ಕೋಲ್ಕತ್ತ: ಇಂತಹದೇ ಪ್ರಕಾರದ ಸಿನಿಮಾ ಮಾಡಬೇಕು ಎಂದು ಚಿತ್ರ ನಿರ್ದೇಶಕರ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಖ್ಯಾತ ನಟ ಮನೋಜ್ ಬಾಜಪೇಯಿ ಹೇಳಿದ್ದಾರೆ.
29ನೇ ಕೋಲ್ಕತ್ತ ಅಂತರರಾಷ್ಟ್ರೀಯ ಚಿತ್ರೋತ್ಸವದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮನೋಜ್, ಯಾವ ಸಿನಿಮಾವನ್ನು ನೋಡಬೇಕು ಎಂಬುದು ಜನರಿಗೆ ಬಿಟ್ಟದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
'ಸಿನಿಮಾ ನೋಡುವ ಆಯ್ಕೆ ಪ್ರೇಕ್ಷಕರ ಅಭಿರುಚಿಗೆ ಬಿಟ್ಟ ವಿಚಾರ. ಎಲ್ಲ ಮನೋಭಾವದವರಿಗೂ, ಎಲ್ಲ ರೀತಿಯ ಸಿನಿಮಾಗಳಿಗೂ ಇಲ್ಲಿ ಅವಕಾಶವಿದೆ. ನಿರ್ಮಾಪಕರು ಅಥವಾ ನಿರ್ದೇಶಕರನ್ನು ನಿಮ್ಮ ಇಷ್ಟದಂತೆ ಸಿನಿಮಾ ಮಾಡಲು ಕೇಳಬೇಡಿ. ತಮ್ಮಿಷ್ಟದಂತೆ ಸಿನಿಮಾ ಮಾಡಲು ಅವರು ಸ್ವತಂತ್ರರು' ಎಂದಿದ್ದಾರೆ.
'ನನಗೆ ಆಯ್ಕೆಗಳನ್ನು ನೀಡಿದ ನಿರ್ದೇಶಕರುಗಳಿಗೆ ಧನ್ಯವಾದ ಹೇಳುತ್ತೇನೆ. ನನ್ನ ಮೇಲೆ ನಾನು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಪಾತ್ರಗಳನ್ನು ತುಂಬಾ ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತೇನೆ' ಎಂದು ತಿಳಿಸಿದ್ದಾರೆ.
ಭಾರತದಲ್ಲಿ ತಯಾರಾಗುವ ಸಾಕಷ್ಟು ಸಿನಿಮಾಗಳು ಕೌಟುಂಬಿಕ ಮೌಲ್ಯ ಮತ್ತು ಮಹಿಳೆಯನ್ನು ವೈಭವೀಕರಿಸುವಂಥವೇ ಆಗಿರುತ್ತವೆ ಎಂದು ಇದೇ ವೇಳೆ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಕಥೆಗಳಲ್ಲಿ ಸಾಕಷ್ಟು ಸಾಧ್ಯತೆಗಳು ಮತ್ತು ವೈವಿಧ್ಯತೆಗಳಿವೆ. ಹಾಗಾಗಿ ಧನಾತ್ಮಕ ಅಥವಾ ಋಣಾತ್ಮಕ ಪಾತ್ರಗಳು ಎಂಬುದನ್ನು ಅಷ್ಟಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.
ಜನಪ್ರಿಯವಾಗಿ ಬೆಳೆಯುತ್ತಿರುವ ಒಟಿಟಿ ವೇದಿಕೆ ಕುರಿತೂ ಮಾತನಾಡಿರುವ ಮನೋಜ್, 'ಒಟಿಟಿಯು ಸಿನಿಮಾ ರಂಗಕ್ಕೆ ಸಾಕಷ್ಟು ನೆರವು ನೀಡಿದೆ. ಸಾಕಷ್ಟು ನಟರಿಗೆ ಇದರಿಂದ ಸಹಾಯವಾಗಿದೆ. ಕೋವಿಡ್‌ನಂತಹ ಸಾಂಕ್ರಾಮಿಕದ ಅವಧಿಯಲ್ಲಿ ಜನರು ಮನೆಗಳಲ್ಲಿಯೇ ಉಳಿದು ಮೊಬೈಲ್‌ಗಳಿಗೆ ಅಂಟಿಕೊಂಡ ಸಂದರ್ಭದಲ್ಲಿ ಸಾಕಷ್ಟು ಸ್ಟಾರ್‌ಗಳು ಒಟಿಟಿ ಮೂಲಕ ಹುಟ್ಟಿಕೊಂಡಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟಿಟಿಯಲ್ಲಿ ಪ್ರಸಾರವಾಗುವ ವಿಚಾರಗಳ ಮೇಲೆ ನಿಯಂತ್ರಣ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ, 'ಜನರು ಬುದ್ಧಿವಂತರು ಮತ್ತು ಸೂಕ್ಷ್ಮಮತಿಗಳಾಗಿದ್ದಾರೆ. ಅಗತ್ಯವಿದ್ದಾಗ ಡಿಜಿಟಲ್ ಮಿಡಿಯಾ ಸೆನ್ಸಾರ್ ಜಾರಿಯಾಗಲಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.