ADVERTISEMENT

ಬರುತ್ತಿದೆ ‘ಬಬ್ರು’ ವಾಹನ!

ಜಗದೀಶ ಅಂಗಡಿ
Published 11 ಸೆಪ್ಟೆಂಬರ್ 2019, 20:00 IST
Last Updated 11 ಸೆಪ್ಟೆಂಬರ್ 2019, 20:00 IST
ಸುಮನ್‌ ನಗರಕರ್‌, ಗುರುದೇವ್ ನಾಗರಾಜ
ಸುಮನ್‌ ನಗರಕರ್‌, ಗುರುದೇವ್ ನಾಗರಾಜ   

‘ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣಗೊಂಡ ಕನ್ನಡದ ಪ್ರಪ್ರಥಮ ಚಿತ್ರ’ ಎಂದು ಮಾತಿಗಿಳಿದರು ಸುಮನ್ ನಗರಕರ್.

‘ಇಲ್ಲಿಯ ತನಕ ಕನ್ನಡದ ಕಿರು ಚಿತ್ರಗಳು ಹಾಗೂ ಡಾಕ್ಯುಮೆಂಟರಿಗಳು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣಗೊಂಡ ಉದಾಹರಣೆಗಳಿವೆ. ಕನ್ನಡ ಕೆಲವೊಂದು ಚಿತ್ರಗಳ ಕೆಲ ಭಾಗಗಳು ಅಲ್ಲಿ ಚಿತ್ರೀಕರಣಗೊಂಡಿದ್ದಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ನಿಸ್ಸಂಶಯವಾಗಿ ಬಬ್ರು’ ಎಂದು ಅವರು ಸ್ಪಷ್ಟಪಡಿಸಿದರು.

‘ಪ್ರಜಾವಾಣಿ’ ಜೊತೆ ಸುಮನ್ ಹಾಗೂ ಚಿತ್ರದ ಕಾರ್ಯಕಾರಿ ನಿರ್ಮಾಪಕ ಗುರುದೇವ್ ನಾಗರಾಜ ಮಾತನಾಡಿದರು.

ADVERTISEMENT

ಕರ್ನಾಟಕದಲ್ಲಿ ಹುಟ್ಟಿ, ಉದ್ಯೋಗ ಅರಸಿ ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ನೆಲೆಸಿದ ಸಮಾನ ಮನಸ್ಕ ಹಾಗೂ ಆಸಕ್ತರ ಗುಂಪು ಈ ಚಿತ್ರಕ್ಕಾಗಿ ಒಂದಾಗಿದೆ. ಫೆಬ್ರುವರಿ 2018ರಲ್ಲಿ ‘ಬಬ್ರು’ ಚಿತ್ರದ ಚಿತ್ರೀಕರಣ ಪ್ರಾರಂಭವಾಯಿತು. ಚಿತ್ರೀಕರಣ ಮುಗಿದಿದೆ ಕೂಡ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.

‘ಯುಗ ಕ್ರಿಯೇಷನ್ಸ್’ ಹಾಗೂ ‘ಸುಮನ್ ನಗರಕರ್ ಪ್ರೊಡಕ್ಷನ್ಸ್’ ಅಡಿಯಲ್ಲಿ ನಿರ್ಮಾಣಗೊಂಡ ಪ್ರಥಮ ಚಿತ್ರವಿದು. ಸಂಗೀತ ಹಾಗೂ ಹಿನ್ನೆಲೆ ಸಂಗೀತದ ಸಂಯೋಜನೆ ಮಾತ್ರ ಬೆಂಗಳೂರಿನಲ್ಲಿ ನಡೆದಿದೆ. ಸಂಗೀತ ಸಂಯೋಜನೆ ಪೂರ್ಣಚಂದ್ರ ತೇಜಸ್ವಿ ಅವರದ್ದು. ಕನ್ನಡ, ಕನ್ನಡೇತರ, ಅಮೆರಿಕ ಹಾಗೂ ಸ್ಪ್ಯಾನಿಷ್ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ನಾಯಕಿಯಾಗಿ ಸುಮನ್ ನಗರಕರ್ ಹಾಗೂ ನಾಯಕ ನಟನಾಗಿ ಮಹಿ ಹಿರೇಮಠ್ ಅಭಿನಯಿಸಿದ್ದಾರೆ. ಮಹಿ ಅಮೆರಿಕದಲ್ಲಿ ನಾಟ್ಯ ತರಬೇತಿ ತರಗತಿಗಳನ್ನು ನಡೆಸುತ್ತಿದ್ದಾರೆ. ಕತೆ-ಚಿತ್ರಕತೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತವರು ಸುಜಯ್ ರಾಮಯ್ಯ. ಚಿತ್ರದ ಅವಧಿ ಒಂದು ಗಂಟೆ ಐವತ್ತೈದು ನಿಮಿಷ.

