ADVERTISEMENT

ಈ ‘ಕೋಳಿಮರಿ’ನಮ್ಮನೆ ಯುವರಾಣಿ

ವಿದ್ಯಾಶ್ರೀ ಎಸ್.
Published 22 ಆಗಸ್ಟ್ 2019, 19:30 IST
Last Updated 22 ಆಗಸ್ಟ್ 2019, 19:30 IST
ಅಂಕಿತಾ ಅಮರ್‌
ಅಂಕಿತಾ ಅಮರ್‌   

ಅದೊಂದು ಮುದ್ದಾದ, ಪ್ರತಿಷ್ಠಿತ ಕುಟುಂಬ. ಅಲ್ಲಿ ಶ್ರೀಮಂತಿಕೆಯಷ್ಟೇ ಪ್ರೀತಿಯೂ ಹೇರಳ. ಆ ಮನೆಯ ಪ್ರೀತಿಯ ಮಗಳು ಮೀರಾ. ಕೆಲಸದಾಕೆಯ ಮಗಳಾದರೂ, ಮನೆ ಮಗಳಷ್ಟೇ ಪ್ರಾಧಾನ್ಯ ಆಕೆಗೆ. ಬಿಡುವೇ ನೀಡದೇ ಚಿಟಪಟ ಮಾತನಾಡುವ ಈಕೆಗೆ ಮನೆಮಂದಿ ಇಟ್ಟ ಹೆಸರು ಕೋಳಿಮರಿ. ಇದು ‘ನಮ್ಮನೆ ಯುವರಾಣಿ’ ಧಾರಾವಾಹಿಯ ಕಥಾಹಂದರ. ಇದರಲ್ಲಿ ಮೀರಾ ಎಂಬ ಲವಲವಿಕೆಯ ಪಾತ್ರಕ್ಕೆ ಜೀವ ತುಂಬಿದವರು ನಟಿ ಅಂಕಿತಾ ಅಮರ್‌.

ಸೌಂದರ್ಯ, ಪ್ರತಿಭೆಯ ಜೊತೆಗೆ ನಟನಾ ಕೌಶಲದ ಚಾಕಚಕ್ಯತೆ... ಹೀಗೆ ಬಣ್ಣದ ಲೋಕಕ್ಕೆ ಅಗತ್ಯವಾದ ಸಂಪೂರ್ಣ ಪ್ಯಾಕೇಜನ್ನು ಸಿದ್ಧಿಸಿಕೊಂಡಿರುವುದು ಇವರ ವಿಶೇಷ.

ಫಣಿ ರಾಮಚಂದ್ರರ ‘ಜಗಳಗಂಟಿ’ ಧಾರಾವಾಹಿ, ರವಿಚಂದ್ರನ್ ನಟನೆಯ ‘ತುಂಟ’ ಸಿನಿಮಾದಲ್ಲಿ ಇವರು ಬಾಲನಟಿಯಾಗಿ ಕಾಣಿಸಿಕೊಂಡಿದ್ದರು.

ADVERTISEMENT

ಬೆಂಗಳೂರಿನಲ್ಲಿಯೇ ಹುಟ್ಟಿ, ಬೆಳೆದ ಅಂಕಿತಾ, ಮೆಡಿಕಲ್ ಬಯೋ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆ
ದಿದ್ದಾರೆ. ಓದಿನಲ್ಲಿ ಬಲು ಚುರುಕಾಗಿದ್ದ ಇವರು, ಎರಡು ಚಿನ್ನದ ಪದಕಗಳನ್ನು ಪಡೆದಿರುವ ಜಾಣೆ.
ಅಂಕಿತಾಗೆ ಪಿಎಚ್‌.ಡಿ ಮಾಡುವ ಕನಸಿದೆ. ಆದರೆ ಇದೇ ವೇಳೆ ಆಕಸ್ಮಿಕವಾಗಿ ಸಿಕ್ಕ ಅವಕಾಶವನ್ನು ಒಲ್ಲೆ ಎನ್ನಲು ಮನಸ್ಸಾಗದೆ ‘ನಮ್ಮನೆ ಯುವರಾಣಿ’ಯ ಮೂಲಕ ಕಿರುತೆರೆ ಪ್ರವೇಶಿಸಿದ್ದಾರೆ.

