ಬೆಂಗಳೂರು: ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಘಟನೆಯನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಧ್ರುವ ಸರ್ಜಾ ಖಂಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
‘ಸಹೋದರಿ ನೇಹಾ ಹಿರೇಮಠ್ ಅವರ ಹತ್ಯೆ ಅತ್ಯಂತ ಹೀನ ಕೃತ್ಯ. ಕಾಲೇಜು ಕ್ಯಾಂಪಸ್ನಲ್ಲೇ ಹತ್ಯೆಯಾಗಿರುವುದು ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರವೇ ಈ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಹಾಗೂ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ’ ಎಂದು ಧ್ರುವ ಸರ್ಜಾ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮೂಲಕ ಧ್ರುವ ಸರ್ಜಾ ಅವರು ನೇಹಾ ಹಿರೇಮಠ್ ಸಾವಿಗೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತಿದ್ದಾರೆ.
ಘಟನೆ ಬಗ್ಗೆ ಧ್ರುವ ಸರ್ಜಾ ಎಕ್ಸ್ ಮಾಡಿದ್ದಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಲ್ಲರೂ ಧ್ವನಿ ಎತ್ತಬೇಕು ಹಾಗೂ ಕೆಲ ಸೆಲೆಬ್ರಿಟಿಗಳು ಮೌನವಾಗಿರುವುದು ಸರಿ ಇಲ್ಲ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಸಾಮಾಜಿಕ ಕಾಳಜಿಗೆ ಧನ್ಯವಾದಗಳು, ಅಪರಾಧಿಯನ್ನು ಇನ್ನೂ ಜೀವಂತವಾಗಿ ಇಟ್ಟಿರುವುದೇ ಒಂದು ವಿಪರ್ಯಾಸ, ಕೊಲೆ ಮಾಡಿದ್ದಕ್ಕೆ ವಿಡಿಯೋ ಇದೆ, ಸಾಕ್ಷಿ ಇನ್ನೇನು ಬೇಕು ಎಂದು ಹಲವರು ಧ್ರುವ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ನೇಹಾ ಹಿರೇಮಠ್ ಹತ್ಯೆ ಹಿನ್ನೆಲೆ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಕೊಲೆಯಾದ ಯುವತಿ. ಫಯಾಜ್ ಎಂಬಾತ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾಗೆ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.