ADVERTISEMENT

ದೇಶಭಕ್ತಿ, ರಾಷ್ಟ್ರವಾದದ ನಡುವೆ ವ್ಯತ್ಯಾಸವಿದೆ: '83' ನಿರ್ದೇಶಕ ಕಬೀರ್‌ ಖಾನ್‌

ಪಿಟಿಐ
Published 26 ಮಾರ್ಚ್ 2022, 15:15 IST
Last Updated 26 ಮಾರ್ಚ್ 2022, 15:15 IST
ನಿರ್ದೇಶಕ ಕಬೀರ್‌ ಖಾನ್‌ (ಎಎಫ್‌ಪಿ ಚಿತ್ರ)
ನಿರ್ದೇಶಕ ಕಬೀರ್‌ ಖಾನ್‌ (ಎಎಫ್‌ಪಿ ಚಿತ್ರ)   

ಮುಂಬೈ: 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ಬಗೆಗಿನ ಚರ್ಚೆಯ ಕಾವಿನ ನಡುವೆ ಸಿನಿಮಾದಲ್ಲಿನ 'ದೇಶಭಕ್ತಿ' ಮತ್ತು 'ರಾಷ್ಟ್ರವಾದ'ಯ ನಡುವಿನ ವ್ಯತ್ಯಾಸದ ಬಗ್ಗೆ ಬಾಲಿವುಡ್‌ ನಿರ್ದೇಶಕ ಕಬೀರ್‌ ಖಾನ್‌ ಮಾತನಾಡಿದ್ದಾರೆ.

'ದೇಶಭಕ್ತಿ' ಮತ್ತು 'ರಾಷ್ಟ್ರವಾದ'ಯ ನಡುವೆ ವ್ಯತ್ಯಾಸವಿದೆ. 'ದೇಶಭಕ್ತಿ' ಎಂಬುದು ರಾಷ್ಟ್ರದ ಮೇಲಿನ ಪರಿಶುದ್ಧವಾದ ಪ್ರೀತಿಯಾಗಿದೆ. ಅದನ್ನು ಸಿನಿಮಾದಲ್ಲಿ ತೋರಿಸಲು ಒಬ್ಬ ಖಳನಾಯಕ ಅಥವಾ ಯಾವುದನ್ನಾದರೂ ಗುರಿಯಾಸಿಕೊಳ್ಳಬೇಕಾದ ಅಗತ್ಯತೆ ಕಂಡುಬರುವುದಿಲ್ಲ ಎಂದು ನಂಬಿರುವುದಾಗಿ ಕಬೀರ್‌ ಖಾನ್‌ ತಿಳಿಸಿದ್ದಾರೆ.

'ಕಾಬುಲ್‌ ಎಕ್ಸ್‌ಪ್ರೆಸ್‌', 'ನ್ಯೂಯಾರ್ಕ್‌', 'ಬಜರಂಗಿ ಭಾಯಿಜಾನ್‌', '83' ಮುಂತಾದ ಹೆಸರಾಂತ ಸಿನಿಮಾಗಳನ್ನು ನೀಡಿರುವ ಕಬೀರ್‌ ಖಾನ್‌, ತನ್ನ ಸಿನಿಮಾಗಳು ತನ್ನದೇ ವ್ಯಕ್ತಿತ್ವದ ಪ್ರತಿಬಿಂಬಗಳಾಗಿವೆ. ಚಿತ್ರದ ಪ್ರತಿಯೊಂದು ವಿಷಯವು ತನ್ನದೇ ಕೋರಿಕೆಯಿಂದ ಮೂಡಿಬಂದವುಗಳಾಗಿವೆ ಎಂದರು.

ADVERTISEMENT

'ಪ್ರತಿಯೊಬ್ಬ ಸಿನಿಮಾ ನಿರ್ದೇಶಕನೂ ತಾನು ನಿರ್ಮಿಸುವ ಚಿತ್ರದಲ್ಲಿ ತನ್ನದೇ ಪ್ರತಿಬಿಂಬವನ್ನು ಹೊಂದಿರುತ್ತಾನೆ. ಕೆಲವು ಸಿನಿಮಾಗಳಲ್ಲಿ ತ್ರಿವರ್ಣ ಧ್ವಜವನ್ನು ತೋರಿಸುತ್ತಾರೆ ಆದರೆ ದೇಶಭಕ್ತಿ ಮತ್ತು ರಾಷ್ಟ್ರವಾದ ನಡುವೆ ವ್ಯತ್ಯಾಸವಿದೆ' ಎಂದು ಕಬೀರ್‌ ಸಿಂಗ್‌ 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ಹೆಸರನ್ನು ಉಲ್ಲೇಖಿಸದೆ ಹೇಳಿದರು.

