ADVERTISEMENT

ಸಮಸ್ಯೆಗಳು ಬಗೆಹರಿದಿವೆ, ‘ಜೇಮ್ಸ್‌’ ಪ್ರದರ್ಶನ ನಿರಾತಂಕ: ಶಿವರಾಜ್‌ಕುಮಾರ್‌

ಪ್ರದರ್ಶಕರೊಂದಿಗೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 19:08 IST
Last Updated 24 ಮಾರ್ಚ್ 2022, 19:08 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

ಬೆಂಗಳೂರು: ‘ಜೇಮ್ಸ್‌’ ಸಿನಿಮಾ ಪ್ರದರ್ಶನ ಸಂಬಂಧಿಸಿದ ಸಮಸ್ಯೆಗಳು ಬಗೆಹರಿದಿವೆ. ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದರು.

‘ಪರಭಾಷಾ ಚಿತ್ರಗಳ ಕಾರಣದಿಂದ ‘ಜೇಮ್ಸ್‌’ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆಯಲಾಗುತ್ತಿದೆ ಎಂದು ಹರಿದಾಡಿದ ಸುದ್ದಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇಡೀ ಚಿತ್ರರಂಗ ಕುಟುಂಬವಿದ್ದಂತೆ ‘ಜೇಮ್ಸ್‌’ ಅಂದರೆ ಅದೊಂದು ಭಾವನಾತ್ಮಕ ಸಂಬಂಧವಿದೆ. ಅದನ್ನು ಈಗಾಗಲೇ ನಿರ್ಮಾಪಕರು, ನಿರ್ದೇಶಕರು ಹಾಗೂ ಪ್ರದರ್ಶಕರ ಜೊತೆ ಮಾತುಕತೆ ನಡೆಸಿ ಸರಿಪಡಿಸಲಾಗಿದೆ’ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್‌. ಜೈರಾಜ್‌ ಮಾತನಾಡಿ, ‘ಚಿತ್ರ ಪ್ರದರ್ಶನ ನಿಲ್ಲಿಸಿದ ಚಿತ್ರಮಂದಿರಗಳಲ್ಲಿ ನಿನ್ನೆ ಸಂಜೆಯಿಂದ ಮತ್ತೆ ಪ್ರದರ್ಶನ ಆರಂಭಿಸಲಾಗಿದೆ. ಒಂದೇ ಆವರಣ ಅಥವಾ ಮಾಲೀಕತ್ವದಲ್ಲಿರುವ ಎರಡು ಚಿತ್ರಮಂದಿರಗಳು ಇರುವ ಕಡೆಗಳಲ್ಲಿ ಒಂದೊಂದು ಚಿತ್ರಮಂದಿರಗಳಲ್ಲಿ ‘ಜೇಮ್ಸ್‌’ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ’ ಎಂದರು.

‘ಕೆಲವೆಡೆ ಮಾತ್ರ ಗೊಂದಲ ಸೃಷ್ಟಿಯಾಗಿತ್ತು. ಎಲ್ಲೆಲ್ಲಾ ಪ್ರದರ್ಶನ ನಿಲ್ಲಿಸಲಾಗಿತ್ತೋ ಆಯಾ ಚಿತ್ರಮಂದಿರಗಳ ಪಟ್ಟಿ ತರಿಸಿಕೊಂಡು ಮಾಲೀಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿದ್ದೇವೆ’ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಶಿವರಾಜ್‌ಕುಮಾರ್‌, ‘ಜೇಮ್ಸ್‌ ಪ್ರದರ್ಶನ ನಿರಾತಂಕವಾಗಿದೆ.ದಯವಿಟ್ಟು ಯಾರೂ ಆತಂಕ ಪಟ್ಟುಕೊಳ್ಳಬೇಡಿ. ನಿಮಗೆ (ಅಭಿಮಾನಿಗಳಿಗೆ) ನಿಮ್ಮ ನೆಚ್ಚಿನ ನಟನ ಸಿನಿಮಾ ಎಂಬ ಕಾರಣಕ್ಕೆ ಹಾಗೂ ನನಗೆ ನನ್ನ ತಮ್ಮನ ಸಿನಿಮಾ ಎಂಬ ಕಾರಣಕ್ಕೆ ಹೆಚ್ಚು ಆಪ್ತವಾಗುತ್ತಿದೆ. ಈ ಚಿತ್ರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗಲು ನಾವು ಬಿಡುವುದಿಲ್ಲ. ಮುಖ್ಯಮಂತ್ರಿಯವರೂ ಭರವಸೆ ನೀಡಿದ್ದಾರೆ’ ಎಂದರು.

‘ಇನ್ನು ಬಿಡುಗಡೆ ಆಗಲಿರುವ ‘ಆರ್‌ಆರ್‌ಆರ್‌’ ಅಥವಾ ಈಗ ಪ್ರದರ್ಶನಗೊಳ್ಳುತ್ತಿರುವ ‘ಕಾಶ್ಮೀರ್‌ ಫೈಲ್ಸ್‌’ ಚಿತ್ರಗಳಿಂದ ‘ಜೇಮ್ಸ್‌’ಗೆ ಯಾವುದೇ ತೊಂದರೆ ಆಗಿಲ್ಲ. ‘ಕಾಶ್ಮೀರ್‌ ಫೈಲ್ಸ್‌’ ಕೂಡಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದನ್ನು ತೆಗೆಯಲು ಯಾರೂ ಹೇಳಿಲ್ಲ. ಹಾಗೆ ಹೇಳುವುದೂ ಸರಿಯಲ್ಲ. ಒಂದು ಒಳ್ಳೆಯ ಚಿತ್ರದ ಪ್ರದರ್ಶನಕ್ಕೆ ತಡೆ ಒಡ್ಡುವುದು ಸರಿಯಲ್ಲ. ಅಭಿಮಾನಿಗಳೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು’ ಎಂದರು.

‘ಸಿದ್ದರಾಮಯ್ಯ ಅವರಿಗೆ ಹೇಳಿರಲಿಲ್ಲ’
‘ಪ್ರದರ್ಶನ ಸಂಬಂಧಿಸಿ ಸಮಸ್ಯೆ ಇದೆ ಎಂದು ಸಿದ್ದರಾಮಯ್ಯ ಅವರಿಗೆ ನಾನು ಹೇಳಿಯೇ ಇರಲಿಲ್ಲ. ಚಿತ್ರಕ್ಕೆ ಆಹ್ವಾನಿಸಲಷ್ಟೇ ಅವರ ಬಳಿ ಹೋಗಿದ್ದೆ. ಯಾವ ಚಿತ್ರಮಂದಿರದಲ್ಲಿಯೂ ‘ಜೇಮ್ಸ್‌’ ತೆಗೆದುಹಾಕಿ ‘ಕಾಶ್ಮೀರ್‌ ಫೈಲ್ಸ್‌’ ಪ್ರದರ್ಶಿಸಿಲ್ಲ’ ಎಂದು ಕಿಶೋರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ಅವರುಮಾರ್ಚ್‌ 22ರಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಜೇಮ್ಸ್‌’ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆದು ಕಾಶ್ಮೀರ್‌ ಫೈಲ್ಸ್‌ ಪ್ರದರ್ಶಿಸಲಾಗುತ್ತಿದೆ’ ಎಂದಿದ್ದರು.

ಈ ಬೆಳವಣಿಗೆಗಳ ನಡುವೆ ಅಭಿಮಾನಿಗಳು ‘ಆರ್‌ಆರ್‌ಆರ್‌’ ಚಿತ್ರದ ಪೋಸ್ಟರ್‌ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.