ADVERTISEMENT

ಸೀತಾರಾಮ ಕಲ್ಯಾಣ: ಮೊಮ್ಮಗ ನಿಖಿಲ್‌ ನಟನೆಗೆ ತಾತನ ಕಣ್ಣೀರು

ಕೆ.ಎಚ್.ಓಬಳೇಶ್
Published 24 ಜನವರಿ 2019, 19:46 IST
Last Updated 24 ಜನವರಿ 2019, 19:46 IST
ನಟ ನಿಖಿಲ್ ಕುಮಾರ್
ನಟ ನಿಖಿಲ್ ಕುಮಾರ್   

‘ಸಿನಿಮಾ ಮತ್ತು ರಾಜಕಾರಣ ಒಂದೇ ಅಲ್ಲ. ರಾಜಕೀಯದ ನೆಲೆಗಟ್ಟಿನಲ್ಲಿ ನನ್ನ ಸಿನಿಮಾ ನೋಡುವುದು ಸರಿಯಲ್ಲ’

ಹೀಗೆಂದು ಕರಾರುವಕ್ಕಾಗಿ ಹೇಳಿದರು ನಟ ನಿಖಿಲ್‌ ಕುಮಾರ್. ತಾತ ಮತ್ತು ಅಪ್ಪನ ಜನಪ್ರಿಯತೆ ನಿಮಗೆ ಯಾವತ್ತೂ ಹೊರೆ ಅನಿಸುವುದಿಲ್ಲವೇ? ಎನ್ನುವ ಪ್ರಶ್ನೆಗೆ ಅವರು ಉತ್ತರವಾಗಿದ್ದು ಹೀಗೆ.

‘ನನ್ನ ತಾತ (ಎಚ್.ಡಿ. ದೇವೇಗೌಡ) ನಟರಲ್ಲ. ಅಪ್ಪ (ಎಚ್‌.ಡಿ. ಕುಮಾರಸ್ವಾಮಿ) ಕೂಡ ನಟನೆ ಕಲಿತವರಲ್ಲ. ಕುಟುಂಬದಲ್ಲಿ ನಟನೆಯ ಹಾದಿ ತುಳಿದಿರುವುದು ನಾನೊಬ್ಬನೇ. ಸಾಮಾಜಿಕ ಜಾಲತಾಣದಲ್ಲಿ ಹಬ್ಬುವ ಸುದ್ದಿಯ ಬಗೆಗೆ ಇರುಸುಮುರುಸು ಆಗುತ್ತದೆ. ನನ್ನ ಸಿನಿಮಾದೊಂದಿಗೆ ರಾಜಕಾರಣ ಬೆರೆಸುವ ಪರಿಪಾಟ ಸದ್ದಿಲ್ಲದೆ ನಡೆದಿದೆ. ತಂದೆ ಮುಖ್ಯಮಂತ್ರಿಯಾಗಿದ್ದಾರೆ ಎಂದ ಮಾತ್ರಕ್ಕೆ ನನ್ನ ಸಿನಿಮಾದೊಟ್ಟಿಗೆ ರಾಜಕೀಯದ ನಂಟು ಬೆರೆಸುವುದು ಎಷ್ಟು ಸರಿ? ತಾತ, ಅಪ್ಪನ ಜನಪ್ರಿಯತೆ ನನ್ನ ನಟನೆಗೆ ಒತ್ತಡ ತಂದಿಲ್ಲ. ಸಿನಿಮಾ ನನ್ನ ಉಸಿರು. ನಟನೆ ನನಗೆ ಖುಷಿ ನೀಡಿದೆ’ ಎಂದು ಇನ್ನಷ್ಟು ವಿಸ್ತರಿಸಿ ಹೇಳಿದರು.

