‘ನಮ್ಮನೆ ಯುವರಾಣಿ’ ಧಾರಾವಾಹಿ ಹಾಗೂ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಮುಖಾಂತರ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗಿರುವ ಅಂಕಿತಾ ಅಮರ್ ಇದೀಗ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬರ್ ನಾಯಕನಾಗಿರುವ, ಮಯೂರ ರಾಘವೇಂದ್ರ ನಿರ್ದೇಶನದ ‘ಅಬ ಜಬ ದಬ’ದಲ್ಲಿ ಗಾಯಕಿಯ ಪಾತ್ರದಲ್ಲೇ ಅಂಕಿತಾ ಕಾಣಿಸಿಕೊಳ್ಳಲಿದ್ದಾರೆ.
* ಅಂಕಿತಾ ಅಮರ್ ಹಿನ್ನೆಲೆ ಏನು?
ನಾನು ಹುಟ್ಟಿದ್ದು ಮೈಸೂರಿನಲ್ಲಿ. ಆದರೆ, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿ ಉನ್ನತ ಶಿಕ್ಷಣಕ್ಕೆ ಮೈಸೂರಿಗೆ ವಾಪಸಾಗಿದ್ದೆ. ಎಂಎಸ್ಸಿ ಮೆಡಿಕಲ್ ಬಯೋಕೆಮೆಸ್ಟ್ರಿಯಲ್ಲಿ ಎರಡು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯಾಗಿದ್ದೆ.
ನಟನೆ ಎನ್ನುವುದು ಚಿಕ್ಕಂದಿನಿಂದಲೇ ಇದ್ದ ಆಸಕ್ತಿ. ತಂದೆ ಅಮರ್ ಬಾಬು ಹಾಗೂ ತಾಯಿ ಆಶಾ ಇಬ್ಬರೂ ‘ಕಲಾಗಂಗೋತ್ರಿ’ ಎಂಬ ರಂಗತಂಡದ ಕಲಾವಿದರು. ನನ್ನ ತಂಗಿಯೂ ಇದೀಗ ಈ ತಂಡದ ಸದಸ್ಯೆ. ಜೊತೆಗೆ ನಮ್ಮ ಕುಟುಂಬದವರು ವರನಟ ಡಾ.ರಾಜ್‌ಕುಮಾರ್ ಅವರ ಪರಮಭಕ್ತರು. ಚಿಕ್ಕವಯಸ್ಸಿನಿಂದಲೇ ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆದವಳು ನಾನು. ಹೀಗಾಗಿ ಸಣ್ಣವಯಸ್ಸಲ್ಲೇ ನನಗೆ ಬಣ್ಣದ ಪರಿಚಯವಿತ್ತು. ಜೊತೆಗೆ ರಂಗಭೂಮಿ, ಸಿನಿಮಾ ಎರಡರ ಪ್ರಭಾವವೂ ಹೆಚ್ಚಿತ್ತು. ನಟನಾ ಕ್ಷೇತ್ರದ ವಾತಾವರಣದ ಪರಿಚಯ ನನ್ನ ಕುತೂಹಲವನ್ನು ಹೆಚ್ಚಿಸಿತ್ತು. ‘ತುಂಟ’ ಸಿನಿಮಾದಲ್ಲಿ ಬಾಲನಟಿಯಾಗಿದ್ದೆ. ‘ಜಗಳಗಂಟಿಯರು’ ಧಾರಾವಾಹಿ, ಸಮಾಜಕ್ಕೆ ಸಂದೇಶ ನೀಡುವ ಸರ್ಕಾರದ ಹಲವು ಸಾಕ್ಷ್ಯಚಿತ್ರಗಳಲ್ಲಿ ನಾನು ನಟಿಸಿದ್ದೆ.
* ಕಿರುತೆರೆ ಪಯಣ ಶುರುವಾಗಿದ್ದು ಹೇಗೆ?
ಬಹಳ ಆಕಸ್ಮಿಕವಾಗಿ ಆರಂಭವಾದ ಪಯಣ ಇದು. ಬಾಲನಟಿಯಾಗಿದ್ದ ಕಾರಣ ನನ್ನ ನಟನೆಯ ಬಗ್ಗೆ ಹಲವರಿಗೆ ತಿಳಿದಿತ್ತು. ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮೊದಲು ನಟಿಸಿದ್ದೆ. ಆಗ ನನಗೆ 15 ವರ್ಷ. ಇದಾದ ನಂತರ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಿದೆ. ಶಿಕ್ಷಣ ಪೂರ್ತಿಯಾದ ಬಳಿಕ ಕಲರ್ಸ್ ಕನ್ನಡದಿಂದ ‘ನಮ್ಮನೆ ಯುವರಾಣಿ’ ಅವಕಾಶ ಬಂತು. ಅದಕ್ಕೂ ಮುನ್ನವೇ ಕೆಲ ಧಾರಾವಾಹಿಗಳಿಂದ ಆಫರ್‌ಗಳು ಬಂದಿದ್ದವು. ಇದನ್ನು ನಾನು ಒಪ್ಪಿಕೊಂಡಿರಲಿಲ್ಲ.
