ಹೈದರಾಬಾದ್: ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ತೆಲಂಗಾಣದ ಮೆದಾಚಲ್ ಮೆಡ್‌ಚಲ್–ಮಲ್ಕಾಜಗಿರಿಜಿಲ್ಲೆಯಲ್ಲಿ 1,000 ಎಕರೆ ಅರಣ್ಯ ಭೂಮಿಯನ್ನು ದತ್ತು ಪಡೆದಿದ್ದು, ಅಲ್ಲಿ ನಗರ ಉದ್ಯಾನವನ ನಿರ್ಮಿಸುವ ಯೋಜನೆಗೆ ಇಂದು ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿದರು.
ಕಳೆದ ಡಿಸೆಂಬರ್‌ನಲ್ಲಿ ಬಿಗ್ ಬಾಸ್ ತೆಲುಗು ಕಾರ್ಯಕ್ರಮದಲ್ಲಿ ಅರಣ್ಯ ಭೂಮಿ ದತ್ತು ಪಡೆಯುವ ಬಗ್ಗೆ ನಾಗಾರ್ಜುನ ಘೋಷಣೆ ಮಾಡಿದ್ದರು. ಜೊತೆಗೆ, ಪ್ರತಿಯೊಬ್ಬರೂ ಮೂರು ಸಸಿಗಳನ್ನು ನೆಟ್ಟು 2021ಕ್ಕೆ ಸೂಕ್ತವಾದ ವಿದಾಯ ಹೇಳುವಂತೆ ಮನವಿ ಮಾಡಿದ್ದರು.
ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಸ್ಮರಣಾರ್ಥ ನಾಗಾರ್ಜುನ ಈ ‘ಎಎನ್‌ಆರ್ ನಗರ ಅರಣ್ಯ ಉದ್ಯಾನವನ’ ನಿರ್ಮಿಸುತ್ತಿದ್ದು, ಚೆಂಗಿಚೆರ್ಲಾ ಅರಣ್ಯ ಪ್ರದೇಶದಲ್ಲಿ ನಡೆದ ಅಡಿಗಲ್ಲು ಕಾರ್ಯಕ್ರಮದಲ್ಲಿ ನಾಗಾರ್ಜುನ ಅವರ ಜೊತೆ ಪತ್ನಿ ಅಮಲಾ, ಪುತ್ರನಾಗ ಚೈತನ್ಯ ಮತ್ತಿತರರು ಹಾಜರಿದ್ದರು.
ಈ ಬಗ್ಗೆ ಟ್ವೀಟ್ ಮೂಲಕ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಹುಟ್ಟುಹಬ್ಬದಶುಭಾಶಯ ಕೋರಿದ್ದಾರೆ.
ಗ್ರೀನ್ ಇಂಡಿಯಾ ಚಾಲೆಂಜ್ ಭಾಗವಾಗಿ ನಾಗಾರ್ಜುನ, ನಾಗಚೈತನ್ಯ, ಸುಶಾಂತ್ ಮತ್ತಿತರರು ಸಸಿಗಳನ್ನು ನೆಟ್ಟು, ನೀರು ಹಾಕಿದರು.
ಇತ್ತೀಚೆಗೆ ತೆರೆ ಕಂಡ, ‘ಸೋಗ್ಗಾಡೆ ಚಿನ್ನಿ ನಾಯನ’ ಚಿತ್ರದ ಭಾಗ–2 ‘ಬಂಗಾರರಾಜು’ ಚಿತ್ರದಲ್ಲಿ ನಾಗಾರ್ಜುನ ಮತ್ತು ನಾಗ ಚೈತನ್ಯ ಕಾಣಿಸಿಕೊಂಡಿದ್ದರು.
ನಾಗ ಚೈತನ್ಯ ಸದ್ಯ ವಿಕ್ರಮ್ ಕುಮಾರ್ ನಿರ್ದೇಶನದ ‘ಥ್ಯಾಂಕ್ ಯೂ’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.