ADVERTISEMENT

ನಿರೂಪಕಿ ಈಗ ನಿರ್ಮಾಪಕಿ: ನಮಿತಾರಾವ್‌ ಸಂದರ್ಶನ

ಶರತ್‌ ಹೆಗ್ಡೆ
Published 10 ಮಾರ್ಚ್ 2023, 0:00 IST
Last Updated 10 ಮಾರ್ಚ್ 2023, 0:00 IST
ನಮಿತಾ ರಾವ್‌
ನಮಿತಾ ರಾವ್‌   

ತಮ್ಮ 16ನೇ ವಯಸ್ಸಿನಲ್ಲಿಯೇ ವೇದಿಕೆಯೇರಿದ, ರಂಗದಲ್ಲಿ ಬಣ್ಣ ಹಚ್ಚಿದ, ಬದುಕಿನ ಜವಾಬ್ದಾರಿ ನಿರ್ವಹಿಸಿದ ಗಟ್ಟಿಗಿತ್ತಿ ನಮಿತಾರಾವ್‌. ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರೂ ‘ಸಿಲ್ಲಿ ಲಲ್ಲಿ’ಯ ಎನ್‌ಎಂಎಲ್‌ ಆಗಿಯೇ ಎಲ್ಲರಿಗೂ ಪರಿಚಿತ. ಇದೀಗ ಅವರ ಬೆಳ್ಳಿತೆರೆಯ ಕನಸು ‘ಚೌಕಾಬಾರ’ದ ರೂಪದಲ್ಲಿ ಈಡೇರಿ, ತೆರೆ ಕಾಣುತ್ತಿದೆ. ಈ ಚಿತ್ರದ ನಟಿ, ನಿರ್ಮಾಪಕಿಯೂ ಆದ ಅವರು ಮಾತಿಗಿಳಿದಾಗ...

lನಮಿತಾ ರಾವ್‌ ಯಾರು?

ತುಂಬಾ ಕನಸುಗಳನ್ನು ಹೊತ್ತುಬಂದ ಹುಡುಗಿ. ನೃತ್ಯ, ರಂಗಭೂಮಿ, ಬೆಳ್ಳಿತೆರೆವರೆಗೆ ಹಂತಹಂತವಾಗಿ ಬೆಳೆದು ಬಂದವಳು. ಕಿರುತೆರೆಯಲ್ಲಿ ಹೆಸರು ಮಾಡಿದ್ದರೂ ಬೆಳ್ಳಿತೆರೆಯ ಆಸೆ ಇರುತ್ತದಲ್ಲಾ. ಈ ಕ್ಷೇತ್ರದ ತಳಮಟ್ಟದಿಂದ ಬಂದವಳು. ಅಲ್ಲದೇ ನನ್ನದೇ ಆದ ನಿರ್ಮಾಣ ಸಂಸ್ಥೆಯ ಕನಸು ಕಂಡವಳು. ಅದೂ ಈಗ ಈಡೇರಿದೆ. ಹೀಗೆ ಬದುಕನ್ನು ಬಂದಹಾಗೆ ಸ್ವೀಕರಿಸಿದ ಜೀವನ ಪ್ರೀತಿಯ ವ್ಯಕ್ತಿ.

ADVERTISEMENT

lಧಾರಾವಾಹಿ ದಿನಗಳಿಂದ ಬೆಳ್ಳಿತೆರೆಯವರೆಗಿನ ಏಳುಬೀಳುಗಳು?