‘ನಮ್ಮನೆ ಯುವರಾಣಿ’ಯಲ್ಲಿ ನಟನೆ ಮಾಡುತ್ತಿದ್ದ ಸಂದರ್ಭದಲ್ಲೇ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ನಿರೂಪಕಿಯಾಗುವ ಅವಕಾಶ ದೊರಕಿತು. ಚಿಕ್ಕವಳಿದ್ದಾಗ ಈ ರಿಯಾಲಿಟಿ ಶೋ ಒಂದು ರೀತಿ ವಿಶ್ವವಿದ್ಯಾಲಯದಂತೆ ಕಾಣುತ್ತಿತ್ತು. ಈ ವೇದಿಕೆಯಲ್ಲಿ ಎಸ್‌ಪಿಬಿ ಅವರ ಎದುರು ಹಾಡುವುದು ಕನಸಾಗಿತ್ತು. ಇದನ್ನು ಮನಸಾರೆ ಕೇಳಿಕೊಂಡಿದ್ದ ಕಾರಣ ಇದೀಗ ಆ ಕನಸು ಈಡೇರಿದೆ. ನಿರೂಪಕಿಯಾಗಿ ಹಲವು ವಿಷಯಗಳನ್ನು ನಾನು ಇಲ್ಲಿ ಕಲಿತೆ.
* ನಟನೆಯ ಜೊತೆಗೆ ನಿಮ್ಮ ಭರತನಾಟ್ಯ ಸಂಕೀರ್ತನೆಯೂ ವೈರಲ್ ಆಗಿತ್ತು. ಈ ಅನುಭವ?
ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದು ನನಗೆ ಇಷ್ಟ. ಚಿಕ್ಕವಳಿದ್ದಾಗ ಭರತನಾಟ್ಯ ತರಗತಿಗೆ ಹೋಗುತ್ತಿದ್ದೆ. ಭರತನಾಟ್ಯದಲ್ಲಿ ಇದ್ದ ಪುರಾಣದ ಕಥೆಗಳು ನನ್ನ ಕುತೂಹಲವನ್ನು ಹೆಚ್ಚಿಸಿದ್ದವು. ಶಿಕ್ಷಣದ ಒತ್ತಡದಿಂದ ಭರತನಾಟ್ಯ ಹಾಗೂ ಹಾಡುಗಾರಿಕೆ ಎರಡನ್ನೂ ಅರ್ಧದಲ್ಲೇ ಬಿಡಬೇಕಾಯಿತು. ಆದರೆ ಆಸಕ್ತಿ ಉಳಿದಿತ್ತು. ಈಗಲೂ ನಾನೇನು ಭರತನಾಟ್ಯ ಕಲಿಯುತ್ತಿಲ್ಲ. ತಿಂಗಳಿಗೊಮ್ಮೆ ನಮ್ಮ ಸಂಗೀತ ಶಾಲೆ ನಡೆಸುವ ‘ನಗರ ಸಂಕೀರ್ತನೆ’ಯಲ್ಲಿ ನಾನು ಕಳೆದ ನಾಲ್ಕು ವರ್ಷದಿಂದ ಪಾಲ್ಗೊಳ್ಳುತ್ತಿದ್ದೇನೆ. ದೇವರ ನಾಮ ಹಾಡುತ್ತಾ ನಡೆಯುವ ಕಾರ್ಯಕ್ರಮವದು. ದಕ್ಷಿಣ ಕನ್ನಡ ಜಿಲ್ಲೆಯ ಅಶ್ವತ್ಥಪುರದಲ್ಲಿ ನಡೆದ ಇದೇ ರೀತಿಯ ಸಂಕೀರ್ತನೆ ವೈರಲ್ ಆಗಿತ್ತು.
*‘ಅಬ ಜಬ ದಬ’ದಲ್ಲಿ ನಿಮ್ಮ ಪಾತ್ರದ ಬಗ್ಗೆ?
