ADVERTISEMENT

ಪೊರೆ ಕಳಚಿದ ನಾಗರಹಾವು!

ಮುಂದಿನ ತಿಂಗಳು ತೆರೆಗೆ

ಪದ್ಮನಾಭ ಭಟ್ಟ‌
Published 23 ಜೂನ್ 2018, 8:59 IST
Last Updated 23 ಜೂನ್ 2018, 8:59 IST
   

1973ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಲನಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ವಿಷ್ಣುವರ್ಧನ್ ಮತ್ತು ಅಂಬರೀಶ್‌ ಅವರಂಥ ಸೂಪರ್ ಸ್ಟಾರ್‌ಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಚಿತ್ರವದು. ಇಂದಿಗೂ ಆ ಚಿತ್ರ ಅಷ್ಟೇ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿವೆ. ಅದೇ ಹೆಸರಿನ ಹಲವು ಚಿತ್ರಗಳು, ಆ ಚಿತ್ರಗಳ ಛಾಯೆ ಇರುವ ಹಲವು ಪಾತ್ರಗಳು ಎಷ್ಟೋ ಬಂದು ಹೋಗಿವೆ. ಆದರೆ ಮೂಲ ಚಿತ್ರದ ಛಾಪು ಕೊಂಚವೂ ಮುಕ್ಕಾಗದೆ ಉಳಿದುಕೊಂಡಿದೆ.

ಅಂದಿನ 35 ಎಂಎಂ ಪರದೆಯಲ್ಲಿ, ಒಂದೇ ಸ್ಪೀಕರ್‌ ಧ್ವನಿಯಲ್ಲಿ ಕೇಳಿದ ಆ ಚಿತ್ರವನ್ನು ಇಂದಿನ ಹೊಸ ತಂತ್ರಜ್ಞಾನದ ಧ್ವನಿವಿನ್ಯಾಸ, ದೊಡ್ಡ ಪರದೆಯ ವ್ಯಾಪ್ತಿಯಲ್ಲಿ ನೋಡಿದರೆ ಹೇಗಿರುತ್ತದೆ? ಇಂಥದ್ದೊಂದು ಆಸೆ ‘ನಾಗರಹಾವು’ ಚಿತ್ರದ ಅಭಿಮಾನಿಗಳ ಮನಸಲ್ಲಿ ಸುಳಿದು ಹೋಗಿಯೇ ಇರುತ್ತದೆ. ಅವರ ಬಯಕೆ ಈಡೇರುವ ಕಾಲ ಬಂದಿದೆ.

ನಲ್ವತ್ತೈದು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ನಿರ್ಮಾಣ ಸಂಸ್ಥೆ ‘ಈಶ್ವರಿಕಂಬೈನ್ಸ್‌’, ಸಿನಿಮಾಸ್ಕೋಪ್ 7.1ನಲ್ಲಿ ಮರು ಬಿಡುಗಡೆ ಮಾಡಲು ಸಿದ್ಧವಾಗಿದೆ.

ADVERTISEMENT

ಹಳೆಯ ನಾಗರಹಾವಿಗೆ ಹೊಸ ರೂಪ ಕೊಡುವ ಕನಸು ಮೊದಲು ಹುಟ್ಟಿಕೊಂಡಿದ್ದು ರವಿಚಂದ್ರನ್ ಸಹೋದರ ಬಾಲಾಜಿ ಅವರಿಗೆ. ‘ನಾಗರಹಾವು ಚಿತ್ರ ಕನ್ನಡದ ಬೆಸ್ಟ್‌ ಕ್ಲಾಸಿಕ್‌ಗಳಲ್ಲಿ ಒಂದು. ಇಂದಿಗೂ ಆ ಚಿತ್ರವನ್ನು ನೋಡುವಾಗ ನಮ್ಮ ಕಣ್ಣು ಒದ್ದೆಯಾಗುತ್ತದೆ. ಸನ್ನಿವೇಶಗಳು ಕಾಡುತ್ತವೆ. ನಾನು ಚಿಕ್ಕಂದಿನಿಂದಲೂ ಆ ಚಿತ್ರವನ್ನು ಮತ್ತೆ ಮತ್ತೆ ನೋಡಿಕೊಂಡು ಬಂದವನು. ಇಂದಿನ ಪರದೆಯ ಮೇಲೆ, ಹೊಸ ತಂತ್ರಜ್ಞಾನಗಳನ್ನು ಇಟ್ಟುಕೊಂಡು ಚಿತ್ರವನ್ನು ಮತ್ತೆ ಬಿಡುಗಡೆ ಮಾಡಿದರೆ ಹೇಗಿರುತ್ತದೆ ಎಂದು ಅನಿಸಿತು. ಕೂಡಲೇ ಕಾರ್ಯೋನ್ಮುಖನಾದೆ’ ಎಂದು ‘ನಾಗರಹಾವು’ ಚಿತ್ರ ಪೊರೆಕಳಚಿ ಹೊಳೆವ ಮೈಯೊಂದಿಗೆ ಮರುಹುಟ್ಟು ಪಡೆದ ಸಂದರ್ಭವನ್ನು ವಿವರಿಸುತ್ತಾರೆ ಬಾಲಾಜಿ.