ನಾನು ನಿರೀಕ್ಷೆಯೇ ಮಾಡದ, ಊಹಿಸಿಯೂ ಇಲ್ಲದ ಕ್ಷೇತ್ರವಿದು. ಇಲ್ಲಿಗೆ ನಿರೂಪಕಿಯಾಗಿ ಬಂದವಳು. ನಿರ್ದೇಶಕ ರಘು ಸಮರ್ಥ, ಸುಂದಶ್ರೀ ಅಮ್ಮ ನನ್ನನ್ನು ಟಿ.ವಿ ಲೋಕಕ್ಕೆ ಪರಿಚಯಿಸಿ ಬೆಳೆಸಿದರು. ಟಿ.ಎಸ್‌.ನಾಗಾಭರಣ ಅವರೂ ಮಾರ್ಗದರ್ಶನ ಮಾಡಿದರು. ಹೀಗೆ ಅದೆಷ್ಟೋ ಜನರು ಇದ್ದಾರೆ. ಅವರೆಲ್ಲರಿಗೆ ಎಷ್ಟು ಕೃತಜ್ಞಳಾದರೂ ಸಾಲದು. ಹಾಗೆ ನೋಡಿದರೆ ನಾನು ತುಂಬಾ ಅದೃಷ್ಟವಂತೆ. ಎಲ್ಲರೂ ನನ್ನನ್ನು ಅತ್ಯುತ್ತಮವಾಗಿಯೇ ನಡೆಸಿಕೊಂಡರು, ಕಲಿಸಿದರು. ಈ ಹೊತ್ತಿನಲ್ಲಿ ಅಪ್ಪ, ಅಮ್ಮ, ಅಣ್ಣನ ಬೆಂಬಲ ಅಪಾರವಾದದ್ದು. ಏಕಕಾಲಕ್ಕೆ ಎರಡೆರಡು ಧಾರಾವಾಹಿಗಳಲ್ಲಿ ಪಾಲ್ಗೊಳ್ಳಬೇಕಾದ ಸವಾಲನ್ನೂ ನಿಭಾಯಿಸಿದ್ದೇನೆ. ‘ಸಿಲ್ಲಿಲಲ್ಲಿ’ಯ ಎನ್‌ಎಂಎಲ್‌ ಪಾತ್ರ 950 ಸಂಚಿಕೆಗಳನ್ನು ಪೂರೈಸಿತು. ‘ಬಿದಿಗೆ ಚಂದ್ರಮ’, ‘ದೂರತೀರ ಯಾನ’, ‘ಗೋಧೂಳಿ’ ಧಾರಾವಾಹಿಗಳು ಹೆಸರು ತಂದವು. ‘ಹೋಗ್ಲಿ ಬಿಡಿ ಸಾರ್‌’ ನಾನು ನಟಿಸಿದ ಮೊದಲ ಹಾಸ್ಯ ಧಾರಾವಾಹಿ. ಈ ಅವಧಿಯಲ್ಲಿ ರಂಗಭೂಮಿಯ ನಂಟೂ ಇತ್ತು. ಕ್ರಮೇಣ ನಟನೆಯ ಬಗ್ಗೆ ಹುಚ್ಚು, ಪ್ರೀತಿ ಬೆಳೆಯಿತು. ಇನ್ನೇನಿದ್ದರೂ ಇಲ್ಲಿಯೇ ಎಂದು ನಿರ್ಧರಿಸಿದೆ. ಈಗ ನೀವೇ ನೋಡುತ್ತಿದ್ದೀರಿ.

lನಿರ್ಮಾಪಕಿಯಾಗುವುದೂ ಸವಾಲಲ್ಲವೇ?

ಖಂಡಿತ ಹೌದು. ದೊಡ್ಡ ರಿಸ್ಕ್‌ ಇದೆ. ಆದರೆ, ನಾವು ಪ್ರಯತ್ನವೇ ಮಾಡದಿದ್ದರೆ ಹೇಗೆ? ಈ ಚಿತ್ರ 2020ರಲ್ಲಿ ನಿರ್ಮಾಣ ಆಗಿತ್ತು. ಕೋವಿಡ್‌ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಬಂದಿತು. ಎಲ್ಲರಿಗೂ ಇಷ್ಟವಾಗುವ ಗಟ್ಟಿ ಕಂಟೆಂಟ್‌ ಕಾರಣದಿಂದ ಈ ಚಿತ್ರದ ಮೇಲೆ ನಂಬಿಕೆ ಇದೆ. ಜೀವನದಲ್ಲಿ ರಿಸ್ಕ್‌ ತೆಗೆದುಕೊಳ್ಳಲೇಬೇಕು. ಇಲ್ಲಿ ಒಳ್ಳೆಯ ತಂಡ ನನ್ನ ಜೊತೆಗಿದೆ. ಹಾಗಾಗಿ ನಿರ್ಮಾಪಕಿ ಎಂಬ ವ್ಯಾವಹಾರಿಕ ಜಗತ್ತನ್ನು ಸ್ವಲ್ಪ ಪಕ್ಕಕ್ಕಿಟ್ಟು ಇಲ್ಲಿ ನಿರಾಳವಾಗಿ ಅಭಿನಯಿಸಿದ್ದೇನೆ.

l‘ಚೌಕಾಬಾರ’ದಲ್ಲಿ ಏನು ಹೇಳಿದ್ದೀರಿ?

