ADVERTISEMENT

ನಿರ್ದೇಶಕ ಮಂಸೋರೆ ಸಂದರ್ಶನ | ‘ಒಳದನಿಗೆ ಕಿವಿಯಾದೆ...

ಶರತ್‌ ಹೆಗ್ಡೆ
Published 2 ಮಾರ್ಚ್ 2023, 19:30 IST
Last Updated 2 ಮಾರ್ಚ್ 2023, 19:30 IST
ಮಂಸೋರೆ
ಮಂಸೋರೆ   

ನಿರ್ದೇಶಕ ಮಂಸೋರೆ ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್‌ 1978’ ಬಳಿಕ ‘19–20–21’ ಚಿತ್ರದ ಮೂಲಕ ದಮನಿತರ ಕಥೆಯನ್ನು ಹೊತ್ತು ತಂದಿದ್ದಾರೆ. ಚಿತ್ರ ಬಿಡುಗಡೆಯ ಹೊತ್ತಿನಲ್ಲಿ ನಿರ್ದೇಶಕರ ಫ್ಲ್ಯಾಷ್‌ಬ್ಯಾಕ್‌...

* ನಿಜ ಘಟನೆಗಳು ದೃಶ್ಯರೂಪ ಪಡೆಯಲು ಕಾರಣ?
ಬದುಕು ಎಲ್ಲ ಕಥೆಗಳನ್ನೂ ತೋರಿಸಿದೆ. ಹಾಗೆ ನೋಡಿದರೆ ನಾನು, ನನ್ನ ಆಪ್ತ ಬಳಗದಲ್ಲಿಯೂ ನಿರ್ಲಕ್ಷ್ಯಕ್ಕೆ ಒಳಗಾದವನೇ. ಬೆಂಗಳೂರಿಗೆ ಬಂದಾಗ ಸುಮಾರು ಒಂದೂವರೆ ವರ್ಷ ಮೆಜೆಸ್ಟಿಕ್‌ ಪ್ರದೇಶವೇ ನನ್ನ ವಾಸಸ್ಥಾನವೂ ಆಗಿತ್ತು. ಅಲ್ಲಿ ಹಗಲು, ರಾತ್ರಿಗಳಲ್ಲಿ ಜಗತ್ತನ್ನು ಕಂಡೆ. ಅಲ್ಲಿ ಪ್ರತಿಯೊಂದೂ ಕಥೆಯೇ. ನನ್ನ ವರ್ಣ ಚಿತ್ರಕಲೆಯೂ ಹಾಗೆಯೇ. ಪರಿಣತರೆಲ್ಲಾ ಅವುಗಳನ್ನು ಇಲಸ್ಟ್ರೇಷನ್ಸ್ ಎಂದು ಕರೆದರು. ಅದೇ ಜಾಡಿನಲ್ಲಿ ಸಿನಿಮಾ ಇದೆ. ಹಾಗೆಂದು ಇಂಥದ್ದೇ ಜಾನರ್‌ನ ಸಿನಿಮಾ ಮಾಡಬೇಕು ಎಂದು ಹೊರಟವನೂ ಅಲ್ಲ. ಕಿರುಚಿತ್ರ ಮಾಡಬೇಕು ಎಂದು ಹೊರಟವನಿಗೆ ಮುಂದೆ ಅದು ಸಿನಿಮಾ ಆಗುತ್ತದೆ ಎಂಬ ಊಹೆ ಇರಲಿಲ್ಲ. ಅಪ್ಪನಿಗೆ ಆ ಚಿತ್ರವನ್ನು ಅರ್ಪಿಸಿದೆ. ನಾನು ಕಲಿತು ಸಿನಿಮಾ ಮಾಡಿದವನಲ್ಲ. ಸಿನಿಮಾ ಮಾಡುತ್ತಲೇ ಕಲಿತವನು.