(ಬಾಲಾಜಿ)

ಕಳೆದ ಎರಡು ವರ್ಷಗಳಿಂದ ಅವರು ಈ ಚಿತ್ರದ ಮರುರೂಪಣೆಯ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ‘ಆಗ 35 ಎಂಎಂ ಅಂದರೆ ಪರದೆಯ ಮೇಲೆ ಚಿಕ್ಕದಾಗಿ ನೋಡಿರುತ್ತಾರೆ. ಪರದೆಯ ತುಂಬ ಚಿತ್ರ ಬರುವುದೇ ಇಲ್ಲ. ಆಮೇಲೆ ಮೋನೊ ಸ್ಪೀಕರ್, ಅಂದರೆ ಪರದೆಯ ಹಿಂದೆ ಇರುವ ಒಂದೇ ಸ್ಪೀಕರ್‌ನಿಂದ ಧ್ವನಿ ಬರುತ್ತಿತ್ತು. ಇಂದು ಇಡೀ ಪರದೆಯ ಮೇಲೆ ಚಿತ್ರ ಕಾಣಿಸುತ್ತದೆ. 7.1 ಸೌಂಡ್‌ನಲ್ಲಿ ಪ್ರೇಕ್ಷಕನ ಹಿಂದೆ ಮುಂದೆ ಅಕ್ಕಪಕ್ಕ ಒಟ್ಟು ಏಳು ಕಡೆಗಳಿಂದ ಧ್ವನಿ ಬರುತ್ತಿರುತ್ತದೆ. ಇಂದಿನ ಪೀಳಿಗೆಗೆ ಆಪ್ತವಾಗುವ ಹಾಗೆ ಹೊಸ ತಂತ್ರಜ್ಞಾನದಲ್ಲಿ ಚಿತ್ರವನ್ನು ತೋರಿಸಬೇಕು ಅನಿಸಿ ಈ ಕಾರ್ಯ ಕೈಗೆತ್ತಿಕೊಂಡೆ’ ಎನ್ನುವುದು ಅವರ ವಿವರಣೆ.

ಪೂರ್ತಿ ರೀರೆಕಾರ್ಡಿಂಗ್!

ಇದಕ್ಕಾಗಿ ಬಾಲಾಜಿ ಎರಡೂವರೆ ತಿಂಗಳು ರೀರೆಕಾರ್ಡಿಂಗ್ ಮಾಡಿಸಿದ್ದಾರಂತೆ. ‘ಹಳೆಯ ಸಿನಿಮಾದ ಮೋನೊ ಟ್ರ್ಯಾಕ್ ಈಗ ಉಪಯೋಗವೇ ಆಗುವುದಿಲ್ಲ. ಹಾಗಾಗಿ ಅದನ್ನು ಇಟ್ಟುಕೊಂಡು ಆ ಕಾಲದಲ್ಲಿ ಹೇಗೆ ನುಡಿಸಿದ್ದಾರೋ ಹಾಗೆಯೇ 60 ಸಂಗೀತ ಉಪಕರಣಗಳನ್ನು ಬಳಸಿಕೊಂಡು ಲೈವ್ ರೆಕಾರ್ಡಿಂಗ್ ಮಾಡಿದ್ದೇವೆ. ಆ ಕಾಲದ ಸಂಗೀತದ ಫೀಲ್ ಹೋಗಬಾರದು ಎಂಬ ಎಚ್ಚರಿಕೆಯಲ್ಲಿಯೇ ಕೆಲಸ ಮಾಡಿದ್ದೇವೆ’ ಎಂದು ಅವರು ಕೆಲಸ ಮಾಡಿದ ಬಗೆಯನ್ನು ವಿವರಿಸುತ್ತಾರೆ.