‘ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಮೊದಲ ವಾರ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಗುರುದೇವ್ ನಾಗರಾಜ ಹೇಳಿದರು.

‘ಇಬ್ಬರು ಅಪರಿಚಿತರ ಪ್ರಯಾಣದ ಕತೆಯನ್ನು ‘ಬಬ್ರು’ವಿನಲ್ಲಿ ಹೇಳಲಾಗಿದೆ. ತಾವಿಬ್ಬರೂ ಕರ್ನಾಟಕದವರೆಂದು ಕತೆಯ ಅಂತ್ಯಕ್ಕೆ ಅವರಿಗೆ ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಥ್ರಿಲ್ಲರ್, ಸಸ್ಪೆನ್ಸ್ ಹಾಗೂ ಅನಿರೀಕ್ಷಿತ ತಿರುವುಗಳಿವೆ. ನಮ್ಮ ಚಿತ್ರದಲ್ಲಿ ಹಾಡುಗಳಿವೆ, ಮಸಾಲೆ ಕಡಿಮಿಯಿದೆ’ ಎನ್ನುವ ಮಾಹಿತಿಯನ್ನು ಸುಮನ್ ನಗರಕರ್ ಹಂಚಿಕೊಂಡರು.

‘ಇಲ್ಲಿಯ ತನಕ ಕನ್ನಡದ ಪ್ರೇಕ್ಷಕರು ನೋಡದೇ ಇರುವ ಅಮೆರಿಕವನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ಗ್ರ‍್ಯಾಂಡ್ ಕ್ಯಾನಿಯೋನ್, ಡೆತ್ ವ್ಯಾಲಿ, ಝಿಯೋನ್, ಅವೆನ್ಯೂ ಆಫ್ ಜಯಂಟ್ಸ್ ಸುತ್ತಮುತ್ತಲಿನ ಭೂಪ್ರದೇಶಗಳ ರುದ್ರ ರಮಣೀಯತೆಯನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಇದು ಪ್ರೇಕ್ಷಕರಿಗೆ ಬೇರೊಂದು ಅನುಭವ ನೀಡುವುದು ಖಂಡಿತ’ ಎನ್ನುತ್ತಾರೆ ಗುರುದೇವ್.

ಬೆಂಗಳೂರಿನಲ್ಲಿ ಹುಟ್ಟಿ, ಇಲ್ಲಿಯೇ ಶಿಕ್ಷಣ ಮುಗಿಸಿದ ಗುರುದೇವ್ 1999ರಲ್ಲಿ ಅಮೆರಿಕಕ್ಕೆ ಉದ್ಯೋಗ ನಿಮಿತ್ತ ಹಾರಿದರು. ಐಟಿ ಉದ್ಯೋಗದ ಏಕತಾನತೆಯಿಂದ ಬೇಸತ್ತ ಅವರು ಹೊಸತನಕ್ಕಾಗಿ ಹಂಬಲಿಸಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದರು. ಸದ್ಯದ ವಾಸ ಕ್ಯಾಲಿಫೋರ್ನಿಯ.

