ADVERTISEMENT

ಬಯೋಪಿಕ್ : ನಾಳೆ ‘ಎನ್‌ಟಿಆರ್‌– ಕಥಾನಾಯಕುಡು’ ತೆರೆಗೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 7:36 IST
Last Updated 8 ಜನವರಿ 2019, 7:36 IST
   

ತೆಲುಗು ಚಿತ್ರರಂಗದ ಮೇರುನಟ ಎನ್.ಟಿ. ರಾಮರಾವ್‌ ಅವರ ಜೀವನ ಚರಿತ್ರೆ ಆಧಾರಿತ ‘ಎನ್‌ಟಿಆರ್‌– ಕಥಾನಾಯಕುಡು’ ಚಿತ್ರ ಇದೇ 9ರಂದು ದೇಶದಾದ್ಯಂತ ತೆರೆಕಾಣುತ್ತಿದೆ. ಫೆಬ್ರುವರಿಯಲ್ಲಿ ಇದರ ಮುಂದುವರಿದ ಭಾಗವಾದ ‘ಎನ್‌ಟಿಆರ್‌– ಮಹಾನಾಯಕುಡು’ ಚಿತ್ರವೂ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಎನ್‌ಟಿಆರ್‌ ಪಾತ್ರದಲ್ಲಿ ಅವರ ಪುತ್ರ ನಂದಮೂರಿ ಬಾಲಕೃಷ್ಣ ಅವರೇ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಪುತ್ರನೊಬ್ಬ ತಂದೆಯ ಪಾತ್ರಕ್ಕೆ ಜೀವ ತುಂಬಿರುವುದು ಇದೇ ಮೊದಲು. ಚಂದ್ರಬಾಬು ನಾಯ್ಡು ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ರಾನಾ ದಗ್ಗುಬಾಟಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ADVERTISEMENT

‘ತೆಲುಗು ಭಾಷೆಯ ಚರಿತ್ರೆಯಲ್ಲಿ ಗೌತಮಿಪುತ್ರ ಶಾತಕರ್ಣಿಯ ಸಾಧನೆ ಅನನ್ಯವಾದುದು. ಪ್ರಾಚೀನ ಕಾಲದಲ್ಲಿ ತೆಲುಗು ಸಾಮ್ರಾಜ್ಯ ಕಟ್ಟಿದ ಹೆಗ್ಗಳಿಕೆಗೆ ಆತ ಪಾತ್ರನಾಗಿದ್ದಾನೆ. ಆಧುನಿಕ ಯುಗದಲ್ಲಿ ತೆಲುಗು ಸಂಸ್ಕೃತಿಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಎನ್‌ಟಿಆರ್‌ಗೆ ಸಲ್ಲುತ್ತದೆ’ ಎಂದರು ನಟ ನಂದಮೂರಿ ಬಾಲಕೃಷ್ಣ.

‘ನನ್ನ ಅಪ್ಪ ಹುಟ್ಟಿದ್ದು ಸಾಮಾನ್ಯ ರೈತ ಕುಟುಂಬದಲ್ಲಿ. ಜನರ ಸಂಕಷ್ಟದ ಬಗ್ಗೆ ಚಿತ್ರರಂಗ, ರಾಜಕೀಯಕ್ಕೆ ಬರುವುದಕ್ಕೂ ಮೊದಲೇ ಅವರಿಗೆ ಕಾಳಜಿ ಇತ್ತು. ನಟ, ಬಳಿಕ ರಾಜಕಾರಣಿಯಾಗಿ ಅವರು ಮಾಡಿರುವ ಸಾಧನೆ ಅನನ್ಯವಾದುದು. ಅದನ್ನು ತೆರೆಯ ಮೇಲೆ ತರುತ್ತಿರುವುದಕ್ಕೆ ಹೆಮ್ಮೆಯಿದೆ’ ಎಂದು ಹೇಳಿಕೊಂಡರು.

ನಟಿ ವಿದ್ಯಾ ಬಾಲನ್‌, ‘ಎನ್‌ಟಿಆರ್‌ ದೇಶ ಕಂಡ ಅಪ್ರತಿಮ ನಟ ಮತ್ತು ರಾಜಕಾರಣಿ. ಅವರ ಬಯೋಪಿಕ್‌ನಲ್ಲಿ ನಟಿಸಿರುವುದು ನನಗೆ ಖುಷಿ ಕೊಟ್ಟಿದೆ. ನಿರ್ದೇಶಕರು ಅತ್ಯುತ್ತಮವಾದ ಚಿತ್ರಕಥೆ ಹೆಣೆದಿದ್ದಾರೆ. ಜನರಿಗೆ ಚಿತ್ರ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟರಾದ ಪುನೀತ್‌ ರಾಜ್‌ಕುಮಾರ್, ಯಶ್‌, ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರಕ್ಕೆ ಶುಭ ಕೋರಿದರು. ನಿರ್ದೇಶಕ ಕ್ರಿಷ್‌ ಅವರ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ವಿ.ಎಸ್‌. ಗಂಗಾಶೇಖರ್‌ ಅವರ ಛಾಯಾಗ್ರಣವಿದೆ. ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ನಂದಮೂರಿ ಬಾಲಕೃಷ್ಣ, ಸಾಯಿ ಕೊರ್ರಪಾಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.