫೀಸರ್ ಆಗಿ ಸರ್ಕಾರಿ ಕೆಲಸವೂ ಅವರಿಗೆ ಸಿಕ್ಕಿತ್ತು. ಆದರೆ ಮನಸಿನೊಳಗೆ ಬೇರುಬಿಟ್ಟಿದ್ದ ನಟನೆಯ ಹೆಬ್ಬಯಕೆ ತಿಂಗಳ ಸಂಬಳ ಎಣಿಸಿಕೊಂಡು ತೆಪ್ಪಗೆ ಇರಲು ಬಿಡಬೇಕಲ್ಲ. ಸರ್ಕಾರಿ ಕೆಲಸ ಬಿಟ್ಟು ಬಣ್ಣದ ಕನಸುಗಳನ್ನು ಹೊತ್ತುಕೊಂಡು ಬೆಂಗಳೂರು ಸೇರಿದರು. ‘‘ನಾನು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟಾರೆ ಮನೆಯವರೆಲ್ಲರೂ ಸಾಕಷ್ಟು ಬೈದರು. ‘ಎಲ್ರಿಗೂ ಇಂಥ ಅವಕಾಶ ಸಿಗುವುದಿಲ್ಲ. ನಿನಗೆ ಸಿಕ್ಕ ಅವಕಾಶ ಬಿಟ್ಟು ಜೀವನ ಹಾಳು ಮಾಡ್ಕೋಬೇಡ’ ಎಂದು ಬುದ್ದಿವಾದ ಹೇಳಿದರು. ಮನೆಯವರಿಗಿಂತ ಸಂಬಂಧಿಕರ ಪ್ರಶ್ನೆಗಳಿಗೆ ಉತ್ತರಿಸುವುದೇ ಕಷ್ಟವಾಗುತ್ತಿತ್ತು. ಆದರೆ ಅದನ್ನೆಲ್ಲ ನುಂಗಿಕೊಂಡು ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡೆ. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ’’ ಎಂದು ತಾವು ಚಿತ್ರರಂಗಕ್ಕೆ ಬಂದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ ನಾಗಭೂಷಣ್.
ಏನಾದರೂ ಹೊಸದನ್ನು ಮಾಡುತ್ತಿರಬೇಕು ಎಂಬ ಅವರೊಳಗಿನ ತುಡಿತ ಮತ್ತು ಸಮಾನ ಮನಸ್ಕ ಸ್ನೇಹಿತರ ಬೆಂಬಲ ಎರಡೂ ಸೇರಿ ‘ಕೆಇಬಿ’ ತಂಡ ಸಿದ್ಧವಾಯಿತು. ‘ವೆಬಿಸೋಡ್‌ಗಳು ಕನ್ನಡಕ್ಕೆ ಅಪರೂಪವಾಗಿದ್ದವು. ಅಂತರ್ಜಾಲದಲ್ಲಿ ಕಾಮಿಡಿ ಕಂಟೆಂಟ್ ಅನ್ನು ಜನ ಜಾಸ್ತಿ ನೋಡುತ್ತಾರೆ ಎಂಬುದು ಗೊತ್ತಿತ್ತು. ಆದರೆ ಅಗ್ಗದ ಹಾಸ್ಯ ಮಾಡಲು ನಮಗೆ ಮನಸ್ಸಿರಲಿಲ್ಲ. ಆದ್ದರಿಂದ ವಿಡಂಬನೆ ಸ್ವರೂಪದ ನಗುವುಕ್ಕಿಸುವ ಕಂಟೆಂಟ್ ಸಿದ್ಧಪಡಿಸಬೇಕು ಎಂದುಕೊಂಡೆವು. ಎಂಜಿನಿಯರ್‌ಗಳ ಬದುಕನ್ನೇ ಇಟ್ಟುಕೊಂಡು ಒಂದು ವೆಬಿಸೋಡ್ ಮಾಡಿದೆವು. ಅದು ಎಲ್ಲರಿಗೂ ಇಷ್ಟವಾಯ್ತು. ವೀಕೆಂಡ್ ವಿತ್ ಸುರೇಶ್ ಕೂಡ ನಮಗೆ ಮೆಚ್ಚುಗೆಯನ್ನು ತಂದುಕೊಟ್ಟಿತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.
‘‘ಒಮ್ಮಿಂದೊಮ್ಮೆಲೆ ‘ನಾನು ಒಳ್ಳೆಯ ನಟ, ನನಗೆ ಅವಕಾಶ ಕೊಡಿ’ ಎಂದರೆ ಯಾರೂ ಅವಕಾಶ ಕೊಡುವುದಿಲ್ಲ. ಅದಕ್ಕೂ ಮುನ್ನ ನನ್ನ ಪ್ರತಿಭೆಯನ್ನು ನಾನು ಸಾಬೀತು ಮಾಡಿಕೊಳ್ಳಬೇಕಿತ್ತು. ಕೆಇಬಿ ವೆಬಿಸೋಡ್ ಅದಕ್ಕೆ ವೇದಿಕೆಯಾಗಿತ್ತು. ಹಾಗೆಯೇ ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದರಿಂದ ನನಗೆ ಒಂದಿಷ್ಟು ಸಂಪರ್ಕಗಳಿದ್ದವು. ಅವರು ನನ್ನ ಪ್ರತಿಭೆಯನ್ನು ನೋಡಿ ಅವಕಾಶ ಕೊಡಲಾರಂಭಿಸಿದರು’ ಎಂದು ಹಿರಿತೆರೆಯಲ್ಲಿ ಜಾಗ ಗಿಟ್ಟಿಸಿಕೊಂಡ ಬಗೆಯನ್ನು ಅವರು ವಿವರಿಸುತ್ತಾರೆ.