ADVERTISEMENT

ನಿಖಿಲ್‌ ಕುಮಾರ್‌ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರ ಈ ಶುಕ್ರವಾರ (ಜನವರಿ 25) ತೆರೆಕಾಣುತ್ತಿದೆ. ಇದು ಅವರ ಎರಡನೇ ಚಿತ್ರ. ಮೊದಲ ಚಿತ್ರ ‘ಜಾಗ್ವಾರ್‌’ ಪಕ್ಕಾ ಆ್ಯಕ್ಷನ್‌ನಿಂದ ಕೂಡಿತ್ತು. ಇದರಲ್ಲಿ ಅವರ ಚಿತ್ತ ಕೌಟುಂಬಿಕ ಪ್ರೇಕ್ಷಕವರ್ಗದತ್ತ ನೆಟ್ಟಿದೆ. ಇದಕ್ಕೆ ಕಥೆ ಹೊಸೆದು ಆ್ಯಕ್ಷನ್‌ ಕಟ್‌ ಹೇಳಿರುವುದು ಎ. ಹರ್ಷ.

ಕುಮಾರಸ್ವಾಮಿ ಅವರು ಕೌಟುಂಬಿಕ ಕಥಾವಸ್ತು ಹೊಂದಿದ ‘ಚಂದ್ರಚಕೋರಿ’, ‘ಸೂರ್ಯವಂಶ’ ಚಿತ್ರ ನಿರ್ಮಿಸಿದ್ದರು. ‘ಸೀತಾರಾಮ ಕಲ್ಯಾಣ’ಕ್ಕೂ ಇದೇ ಪ್ರೇರಣೆಯಂತೆ. ‘ಕೌಟುಂಬಿಕ ಮತ್ತು ಸಾಮಾಜಿಕ ಕಳಕಳಿ ಬಿಂಬಿಸುವ ಚಿತ್ರಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಹಳ್ಳಿ ಸೊಗಡಿನ ಚಿತ್ರ ಇದು. ಎಲ್ಲಿಯೂ ನಮ್ಮ ಸಂಸ್ಕೃತಿಯನ್ನು ಬಿಟ್ಟುಕೊಟ್ಟಿಲ್ಲ. ಹಾಗೆಂದು ಗ್ರಾಮೀಣ ದೃಶ್ಯಗಳನ್ನಷ್ಟೇ ತೋರಿಸಿಲ್ಲ. ನಗರ ಪ್ರದೇಶದ ಸನ್ನಿವೇಶಗಳೂ ಇವೆ’ ಎಂದು ಸಿನಿಮಾ ಕುರಿತು ವಿವರಿಸುತ್ತಾರೆ.

‘ಇದು ರಿಮೇಕ್‌ ಚಿತ್ರವಲ್ಲ. ಆದರೆ, ಹಲವು ಸಿನಿಮಾಗಳ ಪ್ರೇರಣೆ ಇರುವುದು ದಿಟ. ಬೇರೆಯವರು ಇದನ್ನು ಹೇಳಿಕೊಳ್ಳುವುದಿಲ್ಲ. ನಾವು ಹೇಳಿಕೊಳ್ಳುತ್ತೇವೆ ಅಷ್ಟೇ’ ಎಂದು ನಕ್ಕರು.

‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ನಿಖಿಲ್‌ ಕುಮಾರ್‌ ಮತ್ತು ರಚಿತಾ ರಾಮ್

‘ಜಾಗ್ವಾರ್‌ ಮತ್ತು ಈ ಚಿತ್ರದ ನಡುವೆ ತಾಂತ್ರಿಕವಾಗಿ ಸಾಕಷ್ಟು ಸಾಮ್ಯತೆ ಇದೆ. ನನ್ನ ಮೊದಲ ಚಿತ್ರ ನೋಡಿದ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿರುವುದು ಸಹಜ. ಅದನ್ನು ಸೀತಾರಾಮ ಕಲ್ಯಾಣದಲ್ಲಿಯೂ ಕಾಪಾಡಿಕೊಂಡಿದ್ದೇನೆ. ಸಿನಿಮಾ ಪ್ರೊಡಕ್ಷನ್‌ನಿಂದ ಹಿಡಿದು ಎಲ್ಲ ಜವಾಬ್ದಾರಿಯ ನೊಗ ಹೊತ್ತಿದ್ದು ನಾನೇ. ಜಾಗ್ವಾರ್‌ನ ತಾಂತ್ರಿಕತೆ ಇದರಲ್ಲಿಯೂ ಮೇಳೈಸಿದೆ. ಜನರಿಗೆ ಚಿತ್ರ ಇಷ್ಟವಾಗಲಿದೆ’ ಎನ್ನುವುದು ಅವರ ನಂಬಿಕೆ.

