ಮುಂಬೈ: ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟಿ ನಯನತಾರಾ ಅವರ ಜೀವನ ಆಧಾರಿತ ಸಾಕ್ಷ್ಯ ಚಿತ್ರವು ನಟಿಯ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ ಎಂದು ಒಟಿಟಿ ವೇದಿಕೆ ನೆಟ್ ಫ್ಲಿಕ್ಸ್ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ‘ನೆಟ್ಫ್ಲಿಕ್ಸ್’, ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಎಂಬ ಸಾಕ್ಷ್ಯ ಚಿತ್ರವನ್ನು ನವೆಂಬರ್ 18ರಂದು ಬಿಡುಗಡೆಗೊಳ್ಳಲಿದೆ. ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವ ನಯನತಾರಾ ಸಾಗಿ ಬಂದ ಹಾದಿ, ಆಕೆ ಎದುರಿಸಿದ ಸವಾಲುಗಳ ಕುರಿತಾದ ಸಾಕ್ಷ್ಯ ಚಿತ್ರ ಇದಾಗಿದೆ. ಈ ಚಿತ್ರವು ಯುವ ಮನಸ್ಸುಗಳಿಗೆ ಸ್ಫೂರ್ತಿದಾಯಕವಾಗಿರುತ್ತದೆ ಎಂದು ತಿಳಿಸಿದೆ.
‘ನಯನತಾರಾ ಬದುಕಿನ ರೋಚಕ ಸನ್ನಿವೇಶಗಳನ್ನು ತೆರೆ ಮೇಲೆ ನೋಡಬಹುದಾಗಿದೆ. ಮಗಳಾಗಿ, ಹೆಂಡತಿಯಾಗಿ, ಸಂಗಾತಿಯಾಗಿ, ಸ್ನೇಹಿತೆಯಾಗಿ, ಉದ್ಯೋಗಿಯಾಗಿ ಹೀಗೆ ಎಲ್ಲಾ ರೀತಿ ಜೀವನ ಸಾಗಿಸುವ ಮಹಿಳೆಯ ಪ್ರತಿರೂಪದ ಭಾಗವಾಗಿ ಸಾಕ್ಷ್ಯ ಚಿತ್ರ ನಿರ್ಮಿಸಲಾಗಿದೆ‘ ಎಂದು ‘ನೆಟ್ಫ್ಲಿಕ್ಸ್‘ ಹೇಳಿದೆ.
‘ಚಂದ್ರಮುಖಿ‘, ‘ಗಜಿನಿ‘, ‘ಬಿಗಿಲ್‘, ‘ಬಾಡಿಗಾರ್ಡ್‘, ‘ನೇತ್ರಿಕನ್‘, ‘ಪುತಿಯ ನಿಯಮಮ್‘ ಮತ್ತು ‘ಜವಾನ್‘ ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
2022ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಪಕ ವಿಘ್ನೇಶ್ ಶಿವನ್ ಅವರನ್ನು ನಯನತಾರಾ ವಿವಾಹವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.