ಮುಂಬೈ: ದಿಲೀಪ್ ಕುಮಾರ್... ಭಾರತೀಯ ಚಿತ್ರ ಜಗತ್ತಿನ ಒಬ್ಬ ನಟ ಅನ್ನುವುದಕ್ಕಿಂತ ನಟನಿಗಿಂತಲೂ ವಿಸ್ತಾರದ ವ್ಯಕ್ತಿತ್ವ ಮತ್ತು ಬದುಕನ್ನು ಸಾಗಿಸಿದವರು. ಭಾರತದ ಬಹು ಸಂಸ್ಕೃತಿಯ ಸಂಯೋಜನೆಯನ್ನು ತೆರೆಯ ಮೇಲೆ ಮತ್ತು ಬದುಕಿನಲ್ಲೂ ನಿರೂಪಿಸಿ ತೋರಿಸಿದ ಒಂದು ದಂತಕಥೆ.
ಚಲನಚಿತ್ರಗಳಲ್ಲಿ ದಂಗೆ, ಪ್ರೀತಿಯ ಕಥನಗಳನ್ನು ಅವರು ತೋರಿಸಿದ್ದರು. ಸಾರ್ವಜನಿಕ ಬದುಕಿನಲ್ಲೂ ಚಿತ್ರದ ಕಥೆಗಳಂತೆಯೇ ಏಳುಬೀಳುಗಳನ್ನು ಕಂಡವರು. ಅವರದ್ದು ಕಪ್ಪು ಬಿಳುಪು ಕಾಲದಲ್ಲಿ ರೂಪುಗೊಂಡ ಚಿಂತನೆ. ಕಾಲದ ಬದಲಾವಣೆಗೆ ತಕ್ಕಂತೆ ಬಹುವರ್ಣದ ಬದುಕು ಮತ್ತು ಕಾಲಕ್ಕೆ ತೆರೆದುಕೊಂಡರು.
ಅವರು ಒಬ್ಬ ನಟನಿಗಿಂತಲೂ ಹೆಚ್ಚು. ದಿಲೀಪ್ ಕುಮಾರ್, ಅಥವಾ ಯೂಸುಫ್ ಖಾನ್ ಅಂದರೆ ಅವರು ಭಾರತದ ಸಂಯೋಜಿತ ಸಂಸ್ಕೃತಿಯನ್ನು ನಿರೂಪಿಸಿದ ದಂತಕಥೆ. ಅವರ ಚಲನಚಿತ್ರಗಳಲ್ಲಿ ದಂಗೆ, ಭರವಸೆ ಮತ್ತು ಪ್ರೀತಿಯ ಕಥೆಗಳನ್ನು ಮತ್ತು ಸಾರ್ವಜನಿಕ ಜೀವನದಲ್ಲಿ ಅವರ ಏಳು ದಶಕಗಳಲ್ಲಿ ಪರಿಶೋಧಿಸಿದರು.
40– 50ರ ದಶಕದಲ್ಲಿ ಅಂದಿನ ಯುವಜನರನ್ನು ಕಾಡುವ ವಿಷಯಗಳನ್ನು ಮುಂದಿಟ್ಟುಕೊಂಡು ತಮ್ಮ ಚಿತ್ರಗಳ ಕಥೆಗಳಲ್ಲಿ ಪ್ರಸ್ತುತಪಡಿಸಿದರು. ‘ಶಹೀದ್’, ‘ನಯಾ ದೌರ್’ ಇತ್ಯಾದಿ ಚಿತ್ರಗಳಲ್ಲಿ ಒಂದು ಆದರ್ಶವಾದವನ್ನು ಪ್ರಸ್ತುತಪಡಿಸಿದರು. ‘ಗಂಗಾ ಜಮುನಾ’ ಚಿತ್ರದಲ್ಲಿ ಅತಿ ಭ್ರಮೆಗಳನ್ನು ತೊಡೆದು ಹಾಕುವ ಪರಿಕಲ್ಪನೆಯೂ ಕಂಡಿದೆ. ಆ ಬಳಿಕ ನೋಡಿದ್ದು ಅಮಿತಾಬ್ ಬಚ್ಚನ್ ಅವರ ಆ್ಯಂಗ್ರಿ ಯಂಗ್ ಮ್ಯಾನ್ ಯುಗ. ಆದರೆ, ದಿಲೀಪ್ ಕುಮಾರ್ ಅನ್ನುವ ಬ್ರಾಂಡ್‌ಗೆ ಚ್ಯುತಿ ಬರಲಿಲ್ಲ. ಅವರ ನಟನೆ ಹೊಸ ತಲೆಮಾರಿನವರಿಗೆ ಸ್ಫೂರ್ತಿ ಆಗಿದ್ದೂ ಹೌದು.