'ರಾಷ್ಟ್ರವಾದವನ್ನು ತೋರಿಸಲು ಕೆಲವು ಸಂದರ್ಭಗಳಲ್ಲಿ ಒಬ್ಬ ಖಳನಾಯಕ ಅಥವಾ ಯಾವುದಾದರೊಂದನ್ನು ಗುರಿಯಾಗಿಸಿಕೊಳ್ಳಬೇಕಾಗುತ್ತದೆ. ಆದರೆ ದೇಶಭಕ್ತಿಯ ವಿಚಾರ ಬಂದಾಗ ಅಂತಹ ಸಂಗತಿಗಳ ಅಗತ್ಯತೆ ಕಂಡುಬರುವುದಿಲ್ಲ. ದೇಶಭಕ್ತಿ ಎಂಬುದು ರಾಷ್ಟ್ರದೆಡೆಗೆ ನೀವು ತೋರಿಸುವ ಪರಿಶುದ್ಧ ಪ್ರೀತಿ. ಅದಕ್ಕಾಗಿ ನೀವು ಯಾವೊಂದನ್ನು ಗುರಿಯಾಗಿಸಿಕೊಳ್ಳಬೇಕಾಗಿಲ್ಲ. ಇದನ್ನೇ '83'ರಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ' ಎಂದು ತಿಳಿಸಿದರು.

ಕಪಿಲ್‌ ದೇವ್‌ ನೇತೃತ್ವದ ಭಾರತ ಕ್ರಿಕೆಟ್‌ ತಂಡ 1983ರ ವಿಶ್ವಕಪ್‌ ಗೆದ್ದ ಚರಿತ್ರೆಯ '83' ಸಿನಿಮಾದಲ್ಲಿ ದೇಶಭಕ್ತಿಯನ್ನು ತೋರಿಸುವ ಪ್ರಯತ್ನ ನಡೆಸಿದ್ದಾಗಿ ಕಬೀರ್‌ ಖಾನ್‌ ಹೇಳಿದರು.

'ಭಾರತ 83ರಲ್ಲಿ ವಿಶ್ವಕಪ್‌ ಗೆದ್ದಾಗ ನಮ್ಮ ಹೃದಯದಲ್ಲಿ ಹೊಮ್ಮಿದ ದೇಶಪ್ರೇಮವನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನವನ್ನು ಮಾಡಿದ್ದೇನೆ. ಅದಕ್ಕೆ ಒಂದು ಫಾರ್ಮುಲಾ ಎಂಬುದಿಲ್ಲ. ತ್ರಿವರ್ಣ ಧ್ವಜವನ್ನು ತೋರಿಸಿರುವ ಇತರ ಸಿನಿಮಾಗಳು ಇವೆ. ಕೆಲವು ಯಶ ಕಂಡಿವೆ, ಕೆಲವು ಕಂಡಿಲ್ಲ' ಎಂದು ಕಬೀರ್‌ ವಿವರಿಸಿದರು.

ಕೆಲವರು 'ಪಾಕಿಸ್ತಾನಕ್ಕೆ ಹೋಗಿ' ಎಂದೆಲ್ಲ ಹೇಳಿದಾಗ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬ ಪ್ರಶ್ನೆಗೆ, ಬೇಸರವಾಗುತ್ತದೆ. ಯಾವುದೇ ನಿರ್ಬಂಧಗಳಿಲ್ಲದೆ ಬಾಯಿಗೆ ಬಂದಂತೆ ಮಾತನಾಡಲು ಸಾಮಾಜಿಕ ತಾಣಗಳು ಅವಕಾಶ ಮಾಡಿಕೊಟ್ಟಿವೆ. ಇದೇ ಇಂತಹ ದ್ವೇಷಮಯ ಮಾತುಗಳಿಗೆ ಕಾರಣ ಎಂದರು.

'10 ವರ್ಷಗಳ ಹಿಂದೆ ನಿಮ್ಮ ಬಗ್ಗೆ ಏನೆಂದು ಭಾವಿಸಿದ್ದರು ಎಂಬುದನ್ನು ಯಾರೂ ನೇರವಾಗಿ ಹೇಳಲು ಮುಂದಾಗುತ್ತಿರಲಿಲ್ಲ. ಗೌರವ ಮತ್ತು ಪ್ರೀತಿ ಅದನ್ನು ತಡೆಯುತ್ತಿತ್ತು. ಆದರೆ ಈಗ ನಿಮ್ಮದೇ ಮಾತುಗಳ ಮೇಲೆ ಜವಾಬ್ದಾರಿ ಇಲ್ಲವಾಗಿದೆ. ಇದರಿಂದ ಬೇಸರವಾಗುತ್ತದೆ. ಆದರೆ ಇದೇ ವಾಸ್ತವವಾಗಿದೆ. ಸಾಮಾಜಿಕ ಜಾಲತಾಣಗಳಿಂದ ಧನಾತ್ಮಕ ಪರಿಣಾಮಕ್ಕಿಂತ ಋಣಾತ್ಮಕ ಅಥವಾ ದ್ವೇಷಮಯ ಪರಿಣಾಮಗಳೇ ಹೆಚ್ಚು ಎಂಬುದು ನನಗೆ ಮನವರಿಕೆಯಾಗಿದೆ' ಎಂದರು.

ಸಹ ನಿರ್ದೇಶಕರಾದ ಆನಂದ ಎಲ್‌ ರೈ ಮತ್ತು ನಾಗೇಶ್‌ ಕುಕುನೂರ್‌ ಅವರೊಂದಿಗೆ ಕಬೀರ್‌ ಖಾನ್‌ 'ಎಬಿಪಿ ನೆಟ್‌ವರ್ಕ್‌' ನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.