ನಾಗಭೂಷಣ್ ಮೊದಲು ನಟಿಸಿದ ಸಿನಿಮಾ ‘ಬದ್ಮಾಷ್’. ನಂತರ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರ ಒಂದಿಷ್ಟು ಹೆಸರು ತಂದುಕೊಟ್ಟಿತು. ಈಗ ‘ಸಂಕಷ್ಟಕರ ಗಣಪತಿ’ ಚಿತ್ರದಲ್ಲಿನ ಪಾತ್ರದ ಬಗ್ಗೆಯೂ ಅವರಿಗೆ ಖುಷಿ ಇದೆ. ಇದರ ಜತೆಗೆ ಸತ್ಯಪ್ರಕಾಶ್ ನಿರ್ದಶನದ ‘ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ಅವರು ಒಂದು ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಬಗೆಗೂ ಅವರಿಗೆ ಸಾಕಷ್ಟು ನಿರೀಕ್ಷೆ ಇದೆ.
‘ಸತ್ಯ ನನಗೆ ತುಂಬ ಹಳೆಯ ಪರಿಚಯ. ಅವರು ಚಿತ್ರಕಥೆಗೆ ಸಾಕಷ್ಟು ಒತ್ತುಕೊಡುವವರು. ನನಗೆ ಈ ಚಿತ್ರದ ಕಥೆ ಹೇಳಿದಾಗ ಅದರಲ್ಲಿ ಒಂದು ಪಾತ್ರ ವಿಶೇಷವಾಗಿ ನನ್ನ ಗಮನ ಸೆಳೆಯಿತು. ಆ ಪಾತ್ರಕ್ಕೆ ಇನ್ನೂ ಕಲಾವಿದರು ಆಯ್ಕೆ ಆಗಿಲ್ಲ ಎಂಬುದೂ ಗೊತ್ತಾಯಿತು. ‘ನಾನು ಆ ಪಾತ್ರ ಮಾಡಲಾ?’ ಎಂದು ಹೇಳಿ ಪಡೆದುಕೊಂಡೆ’ ಎನ್ನುವ ಅವರಿಗೆ ತಮ್ಮ ಆಯ್ಕೆ ಖಂಡಿತ ತಪ್ಪಾಗಿಲ್ಲ ಎಂಬ ವಿಶ್ವಾಸ ಇದೆ.
‘ನಾನು ಹೊಸ ಹೊಸ ರೀತಿಯ ಪಾತ್ರಗಳಲ್ಲಿ ನನ್ನನ್ನು ಶೋಧಿಸಿಕೊಳ್ಳಬೇಕು ಎಂಬ ಬಯಕೆ ಇರುವವನು. ಒಂದಲ್ಲಾ ಎರಡಲ್ಲಾ ಚಿತ್ರದ ಪಾತ್ರ ಈ ನಿಟ್ಟಿನಲ್ಲಿ ನನಗೆ ತುಂಬ ಮಹತ್ವದ್ದು’ ಎನ್ನುತ್ತಾರೆ ಅವರು.
ನಟನೆಯ ಜತೆಗೆ ನಾಗಭೂಷಣ್‌ಗೆ ನಿರ್ದೇಶನದಲ್ಲಿಯೂ ಅಷ್ಟೇ ಆಸಕ್ತಿ ಇದೆ. ಸದ್ಯಕ್ಕೆ ಅವರು ಒಂದು ವೆಬ್ ಸಿರೀಸ್ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಅದಾದ ನಂತರ ಸಿನಿಮಾ ನಿರ್ದೇಶನಕ್ಕೆ ಇಳಿಯುವ ಆಲೋಚನೆಯೂ ಅವರಿಗಿದೆ. ‘ನಿರ್ದೇಶನ ಮತ್ತು ನಟನೆ ಎರಡರಲ್ಲಿಯೂ ಮುಂದುವರಿಯತ್ತೇನೆ. ಬೇರೆ ಬೇರೆ ಪಾತ್ರಗಳಲ್ಲಿ ನನ್ನೊಳಗಿನ ನಟನನ್ನು ಶೋಧಿಸಿಕೊಳ್ಳುವ ಬಯಕೆ ಇದೆ’ ಎನ್ನುವ ಅವರಲ್ಲಿ ಅಭಿನಯದಲ್ಲಿಯೇ ಸಾಧನೆಯ ಶಿಖರ ಏರುವ ಛಲ ಮತ್ತು ಪ್ರತಿಭೆ ಎರಡೂ ಇದೆ.
ನಾಗಭೂಷಣ್ ಅವರ ವೆಬಿಸೋಡ್‌ಗಳನ್ನುhttps://bit.ly/2LWuv6O ಲಿಂಕ್ ಮೂಲಕ ವೀಕ್ಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.