* ನೋವುಗಳತ್ತಲೇ ಗಮನ ಕೇಂದ್ರೀಕರಿಸಿದ್ದೀರಲ್ಲಾ?
ಹೌದು, ಖುಷಿ ಖುಷಿಯಾಗಿರುವವರ ಕಥೆ ಏನೆಂದು ಹೇಳಲಿ? ನೋಡಿ, ಸಮಸ್ಯೆಗಳು ರಾಜಧಾನಿ ಬೆಂಗಳೂರಿನ ಆಚೆಗೂ ಇವೆ. ನೋವುಗಳಿವೆ. ನಾವು ಅವುಗಳನ್ನು ಕೇಳಿಸಿಕೊಂಡಿಲ್ಲ. ಅವು ನಮಗೆ ಕಾಡಿಲ್ಲ. ಅಂಥ ನೋವುಗಳನ್ನು ತಿಳಿದುಕೊಳ್ಳಬೇಕು. ಜೊತೆಗೆ ಸಿನಿಮಾ ಎಂದಾದಾಗ ಆರ್ಥಿಕ ಲೆಕ್ಕಾಚಾರಗಳೂ ಇರುತ್ತವಲ್ಲಾ. ಹಾಗಾಗಿ ಸ್ವಲ್ಪ ಕಮರ್ಷಿಯಲ್‌ ಸ್ಪರ್ಶ ನೀಡಿ ಹೀಗೂ ನೋವು, ಸಂಕಷ್ಟಗಳನ್ನು ತೆರೆದಿಡಬಹುದು ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ ಅಷ್ಟೆ. ನನ್ನ ಕಾಳಜಿಯೂ ಅಂಥದ್ದೇ. ಕೆಲಕಾಲ ಪತ್ರಿಕೆಯಲ್ಲೂ ಕೆಲಸ ಮಾಡಿದ್ದೆ. ಸುತ್ತಮುತ್ತಲಿನ ಜಗತ್ತನ್ನು ನೋಡುತ್ತಿದ್ದೆ. ನಾನೂ ಒಂಟಿತನ, ಕಡೆಗಣನೆಗೆ ಒಳಗಾದದ್ದು ಎಲ್ಲವನ್ನೂ ಅನುಭವಿಸಿದವನಲ್ಲವೇ? ನನ್ನೊಳಗಿನ ಬೆಂಕಿ, ಸಂಘರ್ಷವನ್ನೂ ಈ ಮೂಲಕ ಅಭಿವ್ಯಕ್ತಿಸಬೇಕಿತ್ತು. ಹಾಗಾಗಿ ಸಹಜವಾಗಿ ಇಂಥ ಚಿತ್ರಗಳು ಕೈಗೆ ಸಿಕ್ಕಿದವು. ಹಾಗೆಂದು ಇಂಥದ್ದಕ್ಕೇ ಸೀಮಿತವಾಗುತ್ತೇನೆಂದಲ್ಲ.

ADVERTISEMENT

* ‘19.20.21’ ಚಿತ್ರಕ್ಕಾಗಿ ಅಧ್ಯಯನ ನಡೆಸಿದಾಗಿನ ಅನುಭವ?
ನೋಡಿ ಅಲ್ಲಿನ ಒಂದೊಂದು ವಿಷಯವನ್ನೂ ಸಿನಿಮಾ ಮಾಡಬಹುದು. ಮಲೆಕುಡಿಯರು ಕಾಡಿನ ನಡುವೆ ಒಂದು ಪುಟ್ಟ ರಸ್ತೆ ಮಾಡಿದ್ದಾರೆ. ಅದಕ್ಕಾಗಿ ಅವರು ಅರಣ್ಯ ಇಲಾಖೆಯವರಿಂದ ಎದುರಿಸಿದ ಹಿಂಸೆ ಒಂದೊಂದಾಗಿ ತೆರೆದುಕೊಂಡಿವೆ. ಅಷ್ಟು ಕರಾಳತೆ, ಹೊರಜಗತ್ತಿಗೆ ತಿಳಿಯದ ಸತ್ಯಗಳಿವೆ. ಆ ಅಧ್ಯಯನವೇ ಒಂದು ಅದ್ಭುತ.

ಇದರ ಜೊತೆ ಇನ್ನೊಂದು ವಿಷಯ ಹೇಳುತ್ತೇನೆ. ನಾನೂ ಅಲಕ್ಷ್ಯಕ್ಕೆ ಒಳಗಾದವನೇ ಅಂದೆನಲ್ಲಾ. ಒಂಟಿತನ ನೀಗಲು ಆಗ ನಾನು ಪುಸ್ತಕಗಳ ಒಡನಾಡಿಯಾದೆ. ಅದು ತುಂಬಾ ನೆರವಾಯಿತು. ನನ್ನನ್ನು ತಿದ್ದುವಲ್ಲಿ, ಭಾಷೆ, ಗಾಂಭೀರ್ಯ ಅಥವಾ ಇಂಥ ಗಟ್ಟಿತನದ ವಸ್ತುಗಳನ್ನು ಆಯ್ಕೆ ಮಾಡುವಲ್ಲಿ ‘ಪ್ರಜಾವಾಣಿ’ಯ ಕೊಡುಗೆ ತುಂಬಾ ಇದೆ. ಸಾಕಷ್ಟು ಜನರ, ಗುರುಗಳ ಒಡನಾಟ ಆಯಿತು. ಹಲವು ಪತ್ರಕರ್ತರು, ಡಿ.ಆರ್‌.ನಾಗರಾಜ್‌ ಅವರ ವೈಚಾರಿಕ ಬರಹಗಳ ಪ್ರಭಾವದಿಂದ ಇಲ್ಲಿವರೆಗೆ ಬಂದಿದ್ದೇನೆ.