ಅಂಕಿತಾ ತಂದೆ, ತಾಯಿ ರಂಗಭೂಮಿ ಕಲಾವಿದರು. ಅಪ್ಪ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿಸಿದ್ದಾರೆ. ಹೀಗಾಗಿ ಸಹಜವಾಗಿಯೇ ಇವರಲ್ಲಿಯೂ ನಟನಾ ಆಸಕ್ತಿ ಬಾಲ್ಯದಿಂದಲೇ ಬೆಳೆದಿದೆ. ‘ಬಿಡುವು ಸಿಕ್ಕಿತೆಂದರೆ ಮನೆಯಲ್ಲಿ ಸಿನಿಮಾದ ಕುರಿತೇ ಮಾತುಕತೆ ನಡೆಯುತ್ತದೆ. ಡಾ.ರಾಜ್‌ಕುಮಾರ್ ಎಂದರೆ ನಮಗೆ ಬಲು ಪ್ರೀತಿ. ಅವರ ಕಟ್ಟಾಭಿಮಾನಿಗಳು ನಾವು’
ಎಂದು ಕಣ್ಣರಳಿಸುತ್ತಾರೆ ನಮ್ಮನೆ ಯುವರಾಣಿಯ ಕೋಳಿಮರಿ. ಚಿಕ್ಕವಳಿದ್ದಾಗಿನಿಂದಲೂ ನಾಟಕಗಳಲ್ಲಿ ವಿಶೇಷ ಆಸಕ್ತಿಯಿತ್ತು. ಶಾಲಾ, ಕಾಲೇಜುಗಳಲ್ಲಿ ಹಲವು ನಾಟಕಗಳಿಗೆ ಬಣ್ಣ ಹಚ್ಚಿದ್ದೇನೆ. ನನ್ನೊಳಗಿನ ನಟಿ ಜಾಗೃತವಾಗಲು ಅದೇ ಕಾರಣ. ಆದರೆ ಇಷ್ಟು ಬೇಗ ನಟನಾ ರಂಗಕ್ಕೆ ಬರುವ ಯೋಚನೆಯಿರಲಿಲ್ಲ. ಪಿಎಚ್‌.ಡಿ ಮಾಡುವ ಕನಸಿತ್ತು. ಆಕಸ್ಮಿಕವಾಗಿ ‘ನಮ್ಮನೆ ಯುವರಾಣಿ’ಯಲ್ಲಿ ನಟಿಸುವ ಅವಕಾಶ ಒದಗಿಬಂತು. ಕಥೆ ಇಷ್ಟವಾದ ಕಾರಣ ಒಲ್ಲೆ ಎನ್ನಲು ಮನಸ್ಸಾಗಲಿಲ್ಲ ಎಂದು ಬೆಳಕಿನ ಜಗತ್ತಿಗೆ ಅಡಿಯಿಟ್ಟಿದ್ದನ್ನು ನೆನಪಿಸಿಕೊಳ್ಳುತ್ತಾರೆ.

‘ನಟನೆಯ ಬಗ್ಗೆ ಅಪ್ಪ ಸಲಹೆ ನೀಡುತ್ತಾರೆ. ನನ್ನ ತಪ್ಪು, ಒಪ್ಪುಗಳನ್ನು ತಿದ್ದುವುದು ಅವರೇ. ನನ್ನ ನಟನೆಗೆ ಅವರೇ ವೀಕ್ಷಕ. ಅಮ್ಮ, ಉಡುಪಿನ ಆಯ್ಕೆಗೆ ನೆರವಾಗುತ್ತಾರೆ’ ಎಂದು ಮನೆಯವರು ನಟನಾ ಬದುಕಿಗೆ ಬೆನ್ನೆಲುಬಾಗಿರುವುದನ್ನು ವಿವರಿಸುತ್ತಾರೆ. ‘ರಂಗಭೂಮಿಯಲ್ಲಿ ಪಳಗಿರುವುದರಿಂದ ಕ್ಯಾಮೆರಾ ಎದುರಿಸುವುದು ಕಷ್ಟವಾಗಲಿಲ್ಲ. ರಂಗಭೂಮಿ ನಟನೆಯ ಹಲವು ಪಟ್ಟುಗಳನ್ನು ಕಲಿಸಿದೆ. ಪಾತ್ರವನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಸನ್ನಿವೇಶಕ್ಕೆ ತಕ್ಕಂತೆ ಸಂಭಾಷಣೆ ನಿರೂಪಿಸುವುದು ರಂಗಭೂಮಿ ಕಲಿಕೆ ಸುಲಭವಾಗಿಸಿದೆ’ ಎನ್ನುತ್ತಾರೆ. ‘ಮೀರಾ ಪಾತ್ರಕ್ಕೂ ನನಗೂ ಸಾಕಷ್ಟು ಸಾಮತ್ಯೆ ಇದೆ. ವೈಯಕ್ತಿಕವಾಗಿ ನಾನು ಭಾವನೆಗಳಿಗೆ ಎಷ್ಟು ಬೆಲೆ ನೀಡುತ್ತೇನೋ ಅಷ್ಟೇ ಮೀರಾಳೂ ಬೆಲೆ ನೀಡುತ್ತಾಳೆ. ಆದರೆ ಆಕೆ ಮಾತನಾಡುವಷ್ಟು ನಾನು ಮಾತನಾಡುವುದಿಲ್ಲ ಎನ್ನುವುದಷ್ಟೇ ವ್ಯತ್ಯಾಸ’ ಎಂದು ಪಾತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಅಂಕಿತಾ ಕಂಠಸಿರಿಯ ಲಾಲಿತ್ಯ ಇವರಿಗೆ ಮತ್ತಷ್ಟು ಜನಪ್ರಿಯತೆಯನ್ನು ನೀಡಿದೆ. ಇವರು ಹಾಡುಗಾರ್ತಿಯೂ ಹೌದು. ಪಾತ್ರದ ಪ್ರಕಾರ ಮೀರಾ ಚೆನ್ನಾಗಿ ಹಾಡುವುದಿಲ್ಲ. ಆದರೆ ನಾನು ಹಾಡುತ್ತೇನೆ ಎಂದು ತಿಳಿದಾಗ ನಿರ್ದೇಶಕರು ಪಾತ್ರದ ತಿರುಳು ಬದಲಾಯಿಸಿ, ನನಗೊಂದು ವೇದಿಕೆಯನ್ನು ಕಲ್ಪಿಸಿಕೊಟ್ಟರು. ಜನ ನನ್ನ ನಟನೆಯನ್ನು ಗುರುತಿಸುವುದರ ಜೊತೆಗೆ ನೀವು ಚೆನ್ನಾಗಿ ಹಾಡುತ್ತೀರಿ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕಿಂತ ಖುಷಿ ನನಗೆ ಇನ್ನೇನಿದೆ ಎಂದೂ ಸಂತಸಪಡುತ್ತಾರೆ ಅಂಕಿತಾ ಅಮರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.