‘ನೋ ಟೈಮ್ ಟು ಡೈ’ ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರ. ಡೇನಿಯಲ್ ಕ್ರೇಗ್ ಅಭಿನಯದ ಈ ಸಿನಿಮಾ ನವೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಹಿಂದಿ, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ತೆರೆ ಕಾಣುತ್ತಿದೆ.
ಈಗಾಗಲೇ, ನವೆಂಬರ್ 12ರಂದು ಇಂಗ್ಲೆಂಡ್ ಮತ್ತು ನವೆಂಬರ್ 20ರಂದು ಅಮೆರಿಕದಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇದಾದ ಬಳಿಕ ವಿಶ್ವದಾದ್ಯಂತ ತೆರೆ ಕಾಣಲಿದೆಯಂತೆ. ಜೇಮ್ಸ್ ಬಾಂಡ್ ಟ್ವಿಟರ್ ಖಾತೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
2006ರಲ್ಲಿ ಡೇನಿಯಲ್ ಕ್ರೇಗ್ ಬಾಂಡ್ ಸರಣಿಯ ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು. ‘ಕ್ಯಾಸಿನೊ ರಾಯಲ್’ ಸಿನಿಮಾ ಮೂಲಕ ಬಾಂಡ್ ಪಾತ್ರದಲ್ಲಿ ಮಿಂಚಿದ್ದರು. ಬಳಿಕ 2008ರಲ್ಲಿ ‘ಕ್ವಾಂಟಂ ಆಫ್ ಸೊಲೇಸ್’ ಚಿತ್ರದಲ್ಲಿ ನಟಿಸಿದರು. ಇದಾದ ನಾಲ್ಕು ವರ್ಷದ ಬಳಿಕ 2012ರಲ್ಲಿ ‘ಸ್ಕೈಪಾಲ್’ ಚಿತ್ರದ ಮೂಲಕ ಮತ್ತೆ ಬಾಂಡ್‌ನ ಅವತಾರ ತಳೆದಿದ್ದು ಉಂಟು. ಅವರು ಕೊನೆಯದಾಗಿ ನಟಿಸಿದ್ದು 2015ರಲ್ಲಿ ತೆರೆಕಂಡ ‘ಸ್ಪೆಕ್ಟರ್’ ಚಿತ್ರದಲ್ಲಿ. ಬಾಂಡ್ ಸರಣಿ ಸಿನಿಮಾಗಳ ಪೈಕಿ ‘ನೋ ಟೈಮ್ ಟು ಡೈ’ ಅವರಿಗೆ ಐದನೇ ಚಿತ್ರ.
ಸೈಟಿಂಫಿಕ್ ಥ್ರಿಲ್ಲರ್ ಚಿತ್ರ ಇದು. ನವೆಂಬರ್‌ನಲ್ಲಿ ದೇಶದಾದ್ಯಂತ ಚಿತ್ರಮಂದಿರಗಳ ಪ್ರದರ್ಶನ ಮತ್ತೆ ಶುರುವಾದರೆ ಬಿಡುಗಡೆಗೆ ನಿರ್ಮಾಪಕರು ನಿರ್ಧರಿಸಿದ್ದಾರೆ. ಏಪ್ರಿಲ್‌ನಲ್ಲಿಯೇ ಈ ಸಿನಿಮಾ ತೆರೆ ಕಾಣಬೇಕಿತ್ತು. ಕೋವಿಡ್–19 ಪರಿಣಾಮ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿತ್ತು.
ಜೇಮ್ಸ್ ಬಾಂಡ್ ಜಮೈಕಾದಲ್ಲಿ ನಿವೃತ್ತಿ ಜೀವನವನ್ನು ಎಂಜಾಯ್ ಮಾಡುತ್ತಿರುತ್ತಾನೆ. ಆದರೆ, ಹಳೆಯ ಸ್ನೇಹಿತ ಸಿಐಎ ಫೆಲಿಕ್ಸ್ ಲೈಟರ್ ಸಹಾಯ ಕೇಳಿಕೊಂಡು ಬರುತ್ತಾನೆ. ಮತ್ತೆ ಬಾಂಡ್ ತನ್ನ ಸಾಹಸಕ್ಕೆ ಇಳಿಯುವುದೇ ಚಿತ್ರದ ಕಥಾಹಂದರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.