ಪಣಜಿ: ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (IFFI) ತೆಲುಗಿನ ಖ್ಯಾತ ನಟ ನಾಗಾರ್ಜುನ್ ಅವರು ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ್‌ರಾವ್ ಅವರೊಂದಿಗಿನ ಮಧುರ ನೆನಪುಗಳನ್ನು ಸ್ಮರಿಸಿದ್ದಾರೆ.
‘ನಮ್ಮ ತಂದೆ ಆಂಧ್ರದ ಒಂದು ಹಳ್ಳಿಯ ಸುಂದರ ರೈತ ಕುಟುಂಬದಿಂದ ಬಂದವರು. ಆಗ ಆ ಊರಿನಲ್ಲಿ ವಿದ್ಯುತ್ ಸಂಪರ್ಕ ಸಹ ಇರಲಿಲ್ಲ. ನಮ್ಮ ಅಜ್ಜಿಗೆ (ನಾಗೇಶ್ವರ್‌ರಾವ್ ತಾಯಿ) ನಮ್ಮ ತಂದೆ ಎಂದರೆ ಬಲು ಪ್ರೀತಿ. ಅದಕ್ಕೂ ಮಿಗಿಲಾಗಿ ಅವರಿಗೆ ಹೆಣ್ಣುಮಕ್ಕಳೆಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಅವರು ಬಾಲ್ಯದಲ್ಲಿ ನಮ್ಮ ತಂದೆಗೆ ಹೆಣ್ಣುಮಕ್ಕಳ ಡ್ರೆಸ್ ತೊಡಿಸಿ ಸಂಭ್ರಮಿಸುತ್ತಿದ್ದರು. ಅದರ ಕೆಲ ಚಿತ್ರಗಳು ನನ್ನ ಸಂಗ್ರಹದಲ್ಲಿ ಈಗಲೂ ಇವೆ’ ಎಂದು ತೆಲುಗು ಚಿತ್ರರಂಗದ ಸಂವಾದದಲ್ಲಿ ನಾಗಾರ್ಜುನ್ ಹೇಳಿದರು.
‘ತಂದೆಗೆ ಹೆಣ್ಣುಮಕ್ಕಳ ಡ್ರೆಸ್ ಹಾಕಿದ್ದಾಗ ಅವರು ನನ್ನ ಮೊದಲ ಅಕ್ಕ ಸತ್ಯಾಳ ರೀತಿಯೇ ಕಾಣಿಸುತ್ತಿದ್ದರು. ಅಷ್ಟೊಂದು ಸುಂದರವಾಗಿದ್ದರು. ಬಹುಶಃ ಇದೇ ನನ್ನ ತಂದೆ ನಟನಾಗಲು ಕಾರಣ ಇರಬಹುದು’ ಎಂದು ಹೇಳಿದರು.
‘ಇನ್ನೊಂದು ವಿಶೇಷವೆಂದರೆ ಆಗಿನ ನಾಟಕ, ಸಿನಿಮಾಗಳಲ್ಲಿ ಅಭಿನಯಿಸಲು ಮಹಿಳೆಯರು ಮುಂದೆ ಬರುತ್ತಿರಲಿಲ್ಲ. ಅಪ್ಪನೇ ಸಾಕಷ್ಟು ಬಾರಿ ಸ್ತ್ರೀ ಪಾತ್ರಗಳನ್ನು ಮಾಡಿದ್ದರು. ಇದರಿಂದ ಅವರು ಅನೇಕ ಸಾರಿ ಅಪಹಾಸ್ಯಕ್ಕೂ ಒಳಗಾಗಿದ್ದರು’ ಎಂದು ಹೇಳಿ ಮುಗುಳ್ನಕ್ಕರು.
‘ಅಪ್ಪ ಒಂದಿನ ರೈಲಿನಲ್ಲಿ ಎಲ್ಲಿಗೋ ಹೋಗುವಾಗ ಆಗಿನ ಕಾಲದ ಖ್ಯಾತ ನಿರ್ದೇಶಕರಾಗಿದ್ದ ಘಂಟಸಾಲ ಬಾಲರಾಮಯ್ಯ ಅವರ ಕಣ್ಣಿಗೆ ಬಿದ್ದರು. ಅವರ ಆಕರ್ಷಕ ನೋಟಕ್ಕೆ ಮನಸೋತ ಬಾಲರಾಮಯ್ಯ ಅವರು, ನೀನೇಕೆ ಸಿನಿಮಾಗಳಲ್ಲಿ ನಟಿಸಬಾರದು ಎಂದು ಕೇಳಿಕೊಂಡರು. ಅಂದಿನಿಂದ ಮುಂದೆ ನಡೆದಿದ್ದೆಲ್ಲ ಈಗ ಇತಿಹಾಸ’ ಎಂದು ಸ್ಮರಿಸಿದರು.
ತೆಲುಗು ಚಿತ್ರರಂಗದಲ್ಲಿ ಎಎನ್‌ಆರ್ ಎಂದು ಖ್ಯಾತರಾಗಿದ್ದ ಅಕ್ಕಿನೇನಿ ನಾಗೇಶ್ವರರಾವ್ ಅವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ 1923 ರಲ್ಲಿ ಜನಿಸಿದ್ದರು. ಸುಮಾರು ಏಳು ದಶಕಗಳ ಕಾಲ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. 2014ರಲ್ಲಿ ತೀರಿಕೊಂಡಿದ್ದಾರೆ.
ನವೆಂಬರ್ 28ವರೆಗೆ ಅಂತರರಾಷ್ಟ್ರೀಯ ಚಿತ್ರೋತ್ಸವ ಆಯೋಜನೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.