ಈ ವರ್ಷ ನನ್ನ ಪಾಲಿಗೆ ಅತ್ಯಂತ ವಿಶೇಷ ಮತ್ತು ಸ್ಮರಣೀಯವಾಗಿತ್ತು. ನನ್ನನ್ನು ತುಂಬಾ ಖುಷಿಯಾಗಿಟ್ಟಿತ್ತು. ‘ಚಂಬಲ್’, ‘ಅಯೋಗ್ಯ’, ‘ಬ್ರಹ್ಮಚಾರಿ’ ಸಿನಿಮಾಗಳು ಒಳ್ಳೆಯ ಹೆಸರು ತಂದುಕೊಟ್ಟವು. ‘ಅಯೋಗ್ಯ’ ಸಿನಿಮಾ ಪ್ರಶಸ್ತಿಯನ್ನು ತಂದುಕೊಟ್ಟಿತು. ಇಷ್ಟು ದಿನ ಎಲ್ಲ ರೀತಿಯ ಪ್ರಯೋಗಗಳನ್ನು ನಡೆಸಿಕೊಂಡು ಬಂದಿದ್ದು,ಈಗ ‘ಗೋಧ್ರಾ’ ಚಿತ್ರದ ಮೂಲಕ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇನೆ.
ಇದುವರೆಗೆ ನಾನು ಮಾಡಿದ್ದು ನನ್ನ ವೃತ್ತಿಬದುಕಿಗೆ ಅಡಿಪಾಯ ಎಂದುಕೊಂಡಿದ್ದೇನೆ. ಇನ್ನು ಮುಂದೆ ದೊಡ್ಡ ದೊಡ್ಡ ಯೋಜನೆಗಳಿಗೆ ಕೈಹಾಕಲಿದ್ದೇನೆ. ‘ಗೋಧ್ರಾ’, ‘ಮೈ ನೇಮ್ ಈಸ್ ಸಿದ್ದೇಗೌಡ’, ‘ವೈತರಣಿ’ ಚಿತ್ರಗಳು ನನ್ನ ಕೈಯಲ್ಲಿವೆ. ಇದರ ನಡುವೆ ತಮಿಳಿನಲ್ಲೂ ಒಂದು ಚಿತ್ರ ಮಾಡುವವನಿದ್ದೇನೆ. ಈಗ ಒಪ್ಪಿಕೊಂಡಿರುವ ಈ ಚಿತ್ರಗಳನ್ನು ಪೂರ್ಣಗೊಳಿಸಿ 2020ರಲ್ಲಿ ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡಿ, ಪ್ರೇಕ್ಷಕರನ್ನು ತಲುಪುವ ಯೋಜನೆ ನನ್ನದು. ಮುಂದಿನ ವರ್ಷ ವೃತ್ತಿ ಬದುಕಿನಲ್ಲಿ ಇನ್ನಷ್ಟು ಯಶಸ್ಸು ಸಾಧಿಸುವ ಕನಸುಗಳು ಇವೆ. ಶರ್ಮಿಳಾ ಮಾಂಡ್ರೆ ಜತೆಗೆ ನಟಿಸುತ್ತಿರುವ ‘ವೈತರಣಿ’ ಚಿತ್ರದಲ್ಲಿ ಹೊಸತನದಿಂದ ಕಾಣಿಸಿಕೊಳ್ಳಲಿದ್ದೇನೆ. ಹೊಸ ವರ್ಷದಲ್ಲಿ ಸಂಪೂರ್ಣ ರೆಟ್ರೊ ಶೈಲಿಯಲ್ಲಿ ಒಂದು ಸಿನಿಮಾ ಮಾಡುತ್ತಿದ್ದೇನೆ. ಅಲ್ಲದೆ, ನನ್ನ ಕನಸಿನ ಚಿತ್ರ ‘ಮೈ ನೇಮ್ ಈಸ್ ಸಿದ್ದೇಗೌಡ’. ಈ ಚಿತ್ರದಲ್ಲಿ ನಟಿಸುವ ಜತೆಗೆನಿರ್ದೇಶನ ಮಾಡುವ ಮೂಲಕ ನಿರ್ದೇಶಕನಾಗಿಯೂ ಗುರುತಿಸಿಕೊಳ್ಳಲಿದ್ದೇನೆ. ಜತೆಗೆ ಟಿ.ವಿ ಶೋ ಒಂದನ್ನು ಒಪ್ಪಿಕೊಂಡಿದ್ದೇನೆ.
ಉದಯ ಟಿ.ವಿಗಾಗಿ ಕೌಟುಂಬಿಕ ಮನರಂಜನೆ ಪರಿಕಲ್ಪನೆಯ ಕಾರ್ಯಕ್ರಮ ನಡೆಸಿಕೊಡಲಿದ್ದೇನೆ. ಈ ವರ್ಷ ಎಷ್ಟು ಬ್ಯುಸಿಯಾಗಿದ್ದೆನೋ ಅದಕ್ಕಿಂತಲೂ ಹೆಚ್ಚು ಬ್ಯುಸಿ ಹೊಸ ವರ್ಷದಲ್ಲಿರಲು ಬಯಸಿದ್ದೇನೆ. ಕೆಲಸ...ಕೆಲಸ.... ಕೆಲಸವಷ್ಟೇ ಹೊಸ ವರ್ಷದನನ್ನ ಅಜೆಂಡಾ.
ವೈಯಕ್ತಿಕ ಬದುಕುಸುಂದರವಾಗಿದೆ. ನೆಮ್ಮದಿಯಾಗಿದ್ದೇನೆ. ಜೀವನ ಶೈಲಿ ಮತ್ತು ದೈನಂದಿನ ಚಟುವಟಿಕೆಗಳನ್ನು ಇನ್ನಷ್ಟು ಶಿಸ್ತುಬದ್ಧವಾಗಿಟ್ಟುಕೊಳ್ಳಲು ಗಮನಹರಿಸಲಿದ್ದೇನೆ.
ನೀನಾಸಂ ಸತೀಶ್, ಚಿತ್ರ ನಟ
ನಿರೂಪಣೆ: ಕೆಎಂಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.