ದಿಲೀಪ್ ಅವರದೇನಿದ್ದರೂ ನಟನೆ, ನಟನೆ ಮತ್ತು ನಟನೆ ಅಷ್ಟೇ. ನಿರ್ಮಾಣ ಕ್ಷೇತ್ರದತ್ತ ತಲೆಹಾಕಲಿಲ್ಲ. ನಟನೆಗಷ್ಟೇ ಬದ್ಧರಾಗಿ ಬಾಳಿ ಬದುಕಿದರು.
ಮೂಲ ಪೇಶಾವರದವರು. ಹಣ್ಣಿನ ವ್ಯಾಪಾರಿಯಾಗಿ ಬದುಕು ಆರಂಭಿಸಿದವರು. ಸಹಜವಾಗಿ ಲೋಕಜ್ಞಾನ ಸ್ವಲ್ಪ ಹೆಚ್ಚೇ ಇತ್ತೆನ್ನಿ. ಉರ್ದು, ಹಿಂದಿ, ಪಂಜಾಬಿ, ಅವಧಿ, ಭೋಜ್‌ಪುರಿ, ಮರಾಠಿ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು ದಿಲೀಪ್. ಅವರ ಪತ್ನಿ, ನಟ ಸಾಯಿರಾ ಭಾನು ಅವರು ಭಗವದ್ಗೀತೆ ಮತ್ತು ಕುರಾನ್ ಎರಡರ ತಿಳಿವಳಿಕೆ ಹೊಂದಿದ್ದವರೂ ಆಗಿದ್ದರು.
ಯೂಸುಫ್‌ಖಾನ್ ದಿಲೀಪ್ ಕುಮಾರ್ ಆದ ಕಥೆ
ಪೇಶಾವರದ ಹಣ್ಣಿನ ವ್ಯಾಪಾರಿ ಗುಲಾಮ್ ಸರ್ವಾರ್ ಅವರ 11 ಮಂದಿ ಮಕ್ಕಳ ಪೈಕಿ ಒಬ್ಬರು. 1922ರ ಡಿಸೆಂಬರ್ 11ರಂದು ಪೇಶಾವರದಲ್ಲಿ ಜನಿಸಿದರು. ಮೂಲ ಹೆಸರು ಮಹಮದ್ ಯೂಸುಫ್ ಖಾನ್. ಆದರೆ, ತೆರೆಯ ಮೇಲೆ ತಮ್ಮನ್ನು ಸ್ವೀಕರಿಸಬೇಕು ಎಂಬ ಉದ್ದೇಶದಿಂದ ಹೆಸರು ಬದಲಿಸಿಕೊಳ್ಳಲು ನಿರ್ಧರಿಸಿದರು. ದಿಲೀಪ್ ಕುಮಾರ್ ಅವರ ತೆರೆಯ ಹೆಸರು (ಸ್ಕ್ರೀನ್ ನೇಮ್) ಈ ಹೆಸರನ್ನಿಟ್ಟವರು ಬಾಂಬೆ ಟಾಕೀಸ್‌ನ ಮುಖ್ಯಸ್ಥರಾಗಿದ್ದ ದೇವಿಕಾ ರಾಣಿ.
