ADVERTISEMENT

ಸಿನಿಮಾ ಟೈಮ್‌ಪಾಸ್ ‌ಅಲ್ಲ: ನಿರ್ದೇಶಕ ನಂದ ಕಿಶೋರ್‌ ಅಭಿಮತ

ಕೆ.ಎಚ್.ಓಬಳೇಶ್
Published 18 ಜೂನ್ 2020, 14:59 IST
Last Updated 18 ಜೂನ್ 2020, 14:59 IST
ನಂದ ಕಿಶೋರ್
ನಂದ ಕಿಶೋರ್   

‘ಸಿನಿಮಾ ಎಂಬುದು ಮನರಂಜನೆ. ಇದು ಟೈಮ್‌ಪಾಸ್‌ ಅಲ್ಲ. ಒಟಿಟಿ ಕೇವಲ ಟೈಮ್‌ ಕಿಲ್‌ ಮಾಡುವುದಕ್ಕಷ್ಟೇ ಸೀಮಿತ. ಮೊಬೈಲ್‌ನಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ಚಿತ್ರ ನೋಡುತ್ತೇವೆ. ಬೇಕಾದಾಗ ಆನ್ ಮಾಡುತ್ತೇವೆ; ಇಷ್ಟವಿಲ್ಲದಿದ್ದರೆ ಆಪ್‌ ಮಾಡುತ್ತೇವೆ. ಆದರೆ, ಮೂರು ಗಂಟೆ ರಿಲ್ಯಾಕ್ಸ್ ಆಗಲು ಚಿತ್ರಮಂದಿರಕ್ಕೆ ಹೋಗಲೇ ಬೇಕು. ಅಲ್ಲಿ ಸಿಗುವ ಅನುಭವವೇ ಬೇರೆ. ಅಂತಹ ಅನುಭವ ಒಟಿಟಿಯಲ್ಲಿ ಸಿಗುವುದಿಲ್ಲ. ಸಿನಿಮಾಗಳನ್ನು ಥಿಯೇಟರ್‌ನಲ್ಲಿಯೇ ನೋಡುವುದು ಉತ್ತಮ...’

–ಹೀಗೆಂದು ಸ್ಪಷ್ಟವಾಗಿ ಹೇಳಿದರು ನಿರ್ದೇಶಕ ನಂದ ಕಿಶೋರ್‌. ಅವರು ಈ ಮಾತು ಹೇಳಲು ಕಾರಣವೂ ಇತ್ತು. ಅವರೇ ಆ್ಯಕ್ಷನ್‌ ಕಟ್‌ ಹೇಳಿರುವ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರವನ್ನೂ ಒಟಿಟಿಯಲ್ಲಿ ಬಿಡುಗಡೆಗೆ ಒಟಿಟಿ ಕಂಪನಿಯೊಂದು ಕೇಳಿತ್ತಂತೆ. ಆದರೆ, ಇದಕ್ಕೆ ಚಿತ್ರತಂಡ ಒಪ್ಪಿಗೆ ನೀಡಿಲ್ಲ.

‘ಪೊಗರು ಚಿತ್ರಕ್ಕೂ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೆ ಅವಕಾಶ ಬಂದಿತ್ತು. ನಾವು ಕೋಟ್ಯಂತರ ರೂಪಾಯಿ ವ್ಯಯಿಸಿ ಸಿನಿಮಾ ಮಾಡಿದ್ದೇವೆ. ಸಿನಿಮಾದಲ್ಲಿ ಏನು ಮಾಡಿದ್ದೇವೆ ಎಂಬುದನ್ನು ಪ್ರೇಕ್ಷಕರಿಗೆ ಒಟಿಟಿಯಲ್ಲಿ ತೋರಿಸಲು ಆಗುವುದಿಲ್ಲ. ಸೌಂಡ್‌ಗಾಗಿಯೇ ₹50 ಲಕ್ಷ ವೆಚ್ಚ ಮಾಡಿರುತ್ತೇವೆ. ಡಾಲ್ಬಿ ಡಿಟಿಎಸ್‌ ಮಾಡಿಸಿರುತ್ತೇವೆ. ಥಿಯೇಟರ್‌ನಲ್ಲಿ ಚಿತ್ರ ನೋಡಿದರೆ ಮಾತ್ರ ಅದರ ಅನುಭವ ದಕ್ಕುತ್ತದೆ. ಮೊಬೈಲ್‌ನಲ್ಲಿ ಅದನ್ನು ಆನಂದಿಸಲು ಆಗುವುದಿಲ್ಲ’ ಎನ್ನುತ್ತಾರೆ ನಂದ ಕಿಶೋರ್‌.