ಅಭಿಮಾನಿಗಳಿಗಾಗಿ ಪಾತ್ರ ಮಾಡಬೇಕೆಂಬುದರಲ್ಲಿ ನಿಖಿಲ್‌ ಅವರಿಗೆ ಅಷ್ಟೊಂದು ನಂಬಿಕೆ ಇದ್ದಂತಿಲ್ಲ. ‘ನಾನು ಚಂದನವನ ಪ್ರವೇಶಿಸಲು ಅಗತ್ಯವಾಗಿ ಬೇಕಿದ್ದ ಸಬ್ಜೆಕ್ಟ್‌ ಜಾಗ್ವಾರ್‌ನಲ್ಲಿತ್ತು. ಸೀತಾರಾಮ ಕಲ್ಯಾಣ ಅದಕ್ಕಿಂತ ಮೆಚ್ಯೂರ್‌ ಆದ ಸಬ್ಜೆಕ್ಟ್‌. ಕಥೆಯಲ್ಲಿ ಗಟ್ಟಿತನ ಇದೆ. ಅಭಿಮಾನಿಗಳಿಗೆಂದು ನಾನು ಸಿನಿಮಾ ಮಾಡುವುದಿಲ್ಲ. ಅವರಿಗೆಂದು ಡೈಲಾಗ್‌ ಬರೆಸಿಕೊಳ್ಳುವುದಿಲ್ಲ. ಎಲ್ಲ ವರ್ಗದವರಿಗೂ ಸಿನಿಮಾ ಮಾಡುತ್ತೇನೆ. ಜನರಿಗೆ ಹತ್ತಿರವಾಗುವ ಚಿತ್ರಗಳು ಮಾತ್ರ ದೀರ್ಘಕಾಲ ಪ್ರದರ್ಶನ ಕಾಣುತ್ತವೆ. ಒಳ್ಳೆಯ ಹಣವೂ ಬರುತ್ತದೆ’ ಎನ್ನುವುದು ಅವರ ಲೆಕ್ಕಾಚಾರದ ಮಾತು.

‘ಕಮರ್ಷಿಯಲ್‌ ಧಾಟಿಯಲ್ಲಿ ಸಿನಿಮಾ ಮಾಡುವುದು ಹೊಸದೇನಲ್ಲ. ಆದರೆ, ಸಾಮಾಜಿಕ ಅಂಶಗಳನ್ನು ಇಟ್ಟುಕೊಂಡು ಚಿತ್ರ ಮಾಡುವಾಗ ಜವಾಬ್ದಾರಿ ಹೆಚ್ಚಿರುತ್ತದೆ. ಸಾಮಾಜಿಕ ಕಾಳಜಿ ಇರುವ ಕಥೆಗಳಿಗೆ ನನ್ನ ಮೊದಲ ಆದ್ಯತೆ. ಇತ್ತೀಚಿನ ಸಿನಿಮಾಗಳಲ್ಲಿನ ಪ್ರೇಮಕಥೆಗಳು ನಾಗಾಲೋಟದಲ್ಲಿ ಇರುತ್ತವೆ.

ಸೀತಾರಾಮ ಕಲ್ಯಾಣದ ಪ್ರೇಮಕಥನದಲ್ಲಿ ಪ್ಯೂರಿಟಿ ಇದೆ. ಇದೇ ಚಿತ್ರದ ಮುಖ್ಯಾಂಶ’ ಎನ್ನುತ್ತಾರೆ.