ಮುಸುಕಾಗಿದ್ದ ಹಳೆಯ ರೀಲ್‌ಗಳನ್ನು ತೆಗೆದುಕೊಂಡು ಮತ್ತೆ ತಂತ್ರಜ್ಞಾನದ ಸಹಾಯದಿಂದ ಮರುರೂಪಿಸುವ ಕೆಲಸವನ್ನೂ ಅವರು ಮಾಡಿದ್ದಾರೆ. ‘ಕಳೆದ ಎರಡು ವರ್ಷಗಳ ಕಾಲ ಚೆನ್ನೈ, ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಕೆಲಸ ಮಾಡಿದ್ದೇನೆ. ಎಲ್ಲಿಯೂ ಹೇಳಿಕೊಂಡಿಲ್ಲ. ಯಾಕೆಂದರೆ ಹಾಗೆ ಹೇಳಿಕೊಂಡರೆ ಅದು ಅರ್ಥವಾಗುವಂಥದ್ದಲ್ಲ. ಮಾಡಿಯೇ ತೋರಿಸಬೇಕು. ಈಗ ಕೆಲಸ ಮುಗಿದಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಟ್ರೈಲರ್‌ಗೆ ಅದ್ಭುತ ಸ್ಪಂದನ ಸಿಕ್ಕಿದ್ದು ನೋಡಿ ನನ್ನ ಶ್ರಮ ವ್ಯರ್ಥವಾಗಿಲ್ಲ ಅನಿಸಿದೆ. ಇಗಲೂ ಹೊಸ ಬಗೆಯ ನಾಗರಹಾವು ಚಿತ್ರದ ಟೀಸರ್‌ಯೂ ಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಎರಡೂವರೆ ಲಕ್ಷ ಜನರು ಅದನ್ನು ವೀಕ್ಷಿಸಿದ್ದಾರೆ’ ಎಂದು ಅವರು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಬೆಲೆ ಕಟ್ಟಲಾಗದ ಚಿತ್ರ:

ಈ ಕೆಲಸಕ್ಕೆ ತಗುಲಿದ ವೆಚ್ಚ ಎಷ್ಟು ಎಂದು ಕೇಳಿದರೆ ‘ಇದು ಬೆಲೆಕಟ್ಟಲಾಗದ ಸಿನಿಮಾ’ ಎಂದು ನಗುತ್ತಾರೆ.

‘ನಾಗರಹಾವು ನಮ್ಮ ತಂದೆ ವೀರಾಸ್ವಾಮಿ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಒಂದು ಕೊಡುಗೆ. ಅಂದು ಅದು ನಲ್ವತ್ತು ಲಕ್ಷದಲ್ಲಿ ತಯಾರಾದ ಸಿನಿಮಾ. ಅವರ ಕೊಡುಗೆಯನ್ನು ಇಂದಿನ ಪೀಳಿಗೆಯವರಿಗೂ ತಲುಪಿಸಬೇಕು ಎಂಬ ಉದ್ದೇಶದಿಂದ ಈಗ ಸಿನಿಮಾಸ್ಕೋಪ್‌ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಸಿನಿಮಾ ಬಜೆಟ್‌ಗಿಂತ ಎಷ್ಟೋ ಪಟ್ಟು ಹೆಚ್ಚು ಖರ್ಚು ಈ ಕೆಲಸಕ್ಕೆ ತಗುಲಿದೆ. ಹಾಗಂತ ಎಷ್ಟು ಹಣ ಖರ್ಚು ಮಾಡಿದ್ದೇವೆ ಎಂದು ನಾನು ಹೇಳಲು ಹೋಗುವುದಿಲ್ಲ. ಯಾಕೆಂದರೆ ಈ ಕೆಲಸಕ್ಕೆ ಹಣದಿಂದ ಬೆಲೆ ಕಟ್ಟುವುದು ನನಗೆ ಇಷ್ಟವಿಲ್ಲ’ ಎನ್ನುತ್ತಾರೆ ಬಾಲಾಜಿ.

ಮುಂದಿನ ತಿಂಗಳು ಈ ಪೊರೆ ಕಳಚಿದ ‘ನಾಗರಹಾವು’ ತೆರೆಯ ಮೇಲೆ ಹೆಡೆಯೆತ್ತಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.