ADVERTISEMENT

ಥಿಯೇಟರ್‌ನಲ್ಲಿ ತಾಳ್ಮೆಯಿಂದ ಸಿನಿಮಾ ನೋಡುತ್ತಾರೆ. ಅಲ್ಲಿ ಸಿಗುವ ಮನರಂಜನೆಯೇ ಬೇರೆ. ಅಲ್ಲೊಂದು ಎನರ್ಜಿ ಇರುತ್ತದೆ. ಅದು ಒಟಿಟಿಯಲ್ಲಿ ಸಿಗುವುದಿಲ್ಲ ಎಂಬುದು ಅವರ ಖಚಿತ ನುಡಿ.

ಇತ್ತೀಚೆಗೆ ಕನ್ನಡದಲ್ಲಿಯೂ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಹೆಚ್ಚು ಅವಕಾಶ ಸಿಗುತ್ತಿದೆ. ಅವರೊಟ್ಟಿಗೂ ಒಟಿಟಿ ಕಂಪನಿಗಳು ಮಾತುಕತೆ ನಡೆಸಿವೆ. ಆದರೆ, ಬಿಗ್ ಬಜೆಟ್‌ ಸಿನಿಮಾಗಳ ಬಿಡುಗಡೆಗೆ ಒಟಿಟಿ ಸೂಕ್ತ ವೇದಿಕೆಯಲ್ಲ ಎನ್ನುವುದು ಅವರ ಅಭಿಪ್ರಾಯ.

‘ಪೊಗರು’ ಚಿತ್ರದ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿಯಿದೆಯಂತೆ. ಬೆಂಗಳೂರಿನಲ್ಲಿಯೇ ಅದರ ಶೂಟಿಂಗ್‌ಗೆ ಅವರು ನಿರ್ಧರಿಸಿದ್ದಾರೆ. ‘ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿದೆ. ಧ್ರುವ ಸರ್ಜಾ ಅವರ ಈಗಿನ ಸ್ಥಿತಿಯಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದು ಕಷ್ಟ. ಇನ್ನೂ ಚಿತ್ರಮಂದಿರಗಳು ಆರಂಭಗೊಂಡಿಲ್ಲ. ಚಿತ್ರದ ಬಿಡುಗಡೆಗೆ ಯೋಜನೆ ರೂಪಿಸಲು ಇನ್ನೂ ಒಂದೂವರೆ ತಿಂಗಳು ಬೇಕಿದೆ. ಮತ್ತೊಂದೆಡೆ ಥಿಯೇಟರ್‌ಗಳು ಹೇಗೆ ಶುರುವಾಗುತ್ತವೆ ಎಂಬುದೂ ಗೊತ್ತಿಲ್ಲ’ ಎನ್ನುತ್ತಾರೆ ಅವರು.

‘ಮೊದಲ ವಾರದ ಮೂರ್ನಾಲ್ಕು ದಿನಗಳಲ್ಲಿ ಒಳ್ಳೆಯ ಕಲೆಕ್ಷನ್‌ ಸಿಗಬೇಕು. ಕಲೆಕ್ಷನ್‌ ಲಭಿಸದಿದ್ದರೆ ಕಷ್ಟವಾಗಲಿದೆ. ಚಿತ್ರಮಂದಿರಗಳ ಪ್ರದರ್ಶನಕ್ಕೆ ಅನುಮತಿ ಸಿಕ್ಕಿದರೂ ಜುಲೈನಲ್ಲಿ ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆಯಾಗುವುದು ಕಷ್ಟಕರ. ಆಗಸ್ಟ್‌ನಿಂದ ಬಿಡುಗಡೆಯಾಗಬಹುದು. ಪೊಗರು ಚಿತ್ರವೂ ಇದರಿಂದ ಹೊರತಲ್ಲ’ ಎಂಬುದು ಅವರ ವಿವರಣೆ.