ತಾತ ದೇವೇಗೌಡ ಅವರಿಗೆ ಮೊಮ್ಮಗನ ನಟನೆಯೆಂದರೆ ಅಚ್ಚುಮೆಚ್ಚು. ತೆರೆಗೆ ಬರುವ ಮೊದಲ ತಾತನಿಗೆ ಚಿತ್ರ ತೋರಿಸಿದಾಗಲಷ್ಟೇ ಮೊಮ್ಮಗನಿಗೆ ಸಮಾಧಾನವಂತೆ. ‘ಮೊನ್ನೆ ತಾತ, ಅಜ್ಜಿಗೆ ಸಿನಿಮಾ ತೋರಿಸಿದೆ. ಇಬ್ಬರೂ ಖುಷಿಪಟ್ಟರು. ಜಾಗ್ವಾರ್‌ಗಿಂತ ಈ ಚಿತ್ರ ಹೇಗೆ ಭಿನ್ನ ಎನ್ನುವುದನ್ನು ತಾತನ ಕಣ್ಣಲ್ಲಿ ಕಂಡೆ. ಕೆಲವು ದೃಶ್ಯಗಳನ್ನು ನೋಡಿದ ತಾತ ಕಣ್ಣೀರು ಸುರಿಸಿದರು. ನನ್ನ ಮೊದಲ ಸಿನಿಮಾ ಯೂಥ್‌‍ಫುಲ್‌ ಆಗಿತ್ತು. ಇದರಲ್ಲಿ ಮನಸ್ಸಿಗೆ ನಾಟುವ ದೃಶ್ಯಗಳಿವೆ. ನಿರೀಕ್ಷೆಯು ಭುಜದ ಭಾರವನ್ನು ಹೆಚ್ಚಿಸಿದೆ’ ಎಂದು ವಿವರಿಸುತ್ತಾರೆ. ಈ ಪಾತ್ರಕ್ಕಾಗಿ ಅವರು ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿಲ್ಲವಂತೆ. ಆದರೆ, ದೊಡ್ಡ ಕಲಾವಿದರೊಟ್ಟಿಗೆ ನಟಿಸುವಾಗ ಜವಾಬ್ದಾರಿ ಹೆಚ್ಚಿರುತ್ತದೆ ಎನ್ನುವುದು ಅವರ ಅನುಭವದ ಮಾತು. ‘ಕುರುಕ್ಷೇತ್ರ ಚಿತ್ರದಲ್ಲಿನ ಅಭಿಮನ್ಯು ಪಾತ್ರಕ್ಕೆ ವಿಶೇಷ ತರಬೇತಿ ಪಡೆದಿದ್ದೆ. ಕತ್ತಿವರಸೆಯನ್ನೂ ಕಲಿತೆ. ಯುದ್ಧ ಸಾಮಗ್ರಿಗಳ ಬಳಕೆ ಬಗ್ಗೆ ತರಬೇತಿ ಪಡೆದಿದ್ದೆ. ಆದರೆ, ಈ ಚಿತ್ರದ ಪಾತ್ರಕ್ಕೆ ವಿಶೇಷ ಸಿದ್ಧತೆಯನ್ನೇನೂ ಮಾಡಿಲ್ಲ. ಪಾತ್ರಕ್ಕೆ ತಕ್ಕಂತೆ ಸಹಜ ಅಭಿನಯ ನನ್ನದು’ ಎಂದರು.

