ADVERTISEMENT

ನೈಟ್‌ ಔಟ್‌: ಅಡಿಗರ ಅಡುಗೆ ರುಚಿ ಏನು?

ವಿಜಯ್ ಜೋಷಿ
Published 12 ಏಪ್ರಿಲ್ 2019, 10:57 IST
Last Updated 12 ಏಪ್ರಿಲ್ 2019, 10:57 IST
ಭರತ್, ಶ್ರುತಿ ಗೊರಾಡಿಯಾ
ಭರತ್, ಶ್ರುತಿ ಗೊರಾಡಿಯಾ   

ನೈಟ್‌ ಔಟ್‌ ಚಿತ್ರವನ್ನು ಒಂದು ಚಿಕ್ಕ ಚಾಕೊಲೇಟ್‌ಗೆ ಹೋಲಿಸಿಕೊಳ್ಳೋಣ. ಅದರ ನಡುವಿನಲ್ಲಿ ಇರುವುದು ಭೂತವನ್ನು ಕಂಡಂತೆ ಓಡುತ್ತಿರುವ ವ್ಯಕ್ತಿಯಲ್ಲಿನ ಭಯ. ಆ ಭಯದ ಸುತ್ತ ಇರುವುದು ಭಗ್ನ ಪ್ರೇಮದ ರುಚಿ. ಭಗ್ನ ಪ್ರೇಮವೆಂಬ ರುಚಿಯ ಸುತ್ತ ಹಾಸ್ಯ ಮತ್ತು ಪಡ್ಡೆ ಮಾತುಗಳೆಂಬ ಉಪ್ಪು–ಹುಳಿ–ಖಾರದ ಹೊದಿಕೆ.

ನಿರ್ದೇಶಕ ರಾಕೇಶ್ ಅಡಿಗರ ಅಡುಗೆ ಮನೆಯಲ್ಲಿ ಸಿದ್ಧವಾದ ‘ನೈಟ್‌ ಔಟ್‌’ ಚಾಕೊಲೇಟ್‌ಗೆ ಹೊದಿಸಿರುವ ಹೊದಿಕೆ ತೆಗೆದು, ಅದನ್ನು ಆಸ್ವಾದಿಸೋಣವೆಂದು ಬಾಯಿಗೆ ಹಾಕಿಕೊಂಡಾಗ ದಕ್ಕುವ ರುಚಿಗಳು ಇವು.

ಚಿತ್ರ ಆರಂಭವಾಗುವುದು ವ್ಯಕ್ತಿಯೊಬ್ಬ ಭಯಬಿದ್ದು ಓಡುತ್ತಿರುವ, ಕಂಡಕಂಡವರಿಗೆ ಢಿಕ್ಕಿ ಹೊಡೆಯುತ್ತಿರುವ ದೃಶ್ಯದೊಂದಿಗೆ. ಆತ ಯಾಕೆ ಓಡುತ್ತಿದ್ದಾನೆ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡುತ್ತಿರುವ ಹೊತ್ತಿನಲ್ಲಿ ನಿರ್ದೇಶಕರು ಸಿನಿಮಾವನ್ನು ‘ಆರು ಗಂಟೆಗಳಷ್ಟು ಹಿಂದಕ್ಕೆ’ ಕೊಂಡೊಯ್ಯುತ್ತಾರೆ. ಆ ಆರು ಗಂಟೆಗಳ ಹಿಂದಿನ ಬಿಂದುವಿನಲ್ಲಿ ಚಿತ್ರದ ಕಥೆ ಆರಂಭವಾಗುತ್ತದೆ.

ADVERTISEMENT

ಅಲ್ಲಿರುವುದು ನಾಲ್ಕೈದು ಜನ ಸ್ನೇಹಿತರ ಒಂದು ಗುಂಪು; ಅವರ ನಡುವಿನ ಸ್ನೇಹದ, ಕಿಚಾಯಿಸುವ, ರೇಗಿಸುವ ಮಾತುಗಳು ಹಾಗೂ ಗುಂಪಿನಲ್ಲಿ ಒಬ್ಬನಾದ ಗೋಪಿಯ (ಭರತ್) ಪಾತ್ರ. ಗೋಪಿ ಆಟೊ ಓಡಿಸಿಕೊಂಡು, ಸ್ನೇಹಿತರ ನಡುವೆ ಇರುವ ವ್ಯಕ್ತಿ. ಅಂದದ–ಚೆಂದದ ಯುವತಿ ಕಾಣಿಸಿದರೆ ‘ಪ್ರೀತಿ ಮಾಡಿ ನೋಡೋಣ’ ಎಂಬ ಬಯಕೆ ಇರುವ ಮಾಮೂಲಿ ಮನುಷ್ಯ!