ಕೆಲವು ತೆರೆಯ ಕಥೆಗಳು ಅವರ ನಿಜಜೀವನದಲ್ಲೂ ಆಗಿಬಿಟ್ಟವೇನೋ ಎಂಬಂತಾಯಿತು. 1950ರ ಸುಮಾರಿಗೆ ಅವರು ಕೆಲಕಾಲ ಖಿನ್ನತೆಗೆ ಜಾರಿದ್ದರು. ಆ ಬಳಿಕ ಲಘು ಪಾತ್ರಗಳನ್ನಷ್ಟೇ ಕೆಲಕಾಲ ನಿರ್ವಹಿಸಿದರು.
ತಮ್ಮ ಜೀವನದಲ್ಲಿ ಈ ಹಂತದ ಬಗ್ಗೆ ಬರೆಯುವ ಅವರು, ‘ನಾನು ಕೆಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದೆ ಮತ್ತು ಆ ಪಾತ್ರಗಳಲ್ಲಿ ನನ್ನ ವಿಪರೀತ ತಲ್ಲೀನತೆಯ ಪರಿಣಾಮವಾಗಿ ಒಂದು ತೆರನಾತ ಅಸ್ವಸ್ಥ ಮನಸ್ಥಿತಿ ಸೃಷ್ಟಿಸಿದೆ. ಅವಧಿಮೀರಿ ಕೆಲಸ ಮಾಡುವ ಕಾರಣವೂ ಇರಬಹುದು. ಹೀಗಾಗಿಯೇ ನಾನು ಬದುಕನ್ನು ಮೀರಿ ಪಾತ್ರಗಳಲ್ಲೇ ಜೀವಿಸಿದೆ ಎಂದು ಹೇಳಿಕೊಂಡಿದ್ದಾರೆ’ ಎಂದು ಬರೆದಿದ್ದಾರೆ.
ಖಾಸಗಿ ಬದುಕಿನಲ್ಲೂ ಚಿತ್ರನಟಿಯರೊಂದಿಗೆ ಅವರ ಸಂಬಂಧಗಳು ಚರ್ಚೆಗೆ ಆಹಾರವಾಗಿದ್ದವು. 1957ರಲ್ಲಿ ‘ನಯಾ ದೌರ್’ ಚಿತ್ರ ನಿರ್ಮಾಣದ ಸಂದರ್ಭ ನಟಿ ಮಧುಬಾಲಾ ಅವರೊಂದಿಗಿನ ಸಂಬಂಧ ಕೊನೆಗೊಂಡಿರುವುದನ್ನು ನೆನಪಿಸಿಕೊಳ್ಳಬಹುದು.
ಇದಾದ ಬಳಿಕ ಹಾಲಿ ಪತ್ನಿ ಸಾಯಿರಾ ಭಾನು ಅವರನ್ನು ಪಾರ್ಟಿಯೊಂದರಲ್ಲಿ ಭೇಟಿಯಾದರು. ಅವರ ವಯಸ್ಸು 22, ದಿಲೀಪ್ ವಯಸ್ಸು 45. ಈ ನಡುವೆ 1981ರಲ್ಲಿ ಹೈದರಾಬಾದ್‌ನ ಅಸ್ಮಾ ಸಾಹಿಬಾ ಅವರನ್ನು ಮದುವೆಯಾದರು. ಈ ಬಾಂಧವ್ಯ ಉಳಿದದ್ದು ಕೇವಲ ಎರಡು ವರ್ಷ. ಆದರೆ ಸಾಯಿರಾ ಭಾನು ಕೊನೆವರೆಗೂ ಅವರ ಜತೆಗಿದ್ದರು.
