ADVERTISEMENT

1 ಸೆಂಟ್ ಭೂಮಿಯನ್ನೂ ಒತ್ತುವರಿ ಮಾಡಿಕೊಂಡಿಲ್ಲ: ತೆಲುಗು ನಟ ನಾಗಾರ್ಜುನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2024, 2:51 IST
Last Updated 26 ಆಗಸ್ಟ್ 2024, 2:51 IST
   

ಚೆನ್ನೈ: ಕನ್ವೆನ್ಷನ್ ಸೆಂಟರ್ ನಿರ್ಮಾಣಕ್ಕೆ 1 ಸೆಂಟ್ ಭೂಮಿಯನ್ನೂ ಒತ್ತುವರಿ ಮಾಡಿಕೊಂಡಿಲ್ಲ ಎಂದು ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಹೇಳಿದ್ದಾರೆ.

ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆ ಎಂದು ಆರೋಪಿಸಿ ಶನಿವಾರ ಹೈದರಾಬಾದ್‌ನ ನಾಗಾರ್ಜುನ ಒಡೆತನದ ಎನ್‌–ಕನ್ವೆನ್ಷನ್ ಸೆಂಟರ್ ಅನ್ನು ಶನಿವಾರ ಸರ್ಕಾರಿ ಅಧಿಕಾರಿಗಳು ಉರುಳಿಸಿದ್ದರು.

ಈ ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ನಾಗಾರ್ಜುನ,‘ನನ್ನ ಆತ್ಮೀಯ ಹಿತೈಷಿಗಳು, ಅಭಿಮಾನಿಗಳೇ.. ಸೆಲೆಬ್ರಿಟಿಗಳ ಬಗೆಗಿನ ಸುದ್ದಿಯನ್ನು ಬೇಕಂತಲೇ ಉತ್ಪ್ರೇಕ್ಷೆ ಮಾಡುವ ಪರಿಪಾಠ ಹೆಚ್ಚಾಗಿದೆ. ಎನ್‌–ಕನ್ವೆನ್ಷನ್ ಸೆಂಟರ್ ನಿರ್ಮಾಣ ಮಾಡಲಾಗಿದ್ದ ಭೂಮಿಯು ಪಟ್ಟಾ ಡಾಕ್ಯುಮೆಂಟ್ ಭೂಮಿಯಾಗಿದೆ. ಈ ದಾಖಲೆಯಲ್ಲಿರುವ ಜಾಗ ಬಿಟ್ಟು ಬೇರೆ ಯಾವುದೇ ಜಾಗವನ್ನು1 ಸೆಂಟ್‌ನಷ್ಟೂ ಒತ್ತುವರಿ ಮಾಡಿಕೊಂಡಿಲ್ಲ. ಆಂಧ್ರ ಪ್ರದೇಶ ಭೂ ಕಬಳಿಕೆ ತಡೆ ಕಾಯ್ದೆಯಡಿ ರಚಿಸಲಾಗಿರುವ ವಿಶೇಷ ನ್ಯಾಯಾಲಯವು ಕೇಸ್ ಸಂಖ್ಯೆ.3943/2011ಕ್ಕೆ ಸಂಬಂಧಿಸಿದಂತೆ ತುಮ್ಮಿಡಿಕುಂಟ ಕೆರೆಯಲ್ಲಿ ಯಾವುದೇ ಭೂಮಿ ಒತ್ತುವರಿ ಆಗಿಲ್ಲ ಎಂದು 2014ರ ಫೆಬ್ರುವರಿ 24ರಂದು ಆದೇಶ ನೀಡಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ನನಗೆ ಈ ನೆಲದ ಕಾನೂನು ಮತ್ತು ಆದೇಶಗಳ ಮೇಲೆ ನಂಬಿಕೆ ಇದೆ. ಈಗಾಗಲೇ ಹೈಕೋರ್ಟ್‌ನಲ್ಲಿ ನನ್ನ ವಾದ ಮಂಡಿಸಿದ್ದೇನೆ. ಹೈಕೋರ್ಟ್ ಆದೇಶ ಬರುವವರೆಗೂ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಶನಿವಾರ ವಿಪತ್ತು ನಿರ್ವಹಣೆ ಮತ್ತು ಸ್ವತ್ತು ನಿರ್ವಹಣೆ ಹಾಗೂ ರಕ್ಷಣೆ(ಎಚ್‌ವೈಡಿಆರ್‌ಎಎ) ಸಂಸ್ಥೆಯು ತಮ್ಮ ಕನ್ವೆನ್ಷನ್ ಸೆಂಟರ್ ಅನ್ನು ಉರುಳಿಸಿದ ಬಗ್ಗೆ ನಾಗಾರ್ಜುನ ತೀವ್ರ ಅಸಮಾಧಾನ ಹೊರ ಹಾಕಿದ್ದರು.

ಕಾನೂನುಬಾಹಿರವಾಗಿ ತನ್ನ ಕಟ್ಟಡ ಉರುಳಿಸಿರುವುದಕ್ಕೆ ಬಹಳ ನೊಂದಿದ್ದೇನೆ ಎಂದೂ ಅವರು

ಬರೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.