‘ಸಿನಿಮಾದ ಸನ್ನಿವೇಶಗಳು ಜನರ ನಿಜಬದುಕಿಗೆ ಹತ್ತಿರವಾಗಿರಬೇಕು. ಅಂತಹ ಕಥಾನಕಗಳಿಗಷ್ಟೇ ನನ್ನ ಆದ್ಯತೆ. ಜನರಿಗೆ ಕಥೆ ಕನೆಕ್ಟ್‌ ಆದಾಗಲಷ್ಟೇ ಗೆಲುವು ಸುಲಭ. ನಾನು ಅಣ್ಣಾವ್ರ ಸಿನಿಮಾಗಳನ್ನು ನೋಡಿ ಬೆಳೆದವನು. ಕಮರ್ಷಿಯಲ್‌ ಸಿನಿಮಾಗಳಲ್ಲಿ ನಾಯಕಿಯರು ಹೆಸರಿಗಷ್ಟೇ ಬಂದು ಹೋಗುತ್ತಾರೆ. ಆದರೆ, ಸೀತಾರಾಮ ಕಲ್ಯಾಣದಲ್ಲಿ ನಾಯಕಿ ರಚಿತಾ ರಾಮ್‌ ಅವರ ಪಾತ್ರಕ್ಕೆ ನಾಯಕನಿಗೆ ಸಿಕ್ಕಿರುವಷ್ಟೇ ಪ್ರಾಧಾನ್ಯ ನೀಡಲಾಗಿದೆ’ ಎಂದು ಪಾತ್ರ ಕುರಿತು ವಿವರಿಸಿದರು.

ನಿಖಿಲ್‌ ಜೊತೆಗಿನ ಮಾತುಕತೆ ರಾಜಕಾರಣದತ್ತ ಹೊರಳಿತು. ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ರಾಜಕಾರಣ ಪ್ರವೇಶಿಸುತ್ತೀರಾ? ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ: ‘ರಾಜಕಾರಣವೆಂದರೆ ನನಗೆ ಅಲೆಗಳ ಜೊತೆಗಿನ ಈಜಾಟ. ಆದರೆ, ಸಿನಿಮಾವೆಂದರೆ ಅಲೆಗಳ ಎದುರಿನ ಈಜಾಟ ಇದ್ದಂತೆ’ ಎಂದು ಅರ್ಥಗರ್ಭಿತವಾಗಿ ಹೇಳಿದರು.

‘ರಾಜಕಾರಣ ಮತ್ತು ಸಿನಿಮಾ ಎರಡನ್ನೂ ಹೇಗೆ ಸರಿದೂಗಿಸಿಕೊಂಡು ಹೋಗುತ್ತೀರಿ ಎಂದು ಹಲವರು ನನಗೆ ಪ್ರಶ್ನಿಸುತ್ತಾರೆ. ಎರಡೂ ಕ್ಷೇತ್ರದ ಜವಾಬ್ದಾರಿ ದೊಡ್ಡದು. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂಬ ಭರವಸೆ ನನಗಿದೆ. ಸಿನಿಮಾ ನನ್ನ ಅಭಿರುಚಿ. ನನಗೆ ತಕ್ಕಮಟ್ಟಿಗೆ ಇಮೇಜ್‌ ತಂದುಕೊಟ್ಟಿದ್ದೇ ಸಿನಿಮಾ. ಆದರೆ, ಪಕ್ಷದ(ಜೆಡಿಎಸ್‌) ಮೇಲೆ ನನ್ನದೇ ಆದ ಜವಾಬ್ದಾರಿ ಇದೆ. ಅದನ್ನು ಬಿಡಲಾಗುವುದಿಲ್ಲ’ ಎಂದರು.

