ಟೈಗರ್ ಶ್ರಾಫ್ ಜತೆಗೆ ‘ಮುನ್ನಾ ಮೈಕೇಲ್’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಿಧಿ ಅಗರ್‌ವಾಲ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಿದ್ದರಾಗಿದ್ದಾರೆ. ‘ಜಯಂ’ ಖ್ಯಾತಿಯ ನಟ ರವಿ ಅವರ ಮುಂಬರುವ ಚಿತ್ರಕ್ಕೆ ನಿಧಿ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ಚಿತ್ರವನ್ನು ಲಕ್ಷ್ಮಣ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾ ಜಯಂರವಿ ಅವರ 25ನೇ ಸಿನಿಮಾ ಆಗಿರುವುದು ವಿಶೇಷ.
‘ಜಯಂರವಿ ಈ ಸಿನಿಮಾದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಹಿಂದಿನ 24 ಚಿತ್ರಗಳಿಗಿಂತ ಭಿನ್ನವಾದ ಪಾತ್ರ ಇದಾಗಿದ್ದು ಇದರಲ್ಲಿ ಸಾಮಾಜಿಕ ಸಂದೇಶವೂ ಅಡಗಿದೆ’ ಎನ್ನುತ್ತಾರೆ ನಿರ್ದೇಶಕ ಲಕ್ಷ್ಮಣ್.
ಈ ಹಿಂದೆ ಅಖಿಲ್ ಅಕ್ಕಿನೇನಿ ಜೊತೆ ‘ಮಿಸ್ಟರ್ ಮಜ್ನು’ ಚಿತ್ರದಲ್ಲಿ ಅಭಿನಯಿಸಿದ್ದ ನಿಧಿ, ಈಗಾಗಲೇ ತೆಲುಗು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಇಸ್ಮಾರ್ಟ್ ಶಂಕರ್’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ನಿಧಿಯ ಹೊಸ ಸಿನಿಮಾದ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದರೂ, ಜೂನ್ 15ರಿಂದ ಚಿತ್ರೀಕರಣ ಆರಂಭವಾಗಲಿದೆ. ಈಗಾಗಲೇ ಹಳ್ಳಿಯ ಹಿನ್ನೆಲೆಯ ದೃಶ್ಯಗಳು ಸಜ್ಜಾಗಿದ್ದು, ರವಿ ಅವರ ಪಾತ್ರ ಪ್ರೇಕ್ಷಕರಿಗೆ ಆಶ್ಚರ್ಯವನ್ನುಂಟು ಮಾಡುವಂತಿದೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಡಿ. ಇಮಾಂ ಅವರ ಸಂಗೀತ ನಿರ್ದೇಶನವಿದೆ.
ಜಯಂರವಿ ಈಚೆಗಷ್ಟೇ ಕೊಮಾಲ್ಲಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದರಲ್ಲಿ ರವಿ ಜತೆಗೆ ಕಾಜಲ್ ಅಗರ್‌ವಾಲ್ ಮತ್ತು ಸಂಯುಕ್ತಾ ಹೆಗ್ಡೆ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.