ಮಾತು ಬಬ್ರು ಪದದ ಬಗೆಗೆ ಹೊರಳಿತು.‘ಅಮೆರಿಕದ ಪಶ್ಚಿಮ ಕರಾವಳಿಗುಂಟ ಕೆನಡಾದಿಂದ ಮೆಕ್ಸಿಕೋ ತನಕ ಪ್ರಯಾಣದಲ್ಲಿ ನಡೆಯವ ಅನುಭವಗಳೇ ಕತೆಯಾಗಿ ಮಾರ್ಪಟ್ಟಿದೆ. ವಾಹನದ ಸಂಖ್ಯಾ ಫಲಕದಲ್ಲಿನ ಅಂಕಿಗಳ ಜೊತೆಗೆ ಹೆಸರನ್ನು ಬರೆಯಿಸಲು ಅಮೆರಿಕದ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಅದಕ್ಕೆ ನಿರ್ದಿಷ್ಟವಾದ ಶುಲ್ಕ ಕಟ್ಟಬೇಕು. ‘ಬಬ್ರು’ ಎಂದರೆ ವಾಹನ. ಈ ಚಿತ್ರದಲ್ಲಿ ಕಾರ್ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಹೀಗಾಗಿ ಈ ಕಾರಿಗೆ ‘ಬಬ್ರು’ ಎಂದು ಹೆಸರಿಟ್ಟೆವು. ಅದೇ ಚಿತ್ರದ ಟೈಟಲ್‌ ಆಯ್ತು’ ಎಂದರು ಗುರುದೇವ್.

ಈ ಚಿತ್ರದ ಬೇರೆ ವಿಶೇಷತೆ ಏನಾದರೂ ಇದೆಯಾ? ಎಂದಾಗ, ‘ಅಕಪೆಲ್ಲಾ ಸಂಗೀತ! ವಾದ್ಯಗಳನ್ನು ಉಪಯೋಗಿಸದೇ ಕೇವಲ ಧ್ವನಿಯಿಂದ ಸಂಯೋಜಿಸುವ ಮಾದರಿಯೇ ಅಕಪೆಲ್ಲಾ. ಈ ಮಾದರಿಯನ್ನು ಉಪಯೋಗಿಸಿದ ಕನ್ನಡದ ಪ್ರಪಥಮ ಚಿತ್ರ ‘ಬಬ್ರು’. ಪೂರ್ಣಚಂದ್ರ ತೇಜಸ್ವಿ ಸಂಯೋಜಿಸುವ ಸಂಗೀತ ‘ಬಬ್ರು’ ಚಿತ್ರಕ್ಕೆ ಅತ್ಯಂತ ಸೂಕ್ತವಾಗುತ್ತದೆ ಎಂಬ ಕಾರಣಕ್ಕೆ ಅವರಿಂದ ಅಕಪೆಲ್ಲಾ ಸಂಗೀತ ಸಂಯೋಜನೆ ಮಾಡಿಸಿದ್ದೇವೆ’ ಎಂದೂ ಗುರುದೇವ್‌ ಹೇಳಿದರು.

ಬೇರೆ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಆಯಾ ದೇಶಗಳಲ್ಲಿ ಸಂಪೂರ್ಣವಾಗಿ ಕನ್ನಡ ಚಿತ್ರವೊಂದನ್ನು ಚಿತ್ರೀಕರಿಸಲು ಸಾಧ್ಯ ಎಂಬುದನ್ನು ಸಾಬೀತು ಮಾಡುತ್ತದೆ ‘ಬಬ್ರು’. ಇದು ಖಂಡಿತವಾಗಿಯೂ ಟ್ರೆಂಡ್ ಸೆಟ್ಟರ್ ಎನ್ನುವುದು ಗುರುದೇವ್ ಅವರ ಅಚಲ ನಂಬಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.