ADVERTISEMENT

ಟ್ರೆಂಡ್‌ ಆಯ್ತು ‘ಆದಿಪುರುಷ್‌ ತಡೆಯಲು ಸಾಧ್ಯವಿಲ್ಲ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 5:47 IST
Last Updated 9 ಅಕ್ಟೋಬರ್ 2022, 5:47 IST
ಆದಿಪುರುಷ್‌ ಚಿತ್ರದಲ್ಲಿ ಪ್ರಭಾಸ್‌
ಆದಿಪುರುಷ್‌ ಚಿತ್ರದಲ್ಲಿ ಪ್ರಭಾಸ್‌   

ಪ್ರಭಾಸ್‌ ನಟನೆಯ ‘ಆದಿಪುರುಷ್‌’ ಚಿತ್ರ, ಟ್ರೇಲರ್‌ ಬಿಡುಗಡೆಯಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ‘ಯಾರಿಂದಲೂ ಆದಿಪುರುಷ್‌ ತಡೆಯಲು ಸಾಧ್ಯವಿಲ್ಲ’ ಹ್ಯಾಷ್‌ಟ್ಯಾಗ್‌ ಅಭಿಯಾನ ಸದ್ಯ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಅಭಿಯಾನ ಪ್ರಾರಂಭಗೊಳ್ಳಲು ಬಲವಾದ ಕಾರಣವಿದೆ.

ಪ್ರಭಾಸ್‌–ಸೈಫ್‌ ಅಲಿಖಾನ್‌ ನಟನೆಯ ಆದಿಪುರುಷ್‌ ಟ್ರೇಲರ್‌ ತೀವ್ರವಾಗಿ ಟ್ರೋಲ್‌ ಆಗಿತ್ತು. ಕಾರಣ ಅದರ ಗ್ರಾಫಿಕ್ಸ್‌ ಗುಣಮಟ್ಟ. ರಾಮ ಮತ್ತು ರಾವಣನ ಪಾತ್ರಗಳು. ಜೊತೆಗೆ ಸೈಫ್‌ ಅಲಿಖಾನ್‌ ರಾವಣನಾಗಿ ಕಾಣಿಸಿಕೊಂಡಿದ್ದಕ್ಕೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಮಾಯಣದ ಕಥೆಯನ್ನು ತೀರ ಕಳಪೆಯಾಗಿ ಪ್ರಸ್ತುತಪಡಿಸಬೇಡಿ, ಇದಕ್ಕಿಂತ ದೂರದರ್ಶನದಲ್ಲಿ ಬರುತ್ತಿದ್ದ ರಾಮಾಯಣವೇ ಚೆನ್ನಾಗಿತ್ತು ಎಂಬಿತ್ಯಾದಿಯಾಗಿ ಅನೇಕರು ‘ಆದಿಪುರುಷ್‌’ ಚಿತ್ರವನ್ನು ಟೀಕಿಸಿದ್ದರು.

ಅಯೋಧ್ಯೆಯ ಪ್ರಧಾನ ಅರ್ಚಕರು ಆದಿಪುರುಷ್‌ ಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ‘ಈ ಸಿನಿಮಾದಲ್ಲಿ ಶ್ರೀರಾಮ, ಹನುಮಾನ್ ಮತ್ತು ರಾವಣನನ್ನು ತಪ್ಪಾಗಿ ಚಿತ್ರಿಸಲಾಗಿದೆ. ಹೀಗಾಗಿ ಚಿತ್ರವನ್ನು ನಿಷೇಧಿಸಬೇಕು’ಎಂದು ಅರ್ಚಕ ಸತ್ಯೇಂದ್ರ ದಾಸ್ ಆಗ್ರಹಿಸಿದ್ದರು.

ADVERTISEMENT

ಆದರೆ ಚಿತ್ರದ ನಿರ್ದೇಶಕ ಓಂ ರಾವತ್‌ ಹಾಗೂ ಚಿತ್ರತಂಡ ಚಿತ್ರವನ್ನು ಸಮರ್ಥಿಸಿಕೊಂಡಿದೆ. ಗ್ರಾಫಿಕ್ಸ್‌ ಗುಣಮಟ್ಟ ಉತ್ತಮವಾಗಿದೆ. ಉತ್ಕೃಷ್ಟ ಮಟ್ಟದ ಗ್ರಾಫಿಕ್ಸ್‌ಗಾಗಿಯೇ ನೂರಾರು ಕೋಟಿ ಖರ್ಚು ಮಾಡಲಾಗಿದೆ ಎಂದಿತ್ತು.

ಇದೀಗ ಪ್ರಭಾಸ್‌ ಅಭಿಮಾನಿಗಳು ‘ಆದಿಪುರುಷ್‌’ ಟ್ರೋಲ್‌ ಮಾಡುತ್ತಿರುವವರ ವಿರುದ್ಧ ತಿರುಗಿಬಿದ್ದಿದ್ದಾರೆ. #NoOneCanStopAdipurush ಅಭಿಯಾನ ಆರಂಭಿಸಿದ್ದು, ಅದನ್ನು ಪ್ರಭಾಸ್‌ ಅಭಿಮಾನಿ ಬಳಗ ಮರು ಟ್ವೀಟ್‌ ಮಾಡುತ್ತಿದೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಲು ಪ್ರಭಾಸ್‌ ಅಭಿಮಾನಿ ಒಕ್ಕೂಟಗಳು ಕರೆ ನೀಡಿವೆ. ಹೀಗಾಗಿ ಸದ್ಯಕ್ಕೆ ಟ್ವಿಟರ್‌ನಲ್ಲಿ ಈ ಅಭಿಯಾನ ಟ್ರೆಂಡ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.