ದಿಲೀಪ್ ಬದುಕಿನ ಆತ್ಮಕಥೆ ‘ದಿ ಸಬ್‌ಸ್ಟೆನ್ಸ್ ಆ್ಯಂಡ್ ದಿ ಶ್ಯಾಡೋ’ದ ಮುನ್ನುಡಿಯಲ್ಲಿ ಸಾಯಿರಾ ಭಾನು ಬರೆದದ್ದು ಹೀಗೆ, ‘ಜಾತ್ಯತೀತ ನಂಬಿಕೆಗಳು ದಿಲೀಪ್ ಅವರ ಹೃದಯದಿಂದ ನೇರವಾಗಿ ಮತ್ತು ಎಲ್ಲಾ ಧರ್ಮ, ಜಾತಿ, ಸಮುದಾಯಗಳು ಮತ್ತು ಧರ್ಮಗಳ ಮೇಲಿನ ಗೌರವದಿಂದ ಹುಟ್ಟಿಕೊಂಡಿವೆ’.
ಶಾಂತಿಯ ಪ್ರತಿನಿಧಿ
ಅದು 1990ರ ದಶಕ. ಮುಂಬೈ ಕೋಮು ಜ್ಞಾಲೆಯಿಂದ ಉರಿಯುತ್ತಿತ್ತು. ಆ ಹೊತ್ತಿನಲ್ಲಿ ಒಬ್ಬರು ಶಾಂತಿಯ ಪ್ರತಿನಿಧಿಯಾಗಿ ದಿಲೀಪ್ ಹೊರಹೊಮ್ಮಿದರು. 1993ರಲ್ಲಿ ಅವರು ತಮ್ಮ ಮನೆಯನ್ನು ಗಲಭೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕಮಾಂಡಿಂಗ್ ಸೆಂಟರ್ ಆಗಿ ಪರಿವರ್ತಿಸಿದ ಕಥೆಯೇ ದೊಡ್ಡದಿದೆ. 1991ರಲ್ಲಿ ಪದ್ಮಭೂಷಣ ಮತ್ತು 2015 ರಲ್ಲಿ ಪದ್ಮವಿಭೂಷಣ ಮತ್ತು 1994 ರಲ್ಲಿ ದಾದಾಸಾಹೇಬ್ ಫಾಲ್ಕೆ ಗೌರವ ಅವರಿಗೆ ಸಂದಿವೆ. ಅವರು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದರು. 1980ರಲ್ಲಿ ಬಾಂಬೆಯ ಷೆರಿಫ್ ಆಗಿ ಸೇವೆ ಸಲ್ಲಿಸಿದ್ದರು.
ವಿವಾದಗಳೂ ದಿಲೀಪ್ ಅವರನ್ನು ಆವರಿಸದೇ ಬಿಡಲಿಲ್ಲ. ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ನಿಶಾನ್ ಇ ಇಮ್ತಿಯಾಜ್ ಅವರಗೆ ನೀಡಲಾಯಿತು. ಮರುವರ್ಷವೇ ಕಾರ್ಗಿಲ್ ಯುದ್ಧ ಶುರುವಾಯಿತು. ಆಗ ಶಿವಸೇನೆಯ ಅಂದಿನ ಮುಖ್ಯಸ್ಥ ಬಾಳಾ ಠಾಕ್ರೆ ಅವರು ಪಾಕ್ ನೀಡಿದ ಪ್ರಶಸ್ತಿಯನ್ನು ಹಿಂದಿರುಗಿಸಬೇಕು ಎಂದು ದಿಲೀಪ್‌ಗೆ ಒತ್ತಾಯಿಸಿದರು. ಆದರೆ, ಅದಕ್ಕೆ ನಿರಾಕರಿಸಿದ ದಿಲೀಪ್ ಈ ವಿಷಯವನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗಮನಕ್ಕೆ ತಂದರು.ಕ್ರಮೇಣ ವಯಸ್ಸೂ ಮಾಗಿತ್ತು. ಸಾರ್ವಜನಿಕ ಬದುಕಿನಿಂದ ಕೊಂಚ ಹಿಂದೆ ಸರಿದರು. ಆದರೆ, ಜನರ ಮನಸ್ಸಿನಿಂದ ದೂರವಾಗಲಿಲ್ಲ. ಹೊಳೆಯುವ ನಕ್ಷತ್ರವಾಗಿಯೇ ಉಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.