ಈ ಚಿತ್ರ ಮಹಿಳಾ ಪ್ರಧಾನ ಕಥೆಯನ್ನು ಹೊಂದಿದೆ. ಮಣಿ ಆರ್‌. ರಾವ್‌ ಅವರ ಕಾದಂಬರಿ ಆಧರಿತ ಚಿತ್ರ. ಇಲ್ಲಿ ಭಾವನಾ ಎಂಬ ಪಾತ್ರ ನನ್ನದು. ನಾನು ನಿಜಜೀವನದಲ್ಲಿ ಹೇಗಿದ್ದೇನೋ ಹಾಗೇ ಇಲ್ಲಿ ಕಾಣಿಸಿಕೊಂಡಿದ್ದೇನೆ. ನಾಯಕ ವಿಹಾನ್‌ ಪ್ರಭಂಜನ್‌ ಅವರೂ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದಾರೆ. ನಾಯಕ, ನಾಯಕಿ, ಇನ್ನೊಬ್ಬಳು ನಾಯಕಿ, ಇನ್ನೊಂದು ಪಾತ್ರ. ಹೀಗೆ ನಾಲ್ಕು ಮಂದಿಯ ನಡುವೆ ನಡೆಯುವ ಕಥೆ. ಚೌಕಾಬಾರ ಅಂದರೆ ಹೀಗೇ ಅಲ್ವಾ. ನಾಲ್ಕು ಮಂದಿ ಕುಳಿತು ಆಡುವುದು. ಇದು ಎಲ್ಲ ವಯೋಮಾನದವರಿಗೂ ತುಂಬಾ ಇಷ್ಟವಾಗುತ್ತದೆ. ಮದುವೆ ಆದವರಿಗೆ, ಆಗಲಿರುವವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಬೀಳಲು ಮುಂದಾದವರಿಗೆ... ಹೀಗೆ ಎಲ್ಲರಿಗೂ ಅನ್ವಯಿಸುವ ಕಥೆ ಇದು.

lಪತಿಯ ನಿರ್ದೇಶನ, ವಿಹಾನ್‌ ನಾಯಕ... ಸೂಕ್ಷ್ಮ ಸನ್ನಿವೇಶಗಳನ್ನು ಹೇಗೆ ನಿಭಾಯಿಸಿದಿರಿ?

ಪತಿ ವಿಕ್ರಂ ಸೂರಿ ಮತ್ತು ನಾನು ಮನೆಯಲ್ಲಿ ಅನ್ಯೋನ್ಯ ದಂಪತಿ. ಆದರೆ, ಈ ಕ್ಷೇತ್ರದಲ್ಲಿ ಪಕ್ಕಾ ವೃತ್ತಿಪರರು. ಹಾಗಾಗಿ ಇಲ್ಲಿ ಮುಜುಗರ, ಬಿಗುಮಾನದ ಪ್ರಶ್ನೆಯೇ ಇಲ್ಲ. ನಾನು ನಿರ್ಮಾಪಕಿ ಎಂಬ ಹಮ್ಮು, ಅವರು ನಿರ್ದೇಶಕ ಎಂಬ ಗತ್ತು ಏನೂ ಇಲ್ಲ. ಕ್ಯಾಮೆರಾ ಮುಂದೆ, ನಿರ್ದೇಶಕನ ಸೂಚನೆಯಂತೆ ನಾನೊಬ್ಬಳು ನಟಿ ಅಷ್ಟೆ. ಜೊತೆಗೆ ಅತ್ಯುತ್ತಮವಾದ ತಂಡ ಇರುವಾಗ ಇಂಥದ್ದೆಲ್ಲ ಪ್ರಶ್ನೆಗಳು ಕಾಡುವುದೇ ಇಲ್ಲ.

lಮುಂದಿನ ಕನಸುಗಳು?

ಅಪ್ಪ ಅಮ್ಮನ ಅಗಲಿಕೆಯಂತಹ ಅನಿರೀಕ್ಷಿತ ಘಟನೆಗಳು ಸ್ವಲ್ಪ ಘಾಸಿಗೊಳಿಸಿದವು. ಹಾಗಾಗಿ ಬದುಕನ್ನು ಬಂದಹಾಗೆ ಸ್ವೀಕರಿಸುತ್ತಾ ಸಾಗಿದ್ದೇನೆ. ಈಗ ನಿರ್ಮಾಣ ಸಂಸ್ಥೆಯನ್ನು ಕಟ್ಟಿದ್ದೇವೆ. ನಮಗೆ ನಮ್ಮ ವೃತ್ತಿ ಹಾಗೂ ನಮ್ಮ ತಂಡದ ಹಿತಾಸಕ್ತಿ ಮುಖ್ಯ. ಹಾಗಾಗಿ ಅತ್ಯುತ್ತಮವಾದದ್ದನ್ನೇ ಕೊಡಬೇಕು ಎಂಬ ಕನಸಿನಿಂದ ಮುಂದುವರಿದಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.