ಚೆನ್ನೈ: ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿ ಸಲ್ಲಿಸಿರುವ ವರದಿಯ ಬಗ್ಗೆ ನನಗೆ ಗೊತ್ತಿಲ್ಲ. ತಮಿಳುನಾಡಿನಲ್ಲಿ ಅಂತಹ ಸಮಿತಿಯನ್ನು ರಚಿಸಬೇಕೆಂಬ ಬೇಡಿಕೆಯ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ನಟ ರಜನಿಕಾಂತ್ ಹೇಳಿದ್ದಾರೆ.
ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿಯಂತೆಯೇ ತಮಿಳುನಾಡಿನಲ್ಲೂ ಸಮಿತಿಯೊಂದನ್ನು ರಚಿಸಬೇಕೆಂದು ಅನೇಕರು ಒತ್ತಾಯಿಸುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಏನು? ನನಗೆ ಅದರ ಬಗ್ಗೆ ತಿಳಿದಿಲ್ಲ, ಕ್ಷಮಿಸಿ’ ಎಂದಷ್ಟೇ ತಿಳಿಸಿದ್ದಾರೆ.
ಚಿತ್ರನಟರಿಂದ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗಗೊಂಡ ಬೆನ್ನಲ್ಲೇ ಮಲಯಾಳ ಸಿನಿಮಾ ಕಲಾವಿದರ ಸಂಘಕ್ಕೆ (ಅಮ್ಮ) ಹಿರಿಯ ನಟ ಮೋಹನ್‌ಲಾಲ್, ಇತರ ಪದಾಧಿಕಾರಿಗಳು ಈಚೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ನಟರಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅನೇಕ ಕಲಾವಿದೆಯರು ಕಳೆದ ಕೆಲವು ದಿನಗಳಿಂದ ಆರೋಪ ಮಾಡಿದ್ದಾರೆ. ಕೆಲವು ಬಂಗಾಳಿ ನಟಿಯರೂ ಆರೋಪಕ್ಕೆ ದನಿಗೂಡಿಸಿದ್ದಾರೆ.
ಹೇಮಾ ಸಮಿತಿ ವರದಿ ಸಲ್ಲಿಕೆಯಾದ ಬಳಿಕ ಸಿಪಿಎಂ ಶಾಸಕ ಎಂ.ಮುಕೇಶ್, ನಟ ಸಿದ್ದೀಕ್, ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯ ಅರೋಪಗಳು ಕೇಳಿಬಂದಿದ್ದು, ನಾಲ್ಕು ಎಫ್‌ಐಆರ್ ದಾಖಲಾಗಿವೆ.
‘ಮಲಯಾಳ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಕ್ಯಾರವಾನ್ (ವಿಶೇಷ ಒಳಾಂಗಣ ವ್ಯವಸ್ಥೆ ಹೊಂದಿರುವ ಬಸ್) ಹಿಡನ್ ಕ್ಯಾಮೆರಾಗಳನ್ನು ಇಟ್ಟು ನಟಿಯರ ವಿಡಿಯೊಗಳನ್ನು ಸೆರೆಹಿಡಿಯಲಾಗುತ್ತಿತ್ತು. ಅವನ್ನು ನಟರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವೀಕ್ಷಿಸುತ್ತಿದ್ದರು...’ ಎಂದು ಹೇಳುವ ಮೂಲಕ ನಟಿ ರಾಧಿಕಾ ಶರತ್ ಕುಮಾರ್ ಅವರು ಆಘಾತಕಾರಿ ಮಾಹಿತಿಯೊಂದನ್ನು ಬಯಲಿಗೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.