ಶ್ರುತಿ (ಶ್ರುತಿ ಗೊರಾಡಿಯಾ) ಗಂಭೀರ ಸ್ವಭಾವದ, ಜೀವನವನ್ನು ಹಗುರವಾಗಿ ನೋಡಲು ಬಯಸದ ಹುಡುಗಿ. ಭರತ್ ಮತ್ತು ಶ್ರುತಿ ನಡುವೆ ಪ್ರೀತಿ ಮೂಡುತ್ತದೆ. ಆ ಪ್ರೀತಿಯಲ್ಲಿ ಭರತ್ ಕಂಡುಕೊಳ್ಳುವುದೇನು, ಕಳೆದುಕೊಳ್ಳುವುದೇನು ಎಂಬುದು ಚಿತ್ರದ ಕಥಾವಸ್ತು. ಬಹುತೇಕ ಸಿನಿಮಾಗಳಲ್ಲಿ ಇರುವ ಪ್ರೀತಿಯ ಕಥೆಯನ್ನು ಹೇಳಲು ನಿರ್ದೇಶಕರು ಆಯ್ಕೆ ಮಾಡಿಕೊಂಡ ಮಾರ್ಗ ವಿಭಿನ್ನ.

ಒಂದು ಆಟೊ ರಿಕ್ಷಾ ಪ್ರಯಾಣದಲ್ಲಿ ಭರತ್, ತನ್ನೆಲ್ಲ ಕಥೆಯನ್ನು ತನ್ನ ಆಪ್ತ ಸ್ನೇಹಿತನಿಗೆ (ಅಕ್ಷಯ್ ಪವಾರ್) ವಿವರಿಸುತ್ತ ಹೋಗುತ್ತಾನೆ. ಕಥೆ ಹೇಳಲು ಫ್ಲ್ಯಾಷ್‌ಬ್ಯಾಕ್‌ಗಳನ್ನು ಹೇರಳವಾಗಿ ಬಳಸಿಕೊಳ್ಳಲಾಗಿದೆ. ಚಿತ್ರದ ಮೊದಲಾರ್ಧ ಪೂರ್ತಿ ಇರುವುದು ಇಂತಹ ಫ್ಲ್ಯಾಷ್‌ಬ್ಯಾಕ್‌ಗಳೇ. ಇವುಗಳ ಕಾರಣದಿಂದಾಗಿಯೇ ಮೊದಲಾರ್ಧವು ಕೆಲವರಿಗೆ ಆಕಳಿಕೆ ತರಿಸಬಹುದು. ‘ಏನಪ್ಪಾ ಕಥೆ ಇದರದ್ದು’ ಅಂತಲೂ ಅನ್ನಿಸಬಹುದು. ದ್ವಿತೀಯಾರ್ಧದಲ್ಲಿ ತುಸು ವೇಗ ಪಡೆದುಕೊಳ್ಳುವ ಸಿನಿಮಾ, ಒಂಚೂರು ಸಸ್ಪೆನ್ಸ್‌ ಅಂಶವನ್ನು ಆವಾಹಿಸಿಕೊಳ್ಳುತ್ತದೆ. ಆದರೆ ಅದು ವೀಕ್ಷಕರನ್ನು ಕುರ್ಚಿಯ ತುದಿಗೆ ತಂದು ಕೂರಿಸುವಂಥದ್ದೇನೂ ಅಲ್ಲ.

ಚಿತ್ರದ ಕಥೆ ತೆರೆದಿಡುವ ಪರಿಗೆ ಇನ್ನಷ್ಟು ವೇಗ ನೀಡಬಹುದಿತ್ತು. ಕಥೆಯನ್ನು ತನಗೆ ಹೇಗೆ ಬೇಕೊ ಹಾಗೆ ಹೇಳುವುದು ನಿರ್ದೇಶಕರ ಸ್ವಾತಂತ್ರ್ಯವಾದರೂ, ‘ಚಾಕೊಲೇಟ್‌’ನ ರುಚಿ ನಾಲಗೆಯ ಮೇಲೆ ಇನ್ನಷ್ಟು ಹೊತ್ತು ಇರುವಂತೆಯೂ ನೋಡಿಕೊಳ್ಳಬಹುದಿತ್ತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.