ನಟಿ ರಚಿತಾ ರಾಮ್

‘ಸೂಪರ್‌ ಸ್ಟಾರ್‌’ ರಜನಿಕಾಂತ್‌ ನಟನೆಯ ‘2.0’ ಚಿತ್ರ ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್‌ ನಿಖಿಲ್ ಅವರ ಮುಂದಿನ ಸಿನಿಮಾ ಮಾಡುವುದಾಗಿ ಈಗಾಗಲೇ ಘೋಷಿಸಿದೆ. ಬಳಿಕ ನಿರ್ಮಾ‍ಪಕರಾದ ಜಯಣ್ಣ ಮತ್ತು ಸಿ.ಆರ್‌. ಮನೋಹರ್ ಬ್ಯಾನರ್‌ ಅಡಿಯಲ್ಲಿ ಸಿನಿಮಾಕ್ಕೆ ಸಿದ್ಧತೆ ನಡೆದಿದೆ. ‘ಇನ್ನು ಐದಾರು ತಿಂಗಳು ಯಾವುದೇ ಸಿನಿಮಾ ಮಾಡುವುದಿಲ್ಲ. ಕಥೆಗಳ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ಕಥೆ ಸಿದ್ಧವಾಗುವುದರೊಂದಿಗೆ ಚುನಾವಣೆ ಮುಗಿಸಿಕೊಂಡು ಬರುತ್ತೇನೆ’ ಎಂದರು ನಿಖಿಲ್.

ಮತ್ತೆ ಚಿತ್ರರಂಗದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಲೋಕಸಭಾ ಚುನಾವಣೆ ಮುಗಿದ ನಂತರವೇ ಎನ್ನುವುದು ಅವರ ಮಾತುಗಳಲ್ಲಿ ಸ್ಪಷ್ಟವಾಯಿತು.

**

ಅಣ್ಣಾವ್ರೇ ನನಗೆ ಪ್ರೇರಣೆ

ಹೀರೊ ಒಬ್ಬನಿಂದಲೇ ಯಾವುದೇ ಸಿನಿಮಾ ಗೆಲ್ಲುವುದಿಲ್ಲ ಎಂಬ ಸತ್ಯ ನಿಖಿಲ್ ಕುಮಾರ್ ಅವರಿಗೂ ತಿಳಿದಿದೆ. ಕೌಟುಂಬಿಕ ಪ್ರೇಕ್ಷಕವರ್ಗ ಚಿತ್ರಮಂದಿರದತ್ತ ಬಂದಾಗಲಷ್ಟೇ ನಾಯಕ ನಟ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾನೆ ಎಂಬ ಸಿನಿಮಾ ವ್ಯಾಕರಣವನ್ನೂ ಅವರು ಕಲಿತಿದ್ದಾರೆ. ‘ನಾನು ಅಣ್ಣಾವ್ರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವ. ಅವರ ಚಿತ್ರಗಳಲ್ಲಿ ಸಾಮಾಜಿಕ ಸಂದೇಶ ಇರುತ್ತಿತ್ತು. ಕಮರ್ಷಿಯಲ್‌ ಅಂಶದ ಜೊತೆಗೆ ಸಮಾಜದ ಬದಲಾವಣೆಗೆ ಪೂರಕವಾಗುವಂತಹ ಕಥೆಗಳಿಗೆ ಆದ್ಯತೆ ನೀಡುತ್ತಿದ್ದರು. ನನಗೆ ಅವರೇ ಪ್ರೇರಣೆ. ನಾಯಕ ನಟನೊಬ್ಬನಿಂದ ಸಿನಿಮಾ ಯಶಸ್ವಿಯಾಗುವುದಿಲ್ಲ. ಚಿತ್ರದ ಎಲ್ಲ ಪಾತ್ರಗಳು ಗಟ್ಟಿಯಾಗಿರಬೇಕು. ಆಗ ಗೆಲುವು ದಕ್ಕುತ್ತದೆ. ಹಾಗಾಗಿ, ನನ್ನ ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ಒತ್ತು ಕೊಡುತ್ತೇನೆ’ ಎನ್ನುತ್ತಾರೆ ಅವರು.

**

‘ಮನೆಯಲ್ಲಿದ್ದಾಗ ಅಪ್ಪ, ಅಮ್ಮ ಮತ್ತು ನಾನು ರಾಜಕಾರಣದ ಬಗ್ಗೆ ಒಂದೂ ಮಾತನಾಡುವುದಿಲ್ಲ’
–ನಟ ನಿಖಿಲ್‌ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.