‘ಪವರ್‌ಸ್ಟಾರ್’ ಪುನೀತ್ ರಾಜ್‌ಕುಮಾರ್ ಮತ್ತು ನಿರ್ದೇಶಕ ಪವನ್ ಒಡೆಯರ್ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರವು ಫೆಬ್ರುವರಿ 7ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
‘ನಟಸಾರ್ವಭೌಮ’ನ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಪ್ರಕಟಗೊಂಡಿರುವುದು ಅಪ್ಪು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಇದೇ 25ರಂದು ಚಿತ್ರ ತೆರೆಕಾಣಬೇಕಿತ್ತು. ಆದರೆ, ಸೆನ್ಸಾರ್ ಕಾರಣಕ್ಕಾಗಿ ಎರಡು ವಾರಗಳ ಕಾಲ ಮುಂದಕ್ಕೆ ಹೋಗಿತ್ತು. ಈಗ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.
‘ನಟಸಾರ್ವಭೌಮ ಚಿತ್ರಕ್ಕೆ ಸೆನ್ಸಾರ್‌ನ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಫೆಬ್ರವರಿ 7ರಂದು ಚಿತ್ರ ಬಿಡುಗಡೆಯಾಗಲಿದೆ’ ಎಂದು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಟ್ವೀಟ್ ಮಾಡಿದೆ.
‘ರಣವಿಕ್ರಮ’ ಚಿತ್ರದಲ್ಲಿ ಪುನೀತ್ ಪಕ್ಕಾ ಆ್ಯಕ್ಷನ್ ಹೀರೊ ಆಗಿ ಮಿಂಚಿದ್ದರು. ‘ನಟಸಾರ್ವಭೌಮ’ದಲ್ಲಿ ಪವನ್ ಒಡೆಯರ್ ಅವರು ಪುನೀತ್ ಕೈಗೆ ಕ್ಯಾಮೆರಾ ನೀಡಿ ಪತ್ರಕರ್ತನ ಕಥೆ ಹೇಳಲು ಹೊರಟಿದ್ದಾರೆ.
ಈ ಚಿತ್ರದಲ್ಲಿ ಅಪ್ಪು ಅವರದ್ದು ತನಿಖಾ ವರದಿಗಾರನ ಪಾತ್ರವಂತೆ. ಅವರ ವೃತ್ತಿಬದುಕಿನಲ್ಲಿ ಇಂತಹ ಸಿನಿಮಾ ಮಾಡಿಲ್ಲ. ಅವರೊಬ್ಬ ಸಾಹಸಿ ಪತ್ರಕರ್ತನಾಗಿ ಹೇಗೆ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳ ಹಗರಣಗಳು, ಅಪರಾಧ ಕೃತ್ಯಗಳನ್ನು ಬಯಲಿಗೆಳೆಯುತ್ತಾರೆ ಎನ್ನುವುದೇ ಕಥಾಹಂದರ.
ಚಿತ್ರದಲ್ಲಿ ಆರು ಆ್ಯಕ್ಷನ್ ಸನ್ನಿವೇಶಗಳಿವೆ. ಇದರ ಜೊತೆಗೆ ಕಮರ್ಷಿಯಲ್ ಅಂಶಗಳೂ ಇವೆ. ಕಥೆಯ ಪಾತ್ರಕ್ಕೆ ಅನುಗುಣವಾಗಿ ಆ್ಯಕ್ಷನ್ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ವಿಮಾನದಲ್ಲಿ ಒಂದು ಸಾಹಸ ದೃಶ್ಯವನ್ನು ಚಿತ್ರೀಕರಿಸಿರುವುದು ಸಿನಿಮಾದ ವಿಶೇಷ. ಆ ರೀತಿಯ ಶೂಟ್ ಮಾಡಿದ್ದು ಕನ್ನಡದಲ್ಲಿ ಇದೇ ಮೊದಲು ಎನ್ನುವುದು ಚಿತ್ರತಂಡದ ಹೇಳಿಕೆ.
ರಾಕ್‌ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಟಿಯರಾದ ರಚಿತಾ ರಾಮ್, ಅನುಪಮಾ ಪರಮೇಶ್ವರನ್ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.