* ಕಾನೂನು ಸವಾಲುಗಳು, ವ್ಯವಸ್ಥೆಯ ವಿರೋಧ ಏನಾದರೂ ಎದುರಾದವೇ?
ಇದುವರೆಗೆ ನೇರವಾಗಿ ಬರಲಿಲ್ಲ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗಳು, ಟ್ರೋಲ್‌ಗಳು ನಡೆದಿವೆ. ಅದೇನೇ ಆಗಲಿ. ಆ ಎಲ್ಲ ಮಾತುಗಳಿಗೆ ಸಿನಿಮಾ ಉತ್ತರಿಸಿದೆ.

-ಶೃಂಗ ಬಿ.ವಿ.

* ಈ ಚಿತ್ರವನ್ನು ಏಕೆ ನೋಡಬೇಕು?
ಮಾನವೀಯತೆಗಾಗಿ ನೋಡಿ. ನೀವು ತಿಳಿಯದ ಒಳಜಗತ್ತನ್ನು ನೋಡಿ. ನೋಡಿದಾಗ ಎಲ್ಲವೂ ಬದಲಾಗುತ್ತದೆ ಎಂದಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವಿಷಯಕ್ಕೆ ತಕ್ಷಣದ ಪ್ರತಿಕ್ರಿಯೆ ಕೊಡುವ ಮುನ್ನ ಆ ಘಟನೆಗಳ ಇನ್ನೊಂದು ಮಗ್ಗುಲನ್ನೂ ಯೋಚಿಸಿ. ಕನಿಷ್ಠ, ಧ್ವನಿ ಇಲ್ಲದವರ ಧ್ವನಿ ಹೀಗೂ ಇರುತ್ತದೆ ಎನ್ನಲು ಕಿವಿಯಾಗಿ.

ಇನ್ನೊಂದು ಕಾರಣ ಅಕ್ಟೋಬರ್ 20, 2021ರಂದು ಆ ಪ್ರಕರಣದ ತೀರ್ಪು ಬಂದು ಆರೋಪಿ ಜಾಗದಲ್ಲಿದ್ದ ವಿದ್ಯಾರ್ಥಿ ಬಿಡುಗಡೆಯಾದ. ಮಾರ್ಚ್‌ 3,2013ರಂದು ಈ ಚಿತ್ರದ ಕಥಾನಾಯಕನ ಬಂಧನವಾಗಿತ್ತು. ಅದಾಗಿ 10 ವರ್ಷಗಳ ಬಳಿಕ ಅದೇ ದಿನಾಂಕದಂದು ಈ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲವೂ ಕಾಕತಾಳೀಯ. ಈ ವಿದ್ಯಾರ್ಥಿಯ ಪಾತ್ರವನ್ನು ಶೃಂಗ ನಿರ್ವಹಿಸಿದ್ದಾರೆ.

*ಮಲೆಕುಡಿಯರಿಗೆ ಸಿನಿಮಾ ತೋರಿಸಿದಾಗ ಪ್ರತಿಕ್ರಿಯೆ ಹೇಗಿತ್ತು?
ಮಲೆಕುಡಿಯರಿಗೆ ನಾಗರಿಕ ಪ್ರಪಂಚದ ನಾಟಕೀಯತೆ ಗೊತ್ತಿಲ್ಲ. ಮುಗ್ಧವಾಗಿದ್ದಾರೆ. ಸಿನಿಮಾ ನೋಡಿದ ಬಳಿಕ ಅವರು ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದರು. ಆಗ ಬೆಚ್ಚನೆಯ ಸ್ಪರ್ಶ ಮತ್ತು ಬಿಗಿ ಹಿಡಿತದಲ್ಲಿದ್ದ ಭಾವ, ಅವರ ಹೃದಯ ಮಿಡಿತದ ಸದ್ದನ್ನು ಅನುಭವಿಸಿದ್ದೇನೆ. ಮಾಡಿದ ಸಿನಿಮಾಗಳು, ಅವುಗಳಿಗೆ ಬಂದ ಪ್ರಶಸ್ತಿ ಅವೆಲ್ಲಕ್ಕಿಂತಲೂ ಮೀರಿದ ಸಾರ್ಥಕ ಭಾವವನ್ನು ಆ ಕ್ಷಣ ಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.