ADVERTISEMENT

ಥಿಯೇಟರ್‌ ಹೊಸ್ತಿಲಿಗೆ ನಾತಿಚರಾಮಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 19:30 IST
Last Updated 13 ಡಿಸೆಂಬರ್ 2018, 19:30 IST
ಶರಣ್ಯ
ಶರಣ್ಯ   

ಮಂಸೋರೆ ನಿರ್ದೇಶಿಸಿದ ‘ಹರಿವು’ ಚಿತ್ರ ರಾಷ್ಟ್ರ‍ಪ್ರಶಸ್ತಿ ಪಡೆದಿತ್ತು. ಆದರೆ, ಅದನ್ನು ಥಿಯೇಟರ್‌ಗೆ ತರಲಾಗಲಿಲ್ಲ ಎಂಬ ಕೊರಗು ಅವರಲ್ಲಿದೆ. ಈ ಚಿತ್ರದ ಬಳಿಕ ಅವರು ನಿರ್ದೇಶಿಸಿದ ‘ನಾತಿಚರಾಮಿ’ ಸಿನಿಮಾ ಮುಂಬೈ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡು ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದೆ.

ಊಟ ಬಿಸಿ ಇರುವಾಗಲೇ ಉಣಬಡಿಸಿದರೆ ಅದರ ರುಚಿಗೆ ಮಹತ್ವ ಹೆಚ್ಚು ಎಂಬ ಅರಿವೂ ನಿರ್ದೇಶಕರಿಗೆ ಅರಿವಾದಂತಿದೆ. ಹಾಗಾಗಿ, ಶೀಘ್ರವೇ ಸಿನಿಮಾ ಬಿಡುಗಡೆಗೆ ಅವರು ಯೋಜನೆ ರೂಪಿಸಿಕೊಂಡಿದ್ದಾರಂತೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

‘ನಾತಿಚರಾಮಿ’ ಮಹಿಳಾ ಪ್ರಧಾನ ಚಿತ್ರ. ಗೌರಿ ಎಂಬ ಹೆಣ್ಣುಮಗಳೊಬ್ಬಳ ಕಥೆ ಇದು. ಮಹಿಳೆಯರ ಒಂಟಿತನ ಮತ್ತು ಲೈಂಗಿಕ ಜೀವನದ ಬಗ್ಗೆಯೂ ಸೂಕ್ಷ್ಮವಾಗಿ ಹೇಳಲಾಗಿದೆಯಂತೆ. ಒಂಟಿ ಹೆಣ್ಣೊಬ್ಬಳ ಲೈಂಗಿಕ ಬದುಕು ಮತ್ತು ಔದ್ಯೋಗಿಕ ವಲಯದಲ್ಲಿ ಆಕೆ ಎದುರಿಸುವ ಕಿರುಕುಳದ ಸುತ್ತ ಕಥೆ ಹೆಣೆಯಲಾಗಿದೆ.

ADVERTISEMENT

‘ಚಿತ್ರದ ಹಾಡುಗಳು ಸೊಗಸಾಗಿವೆ. ಹಿಂಗಿ ಹೋಗು ಒಮ್ಮೆ ದಾಹ ನೀಗಿ...’ ಎಂಬ ಹಾಡಿನ ಸಾಲುಗಳು ಜನರಿಗೆ ಇಷ್ಟವಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು ಮಂಸೋರೆ.

ನಟ ಸಂಚಾರಿ ವಿಜಯ್‌ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಪ್ರೇಕ್ಷಕರ ಭಾವನೆಗಳನ್ನು ಕೆಣಕುವ ಶಕ್ತಿ ಮಂಸೋರೆಗಿದೆ. ನೋಡುಗರ ಭಾವನೆಗಳನ್ನು ಕೆಣಕುವ ದೃಶ್ಯಗಳು ಚಿತ್ರದಲ್ಲಿವೆ. ಹಾಡುಗಳನ್ನು ಪ್ರತಿ ಬಾರಿ ಕೇಳಿದಾಗಲೂ ನಾನು ಡಿಪ್ರೆಶನ್‌ಗೆ ಹೋಗಿದ್ದೇನೆ’ ಎಂದು ಹೇಳಿಕೊಂಡರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ಬಿಂದುಮಾಲಿನಿ ಸಂಗೀತ ಸಂಯೋಜಿಸಿದ್ದಾರೆ. ತಮಿಳಿನ ‘ಅರುವಿ’ ಹಾಗೂ ಕನ್ನಡದ ‘ಹರಿಕಥಾ ಪ್ರಸಂಗ’ ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸಿದ್ದರು. ಇದು ಅವರಿಗೆ ಮೂರನೇ ಚಿತ್ರ. ‘ನಿರ್ದೇಶಕರು ಸೂಕ್ಷ್ಮವಾಗಿ ಚಿತ್ರ ಮಾಡಿದ್ದಾರೆ’ ಎಂದು ಹೊಗಳಿದರು.

ಗಾಯಕಿ ಶರಣ್ಯ ಇದರಲ್ಲಿ ನಟಿಸಿದ್ದಾರೆ. ಅವರದು ನಾಯಕಿಗೆ ಸರಿಸಮಾನವಾಗಿರುವ ಪಾತ್ರವಂತೆ. ‘ನಾನು ಕಿರುತೆರೆಯಲ್ಲಿ ನಟಿಸಿದ್ದೇನೆ. ಆದರೆ, ಸಿನಿಮಾದಲ್ಲಿನ ನಟನೆಯೇ ಬೇರೆ. ಮೊದಲ ದಿನ ಶೂಟಿಂಗ್‌ ಸೆಟ್‌ಗೆ ಹೋದಾಗಲೇ ಇದರ ಅನುಭವವಾಯಿತು. ಕೊನೆಗೆ, ಸಿನಿಮಾ ಹಾದಿಗೆ ಹೊರಳಿದೆ’ ಎಂದು ವಿವರಿಸಿದರು.

ನಟಿ ಶ್ರುತಿಹರಿಹರನ್‌ ಅವರ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಗುರುಪ್ರಸಾದ್‌ ನರ್ನಾಡ್‌ ಅವರ ಛಾಯಾಗ್ರಹಣವಿದೆ.ಜಗನ್ಮೋಹನ್‌ ರೆಡ್ಡಿ ಮತ್ತು ಶಿವಕುಮಾರ್‌ ಬಂಡವಾಳ ಹೂಡಿದ್ದಾರೆ. ಇದೇ ವೇಳೆ ಚಿತ್ರದ ಟ್ರೇಲರ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

ಮಂಸೋರೆ, ಸಂಚಾರಿ ವಿಜಯ್, ಬಿಂದುಮಾಲಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.