ನನಗೆ ಹಾಡುವುದು ಎಂದರೆ ಆಸಕ್ತಿ. ಕಳೆದ ನಾಲ್ಕು ವರ್ಷದಿಂದ ಸಂಗೀತ ಕಲಿಯುತ್ತಿದ್ದೇನೆ. ‘ನಮ್ಮನೆ ಯುವರಾಣಿ’ಯಲ್ಲಿ ‘ಮೀರಾ’ ಎನ್ನುವ ಪಾತ್ರ ಹಾಡುವ ಪಾತ್ರವಲ್ಲ. ಆದರೆ ನಾನು ಹಾಡುತ್ತಿದ್ದೆ ಎನ್ನುವ ಕಾರಣಕ್ಕೆ ಹಲವು ದೃಶ್ಯಗಳಲ್ಲಿ ಹಾಡುವ ಅವಕಾಶ ನೀಡಿದರು. ಇದರಿಂದಾಗಿಯೇ ‘ಎದೆ ತುಂಬಿ ಹಾಡುವೆನು’ ವೇದಿಕೆ ಸಿಕ್ಕಿತು ಎಂದೆನಿಸುತ್ತಿದೆ. ಈ ಸಿನಿಮಾದಲ್ಲೂ ನಾನು ಗಾಯಕಿ. ಈ ಪಾತ್ರಕ್ಕೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಂಟಿದೆ. ಪೋಸ್ಟರ್‌ನಲ್ಲೂ ಇದನ್ನು ನೀವು ಗಮನಿಸಬಹುದು. ಎಲ್ಲ ಕಡೆಯೂ ನಟನೆ ಜೊತೆ ಈ ಹಾಡುಗಾರಿಕೆ ಅಂಟಿಕೊಂಡು ಬರುತ್ತಿದೆ.
* ಚಂದನವನಕ್ಕೆ ಹೆಜ್ಜೆ ಇಡುತ್ತಿರುವ ಕ್ಷಣದ ಅನುಭವ?
ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಜೊತೆಗೆ ನಟಿಸುತ್ತಿರುವುದು ಖುಷಿ ತಂದಿದೆ. ಅವರ ನಟನೆ ನನಗೆ ಇಷ್ಟ. ‘ದಿಯಾ’ದಲ್ಲಿ ಅವರ ಪಾತ್ರವನ್ನು ಮೆಚ್ಚಿಕೊಂಡಿದ್ದೆ. ವೈಯಕ್ತಿಕವಾಗಿ ಭೇಟಿಯಾಗಿ ಇದನ್ನು ಹೇಳಬೇಕು ಎಂದುಕೊಂಡಿರುವಾಗಲೇ ಈ ಅವಕಾಶ ಸಿಕ್ಕಿದೆ. ಮಯೂರ ರಾಘವೇಂದ್ರ ಅವರಿಗೂ ಸಂಗೀತದ ನಂಟಿದೆ. ಈ ಚಿತ್ರತಂಡದ ಜೊತೆ ಕೆಲಸ ಮಾಡುತ್ತಾ ನನಗೂ ಕಲಿಕೆಯ ಅವಕಾಶವಿದೆ ಎಂದುಕೊಂಡಿದ್ದೇನೆ.
ಒಮ್ಮೆ ಬಣ್ಣಹಚ್ಚಿದರೆ ಆ ಬಣ್ಣದ ಗೀಳು ಕೊನೆಯವರೆಗೂ ಇರುತ್ತದೆ. ರಂಗಭೂಮಿಯಿಂದ ಕಿರುತೆರೆಗೆ ಅಲ್ಲಿಂದ ಬೆಳ್ಳಿಪರದೆಗೆ... ಈ ಪಯಣದಲ್ಲಿ ಎಲ್ಲ ಕಡೆಯೂ ಬಣ್ಣ, ಅದೇ ಬಣ್ಣವೇ. ವೇದಿಕೆ ಆಗಲಿ ಅಥವಾ ತೆರೆಯೇ ಆಗಲಿ ಸೂಕ್ತವಾದ ಪಾತ್ರ ದೊರಕಿದರೆ ಎಲ್ಲೇ ಪಾತ್ರ ಮಾಡಲೂ ನಾನು ಸಿದ್ಧ. ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುವ ಈ ಸಂದರ್ಭವನ್ನು ಬಹಳ ಕಾತುರದಿಂದ ಕಾಯುತ್ತಿದ್ದೇನೆ. ಈ ಪಯಣ ಎಲ್ಲಿಗೆ ಕರೆದೊಯ್ಯುತ್ತೆ ಎನ್ನುವ ಸೂಚನೆಯೂ ನನಗಿಲ್ಲ. ಬಣ್ಣ ಹಚ್ಚುವ ಪಯಣ ಮುಂದುವರಿಯುತ್ತಿದೆ ಎನ್ನುವ ಖುಷಿ ಹಾಗೂ ನೆಮ್ಮದಿ ಇದೆ. ಸದ್ಯಕ್ಕೆ ‘ನಮ್ಮನೆ ಯುವರಾಣಿ’ ಹಾಗೂ ತೆಲುಗಿನಲ್ಲಿ ‘ಶ್ರೀಮತಿ ಶ್ರೀನಿವಾಸ್’ ಧಾರಾವಾಹಿ ಮಾಡುತ್ತಿದ್ದೇನೆ. ಜ.24ಕ್ಕೆ ಸಿನಿಮಾದ ಮುಹೂರ್ತವಿದ್ದು, ಒಂದು ಹಾಡಿನ ಚಿತ್ರೀಕರಣವನ್ನೂ ಇದೇ ತಿಂಗಳಲ್ಲಿ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿದೆ. ಮಾರ್ಚ್‌ನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.