ADVERTISEMENT

ಒಡೆಯನ ಕನವರಿಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 19:30 IST
Last Updated 5 ಡಿಸೆಂಬರ್ 2019, 19:30 IST
ದರ್ಶನ್
ದರ್ಶನ್   

ಅದು ‘ಒಡೆಯ’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ. ಸಂದೇಶ್‌ ಪ್ರೊಡಕ್ಷನ್‌ನಡಿ ಮೂರನೇ ಚಿತ್ರದಲ್ಲಿ ನಟಿಸುತ್ತಿರುವ ಖುಷಿ ದರ್ಶನ್‌ ಅವರ ಮೊಗದಲ್ಲಿತ್ತು. ಮೈಕ್‌ ಕೈಗೆತ್ತಿಕೊಂಡ ಅವರು ಇದೇ ಪ್ರೊಡಕ್ಷನ್‌ನಡಿ ‘ಪ್ರಿನ್ಸ್‌’, ‘ಐರಾವತ’ ಚಿತ್ರದ ಬಳಿಕ ‘ಒಡೆಯ’ದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ. ಜೊತೆಗೆ, ಪ್ರೊಡಕ್ಷನ್‌ನಿಂದ ಮತ್ತೊಂದು ಚಿತ್ರಕ್ಕೆ ಮುಂಗಡವೂ ಸಂದಾಯವಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಇದು ತಮಿಳಿನ ‘ವೀರಂ’ ಚಿತ್ರದ ರಿಮೇಕ್‌. ಈ ಚಿತ್ರಕ್ಕೆ ಮೊದಲಿಗೆ ‘ಒಡೆಯರ್‌’ ಎಂದು ಹೆಸರಿಡಲಾಗಿತ್ತು. ಈ ಶೀರ್ಷಿಕೆ ವಿರುದ್ಧ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ‘ಒಡೆಯ’ ಎಂದು ಬದಲಾಯಿಸಲಾಯಿತು. ‘ಯಾವುದೇ ವಿವಾದ ಬೇಡವೆಂದು ನಾವೇ ಟೈಟಲ್ ಬದಲಾಯಿಸಿದೆವು. ಇದು ನನ್ನ 52ನೇ ಚಿತ್ರ. ಟ್ರೇಲರ್‌ ಅದ್ಭುತವಾಗಿ ಬಂದಿದೆ’ ಎಂದರು ದರ್ಶನ್‌.

‘ಚಿತ್ರ ರಿಮೇಕ್‌ ಆದರೂ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ರಿಮೇಕ್‌ ಮತ್ತು ಸ್ವಮೇಕ್‌ ಚಿತ್ರದಲ್ಲಿ ನಟಿಸುವಾಗಲೂ ನಟನಿಗೆ ಕಷ್ಟ ಇದ್ದೇ ಇರುತ್ತದೆ’ ಎಂದು ನಕ್ಕರು.

ADVERTISEMENT
ಸನ ತಿಮ್ಮಯ್ಯ

‘ಯಜಮಾನ ಚಿತ್ರ ಮುಗಿಸಿಕೊಂಡು ಈ ಸಿನಿಮಾ ಶುರು ಮಾಡಿದೆ. ಇದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್‌ ತುಂಬಾ ಚೆನ್ನಾಗಿದೆ. ಸಹೋದರರ ಕಥೆಯ ಎಳೆ ಸೊಗಸಾಗಿದೆ’ ಎಂದರು.

ನಿರ್ದೇಶಕ ಎಂ.ಡಿ. ಶ್ರೀಧರ್‌, ‘ಈ ಚಿತ್ರದ ಶೂಟಿಂಗ್‌ ವೇಳೆ ದರ್ಶನ್‌ಗೆ ಅಪಘಾತವಾಯಿತು. ನಮ್ಮೆಲ್ಲರ ಊಹೆಯನ್ನು ಹುಸಿಗೊಳಿಸಿ ಶೀಘ್ರ ಗುಣಮುಖರಾಗಿ ಮತ್ತೆ ಸೆಟ್‌ಗೆ ಬಂದರು’ ಎಂದು ನೆನಪಿಸಿಕೊಂಡರು.

ಕೊಡಗಿನ ಬೆಡಗಿ ಸನ ತಿಮ್ಮಯ್ಯ ಇದರ ನಾಯಕಿ. ‘ಮೊದಲ ಚಿತ್ರದಲ್ಲಿಯೇ ದರ್ಶನ್‌ ಅವರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ನೀಡಿದೆ’ ಎಂದರು.

ಡಿಸೆಂಬರ್‌ 12ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸಂದೇಶ್‌ ನಾಗರಾಜ್‌ ಬಂಡವಾಳ ಹೂಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ. ಜಯಂತ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಚೇತನ್ ಕುಮಾರ್‌ ಗೀತ ಸಾಹಿತ್ಯ ರಚಿಸಿದ್ದಾರೆ. ಎ.ವಿ. ಕೃಷ್ಣಕುಮಾರ್‌ (ಕೆ.ಕೆ.) ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್‌ ಅವರ ಸಂಕಲನವಿದೆ. ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಜಯ್ ಅವರ ಸಾಹಸ ನಿರ್ದೇಶನವಿದೆ.

ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.