ನಟ ನೀನಾಸಂ ಸತೀಶ್ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ ‘ವೈತರಣಿ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಲಂಡನ್‌ನಲ್ಲಿ ಆರಂಭವಾಗಿದೆ. ಹೊಸ ಚಿತ್ರದ ಶೂಟಿಂಗ್ ನಿಮಿತ್ತಸತೀಶ್ ಲಂಡನ್‌ಗೆ ತೆರಳಿರುವುದರಿಂದ ಅವರ ಬಹು ನಿರೀಕ್ಷಿತ ಚಿತ್ರ ‘ಬ್ರಹ್ಮಚಾರಿ’ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆಯಂತೆ.
ಮಂಗಳವಾರ ಲಂಡನ್‌ನಲ್ಲಿ ನೀನಾಸಂ ಸತೀಶ್ ಸೇರಿದಂತೆ ಚಿತ್ರತಂಡಕ್ಕೆ ಮತ್ತು ತಮ್ಮ ಸ್ನೇಹಿತರಿಗೆ ಶರ್ಮಿಳಾ ಮಾಂಡ್ರೆ ಚಿತ್ರೀಕರಣದಬಿಡುವಿನ ವೇಳೆ ಔತಣಕೂಟ ಏರ್ಪಡಿಸಿದ್ದರಂತೆ. ಇದರ ವಿಡಿಯೊವನ್ನು ಸತೀಶ್ ವಾಟ್ಸ್ ಆ್ಯಪ್‌ನಲ್ಲಿಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ‘ಬ್ರಹ್ಮಚಾರಿ’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿರುವ ಬಗ್ಗೆಯೂ ಹೇಳಿಕೊಂಡಿದ್ದು, ಚಿತ್ರ ಡಿ.6ರಂದು ಬಿಡುಗಡೆಯಾಗಲಿದೆ ಎಂದಿದ್ದಾರೆ. ‘ಲೂಸಿಯಾ’ ನಂತರ ಅಂತಹದೇ ಮತ್ತೊಂದು ಒಳ್ಳೆಯ ಸಿನಿಮಾ ಆಗಿ‘ವೈತರಣಿ’ ಮೂಡಿಬರಲಿದೆ ಎನ್ನುವ ಮಾತು ಹೇಳಿದ್ದಾರೆ.
ನಟಿ ಮತ್ತು ನಿರ್ಮಾಪಕಿ ಶರ್ಮಿಳಾ ‘ಚಿತ್ರದ ಶೂಟಿಂಗ್ ನಡುವೆ ಬಿಡುವಿನಲ್ಲಿ ಡಿನ್ನರ್ ಆಯೋಜಿಸಿದ್ದೆ.ಲಂಡನ್‌ಲ್ಲಿ ಸದ್ಯ ಮೈನಸ್ 3 ಡಿಗ್ರಿಯಷ್ಟು ಉಷ್ಣಾಂಶವಿದ್ದು, ರಾತ್ರಿತುಂಬಾ ಚಳಿಯ ವಾತಾವರಣವಿದೆ. ಎಲ್ಲರೂ ಚಿತ್ರೀಕರಣದಲ್ಲಿ ಖುಷಿಯಿಂದ ತೊಡಗಿದ್ದಾರೆ’ ಎಂದು
ವಿಡಿಯೊದಲ್ಲಿ ಹೇಳಿದ್ದಾರೆ.
ಲಂಡನ್ನಿನ ವಿವಿಧ ತಾಣಗಳಲ್ಲಿ15 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಎರಡನೇ ಹಂತದ ಚಿತ್ರೀಕರಣ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.
ಇದೊಂದು ಮರ್ಡರ್ ಮಿಸ್ಟರಿ ಕಥೆಯ ಚಿತ್ರ. ‘ವೈತರಣಿ’ ಎಂದರೆ ಭೂಲೋಕ ಮತ್ತು ನರಕದ ಮಧ್ಯೆ ಹರಿಯುವ ನದಿ. ಈ ಕಾಲ್ಪನಿಕ ನದಿಯ ಬಗ್ಗೆ ಗರುಡ ಪುರಾಣದಲ್ಲೂ ಉಲ್ಲೇಖವಿದೆ ಎಂದಿರುವ ಚಿತ್ರತಂಡ, ಶೀರ್ಷಿಕೆಗೂ ಚಿತ್ರದ ಕಥೆಗೂ ಏನು ಸಂಬಂಧ ಎನ್ನುವ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.
‘ಕಹಿ’ ಚಿತ್ರ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಮಾಂಡ್ರೆ ಬ್ಯಾನರ್‌ನಡಿ ನಟಿ ಶರ್ಮಿಳಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ:ಸತೀಶ್ ನೀನಾಸಂ ಈಗ ‘ಬ್ರಹ್ಮಚಾರಿ’
‘ಅಯೋಗ್ಯ’ ಸಿನಿಮಾದ ನಂತರ ಸತೀಶ್‌ಅವರನ್ನು ಸೆನ್ಸಿಬಲ್ ಸಿನಿಮಾಗಳು ಅರಸಿ ಬರುತ್ತಿವೆ. ಸತೀಶ್ ಅಭಿನಯದ ‘ಬ್ರಹ್ಮಚಾರಿ’ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಅವರ ಕೈಯಲ್ಲಿ ‘ಗೋದ್ರಾ’, ‘ಪರಿಮಳ ಲಾಡ್ಜ್’ ಹಾಗೂ ‘ಮೈನೇಮ್ ಇಸ್ ಸಿದ್ಧೇಗೌಡ’ ಚಿತ್ರಗಳು ಇವೆ.‘ಮೈನೇಮ್ ಇಸ್ ಸಿದ್ಧೇಗೌಡ’ ಚಿತ್ರದಲ್ಲಿ ಸತೀಶ್ ನಾಯಕನಾಗಿ ನಟಿಸುವ ಜತೆಗೆ, ನಿರ್ದೇಶನ ಕೂಡ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.