ಧ್ರುವ ಜೊತೆಗೆ ಹೊಸ ಚಿತ್ರ

ಧ್ರುವ ಸರ್ಜಾ ಮತ್ತು ನಂದ ಕಿಶೋರ್‌ ಕಾಂಬಿನೇಷನ್‌ನಡಿ ಮತ್ತೊಂದು ಹೊಸ ಸಿನಿಮಾ ಶುರುವಾಗಲಿದೆಯಂತೆ. ಇದಕ್ಕೆ ಉದಯ್ ಮೆಹ್ತಾ ಬಂಡವಾಳ ಹೂಡಲಿದ್ದಾರೆ. ‘ಇದು ರಿಮೇಕ್‌ ಚಿತ್ರವಲ್ಲ. ವಿಭಿನ್ನವಾದ ಕಥೆ. ಟೈಟಲ್‌ ಜೊತೆಗೆಯೇ ಸಿನಿಮಾ ಘೋಷಿಸಲು ನಿರ್ಧರಿಸಿದ್ದೇವೆ. ಇನ್ನೂ ನಾಯಕಿಯ ಆಯ್ಕೆ ಅಂತಿಮಗೊಂಡಿಲ್ಲ’ ಎಂದು ಮಾಹಿತಿ ನೀಡುತ್ತಾರೆ.

ಮಹಿಳಾ ಕೇಂದ್ರಿತ ಚಿತ್ರ

ನಂದ ಕಿಶೋರ್‌ ಎರಡು ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾತುಕತೆ ನಡೆಸಿದ್ದಾರಂತೆ. ಹೊಸ ಹೀರೊನ ಲಾಂಚ್ ಮಾಡುವ ಆಲೋಚನೆಯಲ್ಲಿ ಇದ್ದಾರೆ. ‘ಈ ಚಿತ್ರದ ಕಥೆ, ಚಿತ್ರಕಥೆ ಕೂಡ ಸಿದ್ಧವಾಗುತ್ತಿದೆ. ನಾಯಕಿ ಪ್ರಧಾನ ಸಿನಿಮಾವೊಂದನ್ನು ನಿರ್ದೇಶಿಸಲು ತಯಾರಿ ನಡೆಸಿರುವೆ. ಸ್ನೇಹಿತರೊಟ್ಟಿಗೆ ಇದರ ಬಗ್ಗೆ ಚರ್ಚಿಸುತ್ತಿರುವೆ. ಇನ್ನೂ ಆ ಸಿನಿಮಾದ ನಾಯಕಿಯ ಆಯ್ಕೆ ಅಂತಿಮಗೊಂಡಿಲ್ಲ. ಡೈನಾಮಿಕ್‌ ಆದಂತಹ ಪಾತ್ರವದು’ ಎನ್ನುತ್ತಾರೆ.

ಅಂದಹಾಗೆ ಕನ್ನಡದ ನಟಿಯೇ ಇದಕ್ಕೆ ನಾಯಕಿಯಾಗಲಿದ್ದಾರಂತೆ. ಯಾವುದೇ ಕಾರಣಕ್ಕೂ ಹೊರಗಡೆಯವರಿಗೆ ಪ್ರಧಾನ್ಯ ನೀಡುವುದಿಲ್ಲ ಎನ್ನುವುದು ಅವರ ದೃಢ ನಿರ್ಧಾರ. ‘ನಮ್ಮಲ್ಲಿಯೇ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಇದ್ದಾರೆ. ಅವರಿಗೆ ಹೆಚ್ಚು ಅವಕಾಶ ನೀಡಬೇಕು ಎನ್ನುವುದು ನನ್ನಾಸೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.