ADVERTISEMENT

ಬಾಡಿಗಾರ್ಡ್ ತಳ್ಳಿದ್ದ ವಿಕಲಚೇತನ ಅಭಿಮಾನಿಯನ್ನು ಭೇಟಿಯಾದ ತೆಲುಗು ನಟ ನಾಗಾರ್ಜುನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2024, 12:55 IST
Last Updated 26 ಜೂನ್ 2024, 12:55 IST
Venugopala K.
   Venugopala K.

ಹೈದರಾಬಾದ್: ತೆಲುಗಿನ ಸೂಪರ್‌ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರು ಕಳೆದ ಒಂದು ವಾರದಿಂದ ಬೇಡದ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ ತಮ್ಮ ಬಾಡಿಗಾರ್ಡ್‌ ಅಂಗವಿಕಲ ಅಭಿಮಾನಿಯೊಬ್ಬರನ್ನು ತಳ್ಳಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಈ ಕುರಿತಂತೆ ಎಕ್ಸ್‌ ಪೋಸ್ಟ್ ಮೂಲಕ ವಿಕಲಚೇತನ ಅಭಿಮಾನಿಯ ಕ್ಷಮೆ ಕೇಳಿದ್ದ ನಾಗಾರ್ಜುನ, ಇಂದು ಅಭಿಮಾನಿಯನ್ನು ಭೇಟಿ ಮಾಡಿ ಅಪ್ಪುಗೆ ನೀಡಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ಅವರ ಜೊತೆ ಮಾತನಾಡಿದ್ದಾರೆ.

‘ಆ ಘಟನೆಯಲ್ಲಿ ನಿನ್ನ ತಪ್ಪು ಇರಲಿಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ’ ಎಂದು ಹೇಳಿರುವ ನಾಗಾರ್ಜುನ, ಇತರೆ ಅಭಿಮಾನಿಗಳ ಜೊತೆಗೂ ಫೋಟೊ ಕ್ಲಿಕ್ಕಿಸಿಕೊಂಡು ವಿಮಾನನಿಲ್ದಾಣದ ಒಳಗೆ ತೆರಳಿದ್ದಾರೆ.

ADVERTISEMENT

ಈ ವಿಡಿಯೊವನ್ನು ಪಾಪರಾಜಿಯೊಬ್ಬರು ಸ್ನೇಹಜೀವಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಮಾನನಿಲ್ದಾಣದಲ್ಲಿ ತಮ್ಮ ಬಾಡಿಗಾರ್ಡ್‌ ತಳ್ಳಿದ್ದ ವ್ಯಕ್ತಿಯನ್ನು ನಾಗಾರ್ಜುನ ಭೇಟಿಯಾಗಿದ್ದಾರೆ. ಇದೊಂದು ಅಭಿಮಾನಿ ಜೊತೆಗಿನ ಒಳ್ಳೆಯ ನಡವಳಿಕೆ ಎಂದು ಪೋಸ್ಟ್‌ಗೆ ಅಡಿ ಬರಹ ನೀಡಲಾಗಿದೆ.

ಏನಿದು ಘಟನೆ?

ಇತ್ತೀಚೆಗೆ ನಾಗಾರ್ಜುನ ಮುಂಬೈ ವಿಮಾನನಿಲ್ದಾಣದಿಂದ ಹೊರಬರುತ್ತಿದ್ದ ವೇಳೆ ವಿಕಲಚೇತನ ಅಭಿಮಾನಿಯೊಬ್ಬ ಅವರ ಸಮೀಪಕ್ಕೆ ಬರಲು ಪ್ರಯತ್ನಿಸಿದಾಗ ಬಾಡಿಗಾರ್ಡ್ ಅವರನ್ನು ತಳ್ಳಿದ್ದಾರೆ. ಅಭಿಮಾನಿ ಮುಗ್ಗರಿಸಿ ಬೀಳುವ ಹೊತ್ತಿಗೆ ಅದೇ ಬಾಡಿಗಾರ್ಡ್‌ ಸಹಾಯ ಮಾಡಿದ್ದಾರೆ.

ಪಾಪರಾಜಿ ವಿರಲ್ ಭಯಾನಿ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ‘ಮಾನವೀಯತೆ ಎಲ್ಲಿ ಹೋಯಿತು ನಾಗಾರ್ಜುನ?’ ಎಂದು ಪ್ರಶ್ನಿಸಿದ್ದರು.

ಈ ಕುರಿತಂತೆ ಕ್ಷಮೆಯಾಚಿಸಿದ್ದ ನಾಗಾರ್ಜುನ, ಇಂತಹ ಘಟನೆ ನಡೆಯಬಾರದಿತ್ತು ಎಂದಿದ್ದರು.

‘ಈ ಘಟನೆ ಈಗ ನನ್ನ ಗಮನಕ್ಕೆ ಬಂದಿದೆ. ಇದು ನಡೆಯಬಾರದಿತ್ತು. ಆ ವ್ಯಕ್ತಿಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸುತ್ತೇನೆ’ಎಂದು ಎಕ್ಸ್‌ನಲ್ಲಿ ವಿಡಿಯೊ ಜೊತೆ ಸಂದೇಶವನ್ನು ಪೋಸ್ಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.